ಪ್ರತಿಯೊಬ್ಬರೂ ನಿತ್ಯ ಸತ್ಸಂಗದಿಂದ ಸಮಾಜದ ಹಿತಚಿಂತನೆ ಮಾಡಲಿ: ಗಂಗಾಧರ ಹೆಗಡೆ

| Published : Oct 26 2024, 01:11 AM IST

ಪ್ರತಿಯೊಬ್ಬರೂ ನಿತ್ಯ ಸತ್ಸಂಗದಿಂದ ಸಮಾಜದ ಹಿತಚಿಂತನೆ ಮಾಡಲಿ: ಗಂಗಾಧರ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನಗಳಲ್ಲಿ ಸ್ಥಿತಿ ಬದಲಾಗುತ್ತಿದೆ. ಹೀಗಾಗಿಯೇ ಪರಿಷತ್ತು ಸತ್ಸಂಗ, ಶಾಖೆಯ ಮೂಲಕ ವ್ಯಕ್ತಿ ನಿರ್ಮಾಣ ಮಾಡುತ್ತಿದೆ. ಪ್ರತಿಯೊಬ್ಬರೂ ದಿನಕ್ಕೆ ಒಂದು ತಾಸಾದರೂ ಸತ್ಸಂಗದ ಮೂಲಕ ಸಮಾಜದ ಹಿತಚಿಂತನೆ ಮಾಡಬೇಕಿದೆ. ಪ್ರತಿಯೊಂದು ಮನೆಯೂ ಆದರ್ಶ ಹಿಂದು ಮನೆ ಮಾಡಬೇಕಿದೆ.

ಕುಮಟಾ: ಭಾರತವು ಸಾವಿರಾರು ವರ್ಷಗಳ ದಾಸ್ಯ, ದಾಳಿಯಿಂದ ಕಂಗೆಟ್ಟರೂ ನಮ್ಮ ಸಂಸ್ಕಾರದ ಬಲದಲ್ಲಿ ಅದನ್ನೆಲ್ಲಾ ಪುನಃ ಗೆದ್ದಿದ್ದೇವೆ. ಸಮಾಜದ ಅಪೇಕ್ಷೆಯ ವೇಗಕ್ಕೆ ತಕ್ಕಂತೆ ಹಿಂದು ಸಂಘಟನೆಯೂ ಬೆಳೆದಿದೆ. ಹಿಂದು ಜೀವನ ಮೌಲ್ಯಗಳ ರಕ್ಷಣೆ, ಸಂವರ್ಧನೆಯೇ ಮುಖ್ಯ ಗುರಿಯಾಗಿದೆ ಎಂದು ವಿಶ್ವ ಹಿಂದು ಪರಿಷತ್ ಉ.ಕ. ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ ತಿಳಿಸಿದರು.ಪಟ್ಟಣದ ಕಡ್ಲೆ ಓಣಿಯಲ್ಲಿ ಶುಕ್ರವಾರ ವಿಶ್ವ ಹಿಂದು ಪರಿಷತ್ ಕುಮಟಾ ಪ್ರಖಂಡದ ನೂತನ ಕಾರ್ಯಾಲಯ ರಾಯಧಾಮದ ಉದ್ಘಾಟನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು. ವಿಹಿಪಂ ೬೦ ವರ್ಷದ ಹಿಂದೆ ಮುಂಬೈಯ ಸಾಂದೀಪನಿ ಆಶ್ರಮದಲ್ಲಿ ಪ್ರಮುಖ ಸಾಧುಸಂತರ ಉಪಸ್ಥಿತಿಯಲ್ಲಿ ಆರಂಭವಾಯಿತು. ಅಂದು ಮತಾಂತರ, ಗೋಹತ್ಯೆ ಮುಂತಾದ ಸಂಗತಿಗಳ ನಡುವೆ ಹಿಂದು ಜೀವನ ಮೌಲ್ಯಗಳ ರಕ್ಷಣೆ, ಸಂವರ್ಧನೆಯ ಉದ್ದೇಶದಿಂದ ಸ್ಥಾಪನೆಗೊಂಡಿತು ಎಂದರು.

ಅನ್ಯರ ದಾಳಿ, ಆಳ್ವಿಕೆಯಿಂದ ಹೊರಬಂದರೂ ಲಾರ್ಡ್‌ ಮೆಕಾಲೆಯ ಚಿಂತನೆಗಳು ಇಂದಿಗೂ ಭಾರತವನ್ನು ಕಾಡುತ್ತಿದೆ. ನಮ್ಮ ಸಮಾಜ, ದೇಶದ ಬಗ್ಗೆ ಶ್ರದ್ಧೆ, ಭಕ್ತಿ, ಗೌರವವನ್ನು ಬೆಳೆಸುವ ಪದ್ಧತಿ ಇಲ್ಲದಂತಾಗಿದೆ. ತಾಯಿ ಮಡಿಲು, ಶಾಲೆ, ಗುಡಿಗಳಲ್ಲಿ ಸಿಗುತ್ತಿದ್ದ ಸಂಸ್ಕಾರ ಸಿಗದಂತಾಗಿದೆ. ನಾವು ಹೊರಗಿನಿಂದ ಬಂದವರು, ನಮ್ಮದು ಜನಾಂಗವೇ ಅಲ್ಲ, ನಾವು ಜಾತಿಗಳಲ್ಲಿ ಒಡೆದುಹೋಗಿದ್ದೇವೆ. ನಾವು ಹಿಂದುಗಳೇ ಅಲ್ಲ ಎಂಬ ಬೋಧನೆ ಶಾಲೆಗಳಲ್ಲಾಗುತ್ತಿದೆ ಎಂದರು.

ದೇವಸ್ಥಾನಗಳಲ್ಲಿ ಸ್ಥಿತಿ ಬದಲಾಗುತ್ತಿದೆ. ಹೀಗಾಗಿಯೇ ಪರಿಷತ್ತು ಸತ್ಸಂಗ, ಶಾಖೆಯ ಮೂಲಕ ವ್ಯಕ್ತಿ ನಿರ್ಮಾಣ ಮಾಡುತ್ತಿದೆ. ಪ್ರತಿಯೊಬ್ಬರೂ ದಿನಕ್ಕೆ ಒಂದು ತಾಸಾದರೂ ಸತ್ಸಂಗದ ಮೂಲಕ ಸಮಾಜದ ಹಿತಚಿಂತನೆ ಮಾಡಬೇಕಿದೆ. ಪ್ರತಿಯೊಂದು ಮನೆಯೂ ಆದರ್ಶ ಹಿಂದು ಮನೆ ಮಾಡಬೇಕಿದೆ ಎಂದರು. ಕ್ಷೇತ್ರೀಯ ಸತ್ಸಂಗ ಪ್ರಮುಖ ಮಹಾಬಲೇಶ್ವರ ಹೆಗಡೆ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ಲಕ್ಷ್ಮೀ ನರಸಿಂಹ ಸೇವಾ ಟ್ರಸ್ಟಿನ ಅಧ್ಯಕ್ಷ ಶ್ರೀಧರ ಮೋಹನ ನಾಯಕ, ಶಾಸಕ ದಿನಕರ ಶೆಟ್ಟಿ, ಡಾ. ಎಸ್.ವಿ. ಶೆಟ್ಟಿ, ಪ್ರಖಂಡದ ಅಧ್ಯಕ್ಷ ರೋಹಿದಾಸ ಟಿ. ಗಾವಡಿ, ಸತ್ಸಂಗ ಪ್ರಮುಖ ರೋಹಿದಾಸ ವೆರ್ಣೇಕರ ಇತರರು ಉಪಸ್ಥಿತರಿದ್ದರು.

ನೂತನ ಕಟ್ಟಡದಲ್ಲಿ ಮಹಾಗಣಪತಿ ಪೂಜೆ, ನವಗ್ರಹಪೂರ್ವಕ ವಾಸ್ತುಪೂಜೆ, ಶ್ರೀರಾಮಚಂದ್ರ ಪೂಜೆಯ ಬಳಿಕ ಸಭಾಕಾರ್ಯಕ್ರಮದಲ್ಲಿ ಸುರೇಶ ಭೋವಿ ಪ್ರಾರ್ಥಿಸಿದರು. ಸಂತೋಷ ನಾಯ್ಕ ಗಣ್ಯರನ್ನು ಪರಿಚಯಿಸಿ, ಸ್ವಾಗತಿಸಿದರು. ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಹೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ತಿಮ್ಮಪ್ಪ ಮುಕ್ರಿ ವಂದಿಸಿದರು.