ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ನಾವಾಡುವ ಮಾತೆಲ್ಲವೂ ದೇವಾರ್ಚನೆಯಾದರೆ ಈಗಿನ ಜಗತ್ತಿನ ದೇಶ, ದೇಶಗಳ ಹಾಗೂ ಪ್ರಜೆಗಳ ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥರು ಸದಾಶಯ ವ್ಯಕ್ತಪಡಿಸಿದರು.ಕಳೆದ 3 ದಿನದಿಂದ ಕಾಗಿಣಾ ನದಿ ತೀರದಲ್ಲಿರುವ ಮಳಖೇಡ ಕ್ಷೇತ್ರದಲ್ಲಿ ಟೀಕಾಕೃತ್ಪಾದರ ಮೂಲ ಬೃಂದಾವನ ಸನ್ನಿಧಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ನಡೆಯುತ್ತಿರುವ ಶ್ರೀಮದ್ಭಾಗವತ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.
ಈ ಸಂಸಾರ ಪ್ರಪಂಚದಲ್ಲಿದ್ದಾಗಲೂ ನಮ್ಮ ಸಮಯ, ಶಕ್ತಿ, ಬುದ್ಧಿ, ಜ್ಞಾಪಕಶಕ್ತಿ ವಿದ್ಯಾಧ್ಯಯನ ,ವ್ಯವಹಾರ ಸಾಫಲ್ಯ, ಈ ವಿಷಯಗಳಲ್ಲಿ ಸಾರ್ಥಕ್ಯ , ಪೂರ್ಣತೆ, ಯಶಸ್ಸುಗಳನ್ನು ತಂದುಕೊಡುವುದಲ್ಲದೆ ಮನೋರೋಗ, ದೇಹರೋಗಗಳಿಂದಲೂ ಕಾಪಾಡುತ್ತದೆ. ಈ ರೀತಿಯ ಏಕಾಗ್ರತೆ, ಮನೋನಿಗ್ರಹ ಹೇಗೆ ಸಾಧ್ಯ? ಇದಕ್ಕೆ ಪರಿಹಾರವನ್ನೂ ಭಾಗವತ ತಿಳಿಸಿದೆ. ಲೋಕ ಸಂಬಂಧಿಯಾಗಿ ಇರುವ ವಿಷಯಗಳ ಮಾತು ಆಡದೆ ವ್ಯವಹಾರ ಸಾಧ್ಯವಿಲ್ಲ. ಆ ಸಂದರ್ಭ ಸನ್ನಿವೇಶಗಳಲ್ಲೂ ಆ ಎಲ್ಲಾ ಶಬ್ದಗಳಲ್ಲೂ ಭಗವಂತನ ಸಂಬಂಧ, ಆ ಶಬ್ದ, ಪದಗಳಿಂದ ಭಗವಂತನ ಮಾಹಾತ್ಮೆಯ ಚಿಂತನ ಲೋಕ ವ್ಯವಹಾರ ಜೊತೆಯಲ್ಲೇ ಆದರೆ ಆಗ ಎಲ್ಲಾ ಮಾತುಗಳೂ ಆ ದೇವರ ಸ್ತುತಿಯೇ ಆಗುತ್ತದೆ ಎಂದರು.ನಾವಾಡುವ ಎಲ್ಲಾ ಲೋಕ ವ್ಯವಹಾರಿಕ ಅನಂತ ಶಬ್ದ, ಪದಗಳೂ ಆ ದೇವರನ್ನೇ ತಿಳಿಸುತ್ತವೆ. ಹೀಗೆ ಲೋಕ ವ್ಯವಹಾರದ ಜೊತೆಯಲ್ಲಿ ಈ ಚಿಂತನೆ ನಡೆದಾಗ ಭಗವಂತನಲ್ಲಿ ಏಕಾಗ್ರತೆಯಿಂದ ಭಕ್ತಿ ಸಾಧ್ಯ. ಜೊತೆಗೆ ಮೇಲೆ ತಿಳಿಸಿದ ಲೋಕಕ್ಕೆ ಸಂಬಂಧಿಸಿದ ಲಾಭವೂ ಇದೆ. ಇದನ್ನು ಭಾಗವತ ‘ಶಬ್ದಸ್ಯ ಹಿ ಬ್ರಹ್ಮಣ ಏಷ ಪಂಥಾಃ’ ಎಂಬಲ್ಲಿ ತಿಳಿಸಿದೆ ಎಂದರು.
ಈ ಕ್ರಮದ ಅನುಷ್ಠಾನದಿಂದ ಶ್ರೀಮದ್ಭಾಗವತದಲ್ಲಿ ಬರುವ ಪ್ರಹ್ಲಾದ, ನಾರದ, ಅಂಬರೀಶ, ಧ್ರುವ, ಮೊದಲಾದ ಮಹಾನುಭಾವರೂ, ನಮ್ಮ ನಾಡಿನ ಪುರಂದರದಾಸರು ಮೊದಲಾದ ಅನೇಕ ದಾಸರೂ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ. ನಮ್ಮ ಮಾತೂ ಭಗವತ್ಸಂಬಂಧಿ ಆಗಲಿ. ಮಾತು ವ್ಯರ್ಥವಾಗದಿರಲಿ. ಮಿತವಾಗಿರಲಿ ಎಂಬ ಭಾಗವತದ ಸಂದೇಶವನ್ನು ಸತ್ಯಾತ್ಮತೀರ್ಥರು ನೆರೆದ ಸಾವಿರಾರು ಭಕ್ತರನ್ನು ಉದ್ದೇಶಿಸಿ ವಿವರಿಸಿದರು.ಅರಿವಿರದ ಭಯಕ್ಕೆ ಅಂಜಬೇಡಿ: ‘ವರ್ತಮಾನ ಕಾಲದ ಸಮಸ್ಯೆ, ಭಯಗಳು ಇರಲಿ. ಆದರೆ ನಮಗೆ ಗೊತ್ತೇ ಇರದ ಮುಂದೆ ಭವಿಷ್ಯತ್ ಕಾಲೀನದಲ್ಲಿ ಆಗಬಹುದಾದ ಭಯಗಳಿಂದಲೂ ದೇವರು ರಕ್ಷಿಸುತ್ತಾನೆ. ಆದರೆ, ಆ ದೇವನಲ್ಲಿ ವಿಶ್ವಾಸವಿರಬೇಕಷ್ಟೆ’ ಎಂದು ಸಪ್ತಾಹಾದ 2ನೇ ದಿನದ ಉಪನ್ಯಾಸದಲ್ಲಿ ಶ್ರೀಗಳು ಹೇಳಿದರು.
ನಮ್ಮ ಜೀವನದಲ್ಲಿ ಹಿಂದೆ ನಾವೇನು ಪಾಪ ಕರ್ಮ ಮಾಡಿದ್ದೇವೆಯೋ ಗೊತ್ತಿಲ್ಲ. ಅದಕ್ಕೆ ಶಿಕ್ಷೆಯಾಗಿ ಮುಂದೆ ಯಾವ ಕಾಲದಲ್ಲಿ ಯಾವ ದುಃಖ ಗಂಡಾತರಗಳು ಕಾದಿದೆಯೋ ಗೊತ್ತಿಲ್ಲ. ಆದರೆ ಆ ಭಗವಂತನು ‘ತ್ರ್ಯಧೀಶಃ’. ನಾವು ಅವನಲ್ಲಿ ಭಕ್ತಿಯಿಂದ ವಿಶ್ವಾಸ ಮಾಡಿದರೆ ಮೂರೂ ಕಾಲಗಳಿಗೂ ನಿಯಾಮಕನಾದ ಅವನು ‘ಇಂದೇನು’ ‘ಮುಂದೇನು’ ‘ಹಿಂದೇನು’ ಎಲ್ಲವನ್ನೂ ತಿಳಿದವ ಮಾತ್ರವಲ್ಲ. ಅದಕ್ಕೇನು ಉಪಾಯ ಅನ್ನುವುದನ್ನೂ ಶಾಸ್ತ್ರದಲ್ಲಿ ಪರಮಾತ್ಮ ತಿಳಿಸಿಕೊಟ್ಟಿದ್ದಾನೆ. ಅವನ ಸ್ತೋತ್ರ, ಜಪ, ಪಠಣ, ಪಾರಾಯಣ, ಮಹಾತ್ಮರ ಸೇವೆ ಇವೆಲ್ಲವನ್ನೂ ಮಾಡಿದರೆ ಮೂರೂ ಕಾಲದ ಆಪತ್ತನ್ನು ಪರಿಹಾರ ಮಾಡುತ್ತಾನೆಂದರು.ಜೀವನದಲ್ಲಿ ಮನುಷ್ಯಕ್ಕಾಗಿ ಹಣ ಕೂಡಿಡುವಂತೆ ಭವಿಷ್ಯದಲ್ಲಿನ ತನ್ನ,ತನ್ನವರ ನೆಮ್ಮದಿಗಾಗಿ ಪುಣ್ಯವನ್ನು ಸಂಗ್ರಹಿಸಬೇಕು. ನಾವೂ ಭಗವಂತನಲ್ಲಿ ಧೃಡವಾದ ವಿಶ್ವಾಸಮಾಡಿ ರಕ್ಷಣೆಯ ಭಾರ ಅವನಿಗೇ ಬಿಡೋಣ ಎಂದು ಶ್ರೀಮದ್ಭಾಗವತ ಸಂದೇಶನೀಡಿದೆ ಎಂದು ಶ್ರೀಪಾದಂಗಳವರು ಭಕ್ತ ಸಮೂಹವನ್ನುದ್ದೇಶಿಸಿ ಅನುಗ್ರಹಿಸಿದರು.
ಕಳೆದ ಜೂ.28ರಿಂದ ಶುರುವಾಗಿರುವ ಭಾಗವತ್ ಸಪ್ತಾಹ ಜು.4ರ ವರೆಗೂ ನಡೆಯಲಿದೆ. ನಿತ್ಯ ಬೆಳಗ್ಗೆ ನ್ಯಾಯಸುಧಾ ಪಾಠ, 9 ಗಂಟೆಗೆ ಮುದ್ರೆ, ಪಂಡಿತರ ಭಾಗವತ ಪ್ರವಚನ ನಂತರ ಮೂಲ ರಾಮ ದೇವರ ಪೂಜೆ, 11.30ಕ್ಕೆ ಮಹಾಸ್ವಾಮಿಗಳವರಿಂದ ಭಾಗವತ ಸಂದೇಶದ ನಂತರ ಸಪ್ತಾಹದ ಪ್ರತಿದಿನ ಮ.1ಕ್ಕೆ ತೀರ್ಥ ಪ್ರಸಾದವಿರತ್ತದೆ. ಎಲ್ಲಾ ಕಾರ್ಯಕ್ರಮಕ್ಕೆ ಭಗವದ್ ಭಕ್ತರು ಬಂದು ಗುರುಗಳ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಮಳಖೇಡ ಉತ್ತರಾದಿ ಮಠ ವ್ಯವಸ್ಥಾಪಕರಾದ ಪಂ. ವೆಂಕಣ್ಣಾಚಾರ್ ಪೂಜಾರಿ ಕೋರಿದ್ದಾರೆ.