ಸಾರಾಂಶ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಮನುಷ್ಯ ಸುಖ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಪರಿಸರ ಸಂರಕ್ಷಣೆ ನಮ್ಮೆಲ್ಲರ ಧರ್ಮ ವಾಗಬೇಕು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.ರಂಭಾಪುರಿ ಪೀಠದ ಯಾತ್ರಿ ನಿವಾಸ ಹಿಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ತೆಂಗಿನ ಸಸಿ ನೆಟ್ಟು ಆಶೀರ್ವಚನ ನೀಡಿದರು. ಮಾನವ ಜನಾಂಗದ ಅಳಿವು ಉಳಿವು ಪರಿಸರ ಸಂರಕ್ಷಣೆಯಲ್ಲಿದೆ. ಮನುಷ್ಯನ ವೈಯಕ್ತಿಕ ಹಿತಾಸಕ್ತಿಗೆ ಕಾಡು ನಾಶವಾಗುತ್ತಿದೆ. ಪರಿಸರ ಸಂರಕ್ಷಣೆಯತ್ತ ಇರಬೇಕಾದ ಒಲವು ಆಸಕ್ತಿಯಿಲ್ಲದೆ ಜೀವ ಸಂಕುಲ ಬಹಳಷ್ಟು ನೋವುಗಳನ್ನು ಅನುಭವಿಸಬೇಕಾಗಿದೆ. ಜನಸಂಖ್ಯೆ ಹೆಚ್ಚಳ, ಕೃಷಿ ಮತ್ತು ಕೈಗಾರಿಕೆಗಳ ಸ್ಥಾಪನೆ ಉದ್ದೇಶದಿಂದ ಅರಣ್ಯ ಪ್ರದೇಶ ಕಡಿಮೆ ಯಾಗುತ್ತಿದೆ.ಅರಣ್ಯ ನಾಶದಿಂದ ಸಕಾಲಕ್ಕೆ ಮಳೆ ಬರುತ್ತಿಲ್ಲ. ಭೂಮಿ ತಾಪಮಾನ ಹೆಚ್ಚಾಗುತ್ತಿದೆ. ಊರಿಗೊಂದು ಶಾಲೆ ಮನೆಗೊಂದು ಮರ ನೆಡಬೇಕಾದ ಸದುದ್ದೇಶ ಎಲ್ಲರಲ್ಲೂ ಬೆಳೆಯಬೇಕಾಗಿದೆ. ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಬಗೆಗೆ ಹೆಚ್ಚಿನ ಅರಿವು ಮೂಡಿಸುವ ಅವಶ್ಯಕತೆಯಿದೆ. ಪರಿಸರಕ್ಕೆ ಮಾರಕವಾದ ರಾಸಾಯನಿಕ ಗೊಬ್ಬರದ ಬದಲಾಗಿ ನೈಸರ್ಗಿಕ ಗೊಬ್ಬರ ಬಳಕೆ ಮಾಡಬೇಕು. ಪ್ರತಿ ವರ್ಷ ಜೂ. 5ರಂದು ವಿಶ್ವ ಪರಿಸರ ದಿನ ಆಚರಿಸಿ ಕೈ ಬಿಡುವುದಲ್ಲ. ನಿರಂತರ ಪರಿಸರ ಸಂರಕ್ಷಣೆ ಬಗೆಗೆ ಗಮನ ಹರಿಸುವ ಅಗತ್ಯವಿದೆ ಎಂದರು. ಈ ಸಮಾರಂಭದಲ್ಲಿ ಗುಳೇದಗುಡ್ಡದ ಅಭಿನವ ಕಾಡಸಿದ್ಧೇಶ್ವರ ಶ್ರೀಗಳು, ದೋಟಿಹಾಳ ಚಂದ್ರ ಶೇಖರ ಶ್ರೀಗಳು, ಗುರುಕುಲ ಕುಲಪತಿ ಸಿದ್ಧಲಿಂಗಯ್ಯ ಶಾಸ್ತ್ರಿ, ಕುಮಾರಸ್ವಾಮಿ ಹಿರೇಮಠ, ಚನ್ನವೀರಯ್ಯ ಚಿಗರಿಮಠ, ಸಿಂದಗಿ ಹಿರೇಮಠದ ಶಾಂತವೀರಸ್ವಾಮಿ, ಗುಂಡೇನಹಳ್ಳಿ ಕುಮಾರ-ಶಿವಾನಂದ ಮುಂತಾದವರು ಉಪಸ್ಥಿತರಿದ್ದರು.೦೫ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ರಂಭಾಪುರಿ ಪೀಠದ ಯಾತ್ರಿ ನಿವಾಸದ ಬಳಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ತೆಂಗಿನ ಸಸಿ ನೆಟ್ಟರು. ಗುಳೇದಗುಡ್ಡದ ಅಭಿನವ ಕಾಡಸಿದ್ಧೇಶ್ವರ ಶ್ರೀಗಳು, ದೋಟಿಹಾಳ ಚಂದ್ರಶೇಖರ ಶ್ರೀಗಳು, ಗುರುಕುಲ ಕುಲಪತಿ ಸಿದ್ಧಲಿಂಗಯ್ಯ ಶಾಸ್ತಿç, ಕುಮಾರಸ್ವಾಮಿ ಹಿರೇಮಠ ಇದ್ದರು.