ಸಂಸ್ಕಾರ ಶಿಕ್ಷಣಕ್ಕಾಗಿ ಪ್ರತಿ ಮನೆ ಜಾಗೃತವಾಗಲಿ-ಡಾ.ಕೆ. ಗಣಪತಿ ಭಟ್‌

| Published : May 26 2024, 01:32 AM IST

ಸಂಸ್ಕಾರ ಶಿಕ್ಷಣಕ್ಕಾಗಿ ಪ್ರತಿ ಮನೆ ಜಾಗೃತವಾಗಲಿ-ಡಾ.ಕೆ. ಗಣಪತಿ ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾತ್ವಿಕ ಸಮಾಜ ನಿರ್ಮಾಣದ ಅನಿವಾರ್ಯತೆಯ ಹಂತದಲ್ಲಿರುವ ನಾವು ಈಗಲಾದರೂ ಎಚ್ಚೆತ್ತುಕೊಂಡು ಜಾಗೃತರಾಗದಿದ್ದರೆ ನಾಳೆಗೆ ಬಹು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ಕೆ. ಗಣಪತಿ ಭಟ್ ವಿಷಾದದಿಂದ ನುಡಿದರು.

ಹಾನಗಲ್ಲ: ಸಾತ್ವಿಕ ಸಮಾಜ ನಿರ್ಮಾಣದ ಅನಿವಾರ್ಯತೆಯ ಹಂತದಲ್ಲಿರುವ ನಾವು ಈಗಲಾದರೂ ಎಚ್ಚೆತ್ತುಕೊಂಡು ಜಾಗೃತರಾಗದಿದ್ದರೆ ನಾಳೆಗೆ ಬಹು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ಕೆ. ಗಣಪತಿ ಭಟ್ ವಿಷಾದದಿಂದ ನುಡಿದರು.

ಶನಿವಾರ ಹಾನಗಲ್ಲ ತಾಲೂಕಿನ ತಿಳವಳ್ಳಿಯ ಹೂವಮ್ಮ ಚಂಚಿ ಪ್ರತಿಷ್ಠಾನದ ಅಕ್ಷರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ೧೦ ದಿನಗಳ ರಾಜ್ಯಮಟ್ಟದ ೧೫ನೇ ನಾದಮಯ ಸಂಸ್ಕಾರ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾದಾನಕ್ಕೆ ದೊಡ್ಡ ಬೆಲೆ ಇದೆ. ಜ್ಞಾನ ದಾಸೋಹಕ್ಕೆ ಎಲ್ಲ ಕಾಲದಲ್ಲಿಯೂ ಸಂಘ-ಸಂಸ್ಥೆಗಳು ಶ್ರಮಿಸಿವೆ. ಈಗ ಎಲ್ಲಕ್ಕೂ ಮೊದಲಾಗಿ ಸಂಸ್ಕಾರ ಶಿಕ್ಷಣ ಬೇಕಾಗಿದೆ. ಇದಕ್ಕಾಗಿ ಪ್ರತಿ ಮನೆಯೂ ಜಾಗೃತವಾಗಬೇಕು. ಇಂತಹ ಸಂಸ್ಕಾರ ಶಿಬಿರಗಳಿಗಾಗಿ ಎಲ್ಲೆಡೆ ಬೇಡಿಕೆ ಇದೆ. ಆದರೆ ಸಂಯೋಜಿಸುವ ಇಚ್ಛಾಶಕ್ತಿಯ ಸಂಘಟನೆಗಳು ಬೇಕಾಗಿವೆ. ಶಿಬಿರ ಸಂಯೋಜನೆಗೆ ತರಬೇತಿ ಪಡೆದ ಮಾರ್ಗದರ್ಶಕರು, ಸಂಪನ್ಮೂಲ ವ್ಯಕ್ತಿಗಳು ಬೇಕು. ಈಗ ಎಲ್ಲೆಡೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಅಪೇಕ್ಷೆ ಪಾಲಕರದ್ದು ಕೂಡ ಆಗಿದೆ ಎಂದರು.

ಹೂವಮ್ಮ ಚೆಂಚಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪುಟ್ಟರಾಜ ಚಂಚಿ ಮಾತನಾಡಿ, ಹತ್ತು ದಿನಗಳ ಶಿಬಿರದಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು ಸಾಧ್ಯವಾಗಿದೆ. ಭಾರತೀಯ ಸಂಸ್ಕೃತಿಯ ನೆಲೆಯಲ್ಲಿ ಇರುವ ಶಕ್ತಿಯ ಅರಿವು ಮಕ್ಕಳಿಗೆ ಹಾಗೂ ಪಾಲಕರಿಗೆ ಆಗಿದೆ. ಸಾಂಸ್ಕೃತಿಕ ಶಿಕ್ಷಣದ ಅಗತ್ಯದ ಅರಿವು ಈಗ ಸಮಾಜಕ್ಕೆ ಆಗಿದೆ. ಅದನ್ನು ಸಾಮಾಜಿಕವಾಗಿ ನೀಡುವ ಯತ್ನ ನಡೆಯಬೇಕು. ಈಗಿನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಸಾಧ್ಯವಾದರೆ ನಾಳಿನ ಸಾಮಾಜಿಕ ವ್ಯವಸ್ಥೆ ಸರಿಪಡಿಸಲು ಸಾಧ್ಯ ಎಂದರು. ಅಕ್ಷರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಗಿರೀಶ ಪುರಾಣಿಕಮಠ ಮಾತನಾಡಿ, ಮನುಷ್ಯ ಜೀವಿಗೆ ಸಂಸ್ಕಾರವೇ ಅತ್ಯಂತ ಮುಖ್ಯವಾದುದು. ಮನುಷ್ಯ ಸಮಾಜ ಜೀವಿ. ಅನಾದಿ ಕಾಲದಿಂದಲೂ ಮಾನವ ಸಂಘ ಜೀವಿ. ಎಲ್ಲರಿಗೂ ಹಿತ ಬಯಸಿ ಬದುಕಬೇಕಾಗಿದೆ. ಸ್ವಾರ್ಥ ಸಂಕುಚಿತತೆಗಳಿಂದಾಗಿ ಸಾಮಾಜಿಕ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ. ಈಗಲಾದರೂ ಸಾಂಸ್ಕೃತಿಕ ಎಚ್ಚರ ಬೇಕಾಗಿದೆ ಎಂದರು.

ವಕೀಲ ಮನೋಹರ ಶಿವಣಗಿ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ಸುವರ್ಣ ದೇಸಾಯಿ, ರತ್ನಾ ಬೈರಣ್ಣನವರ, ವೈಷ್ಣವಿ ಹಾನಗಲ್ಲ, ನಿವೇದಿತಾ ಚಂಚಿ, ರಮೇಶ ಪೂಜಾರ ಉಪಸ್ಥಿತರಿದ್ದರು.