ಕನ್ನಡಪ್ರಭ ವಾರ್ತೆ ಇಂಡಿ

ವಿಶ್ವ ಪರಿಸರ ದಿನಾಚರಣೆಯಂದು ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರಿದರೆ ಸಾಲದು, ವರ್ಷದ 365 ದಿನವೂ ಪರಿಸರ ಪ್ರಜ್ಞೆ ಹೊಂದಬೇಕು. ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಪರಿಸರ ಉಳಿಸಿ ಬೆಳೆಸಬೇಕು ಎಂದು ಉಪ ತಹಶೀಲ್ದಾರ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ರಾವೂರ ಹೇಳಿದರು.

ತಾಲೂಕು ಆಡಳಿತ ವತಿಯಿಂದ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಮಾತನಾಡಿದರು.

ಪರಿಸರ ಸಂರಕ್ಷಣೆ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ. ಆದ್ದರಿಂದ ಪ್ರತಿ ಯೊಬ್ಬರೂ ಪರಿಸರ ಸಂರಕ್ಷಿಸಬೇಕು.

ಪರಿಸರವನ್ನು ನಾವು ಕೇವಲ ಹಸಿರಾಗಿ ಅಲ್ಲ, ಉಸುರಿಗಾಗಿ ಸಂರಕ್ಷಣೆ ಅಗತ್ಯ. ಶುದ್ಧ ಗಾಳಿಗಾಗಿ ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಒತ್ತು ನೀಡಬೇಕು. ವ್ಯಕ್ತಿ, ಸಮಾಜ ಹಾಗೂ ವಿಶ್ವ ಸಮೃದ್ದಿಯಾಗಿರಲು ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರುವುದು ಅವಶ್ಯಕವಾಗಿದೆ. ಮಾಲಿನ್ಯ ಮುಕ್ತ ಬದುಕಾಗಿ ಸಿಸಿಗಳನ್ನು ನೆಟ್ಟು ಬೆಳೆಸಬೇಕಿದೆ ಎಂದು ಹೇಳಿದರು.


ಪರಿಸರ ರಕ್ಷಣೆ ಕೇವಲ ಇಲಾಖೆಯ ಕೆಲಸವಲ್ಲ. ಅದು ಪ್ರತಿಯೊಬ್ಬರ ಕೆಲಸ ಮತ್ತು ಜವಾಬ್ದಾರಿ. ಶಾಲಾ- ಕಾಲೇಜು, ಉದ್ಯಾನ ಆವರಣ ಮತ್ತು ನಾಗರಿಕರು ತಮ್ಮತಮ್ಮ ಮನೆಗಳ ಮುಂದೆ ಸಸಿ ನೆಡುವ ಮೂಲಕ ಅವುಗಳನ್ನು ಸಂರಕ್ಷಿಸಿ ಪರಿಸರ ಬೆಳೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

1974ರಿಂದ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಮನುಷ್ಯನ ಜೀವನದಲ್ಲಿ ಪರಿಸರ ಎಷ್ಟು ಮುಖ್ಯ, ಅದನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.

ಕಂದಾಯ ನಿರೀಕ್ಷಕ ಎಚ್.ಎಚ್. ಗುನ್ನಾಪುರ ಹಾಗೂ ಅರಣ್ಯ ಅಧಿಕಾರಿಗಳು, ಕಾರ್ಯಾಲಯ ಸಿಬ್ಬಂದಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.