ಸಾರಾಂಶ
ಯಲ್ಲಾಪುರ: ನಿಮ್ಮ ಸಾಧನೆಯಲ್ಲಿ ಸಂಸ್ಥೆಯ ಯಶಸ್ಸಿದೆ ಎಂಬ ಭಾವನೆಯನ್ನು ವಿದ್ಯಾರ್ಥಿಗಳು ಮೂಡಿಸಿಕೊಂಡು ಸಾಧಕರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕಾಯ್ದಿರಿಸಿ ಉತ್ತಮ ವಿದ್ಯಾಭ್ಯಾಸದೊಂದಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ದೇಶ ಮೊದಲು ಎಂಬ ಭಾವನೆಯನ್ನು ಮೂಡಿಸಿಕೊಳ್ಳಿ. ಯಾರಲ್ಲೂ ಶಕ್ತಿಯ ಕೊರತೆ ಇಲ್ಲ. ಅದು ಪ್ರಕಟಗೊಳ್ಳುವ ರೀತಿಯಲ್ಲಿ ಅವಕಾಶ ಕಲ್ಪಿಸಿಕೊಳ್ಳಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಜ. ೬ರಂದು ಪಟ್ಟಣದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ, ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ದೇಶದ ಸಮಸ್ಯೆಗಳಿಗೆ ನಾವೇ ಉತ್ತರ ಕೊಡಲು ಸಾಧ್ಯವಾಗುವುದು ದೇಶ ಮೊದಲು ಎಂಬ ಭಾವನೆಯಿಂದ. ಜಾತಿ, ಧರ್ಮ, ಭಾಷೆ ನೀರು, ಪ್ರದೇಶದ ಹೆಸರಿನಲ್ಲಿ ಮನಸ್ಸುಗಳನ್ನು ಒಡೆಯುವ ಕೆಲಸವನ್ನು ವಿದ್ರೋಹಿ ಮನಸ್ಥಿತಿಯವರು ಮಾಡುತ್ತಾರೆ. ನಮ್ಮಲ್ಲಿ ಶಿಸ್ತು, ಬದ್ಧತೆಯ ಪರಿಶ್ರಮದ ಭಾವನೆ ಬೆಳೆಸಿಕೊಳ್ಳದಿದ್ದರೆ ಉಚಿತವಾಗಿ ಯಾರೇನು ನೀಡುತ್ತಾರೆ ಎಂದು ನೋಡುವಂತಾಗುತ್ತದೆ. ಸಂಸ್ಕಾರಭರಿತ ಜೀವನ ಸಾಗಿಸುವ ಮೂಲಕ ದೇಶ ವಿಶ್ವಗುರುವಾಗುವಲ್ಲಿ ಯುವ ಸಮುದಾಯ ಶ್ರಮಿಸಬೇಕು ಎಂದರು.ವ್ಯಕ್ತಿತ್ವ ವಿಕಸನ ಉಪನ್ಯಾಸಕ ವಿ.ಎಂ. ಭಟ್ಟ ಮಾತನಾಡಿ, ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್ ಎಂದು ಕರೆದಿದ್ದಾರೆ. ಅದೇ ರೀತಿ ಗೋಲ್ಡನ್ ಲೈಫ್ ಡೇಂಜರಸ್ ಲೈಫ್ ಕೂಡ ಹೌದು. ಎಲ್ಲಿ ಗೋಲ್ಡ್ ಇದೆಯೋ ಅಲ್ಲಿ ಅಪಾಯವೂ ಇದೆ. ಸ್ವಲ್ಪ ಕಾಲು ಜಾರಿದರೂ ಜೀವನವೇ ನಾಶವಾಗುತ್ತದೆ. ಹೀಗಾಗಿ ವಿದ್ಯಾರ್ಥಿ ಜೀವನವನ್ನು ಎಚ್ಚರಿಕೆಯಿಂದ ಕಳೆಯಿರಿ ಎಂದರು.ಸಾಧನೆ ಮಾಡಿದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಬಾಲಕೃಷ್ಣ ನಾಯಕ, ಶ್ರುತಿ ಬೋಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಬಾಲಕೃಷ್ಣ ನಾಯಕ ಮಾತನಾಡಿದರು.ಸನ್ಮಾನಿತ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಶ್ರುತಿ ಬೋಡೆ ಮಾತನಾಡಿ, ನಾವೆಲ್ಲ ಹಣತೆಯೊಳಗಿನ ಬತ್ತಿಗಳು. ಬತ್ತಿಗೆ ಹಚ್ಚಿದ ದೀಪ ಎಷ್ಟು ಬೆಳಕು ನೀಡುತ್ತದೋ ಅಷ್ಟು ಕತ್ತಲು ಕಳೆಯುತ್ತದೆ. ಹಾಗೆಯೇ ನಾವು ಉತ್ತಮ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ ಸಮಾಜವನ್ನು ಬೆಳಗುವ ದೀಪವಾಗಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ರವಿಕುಮಾರ ಶಾನಭಾಗ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಉದ್ಯಮಿ ಆನಂದ ಭಟ್ಟ, ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಪ್ರಸಾದ ಭಟ್ಟ, ನಿರ್ದೇಶಕ ಕೃಷ್ಣಾನಂದ ದೇವನಳ್ಳಿ, ತಹಸೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ವೇದಿಕೆಯಲ್ಲಿದ್ದರು. ಶ್ರೀರಕ್ಷಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಂಶುಪಾಲ ಆನಂದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿನೋದ ಭಟ್ಟ ನಿರ್ವಹಿಸಿದರು. ಮುಖ್ಯಾಧ್ಯಾಪಕ ಎನ್.ಎಸ್. ಭಟ್ಟ ವಂದಿಸಿದರು.ಅಂಬಿಗರ ಚೌಡಯ್ಯ ಜಯಂತಿ ಪ್ರಯುಕ್ತ ಪೂರ್ವಭಾವಿ ಸಭೆಶಿರಸಿ: ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದ ಆಚರಣೆ ಕುರಿತು ಪೂರ್ವಬಾವಿ ಸಭೆಯನ್ನು ಜ. ೧೧ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಐದು ರಸ್ತೆ ಸರ್ಕಲ್ ಹತ್ತಿರ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿ ಇರುವ ಭಾರತ್ ಸೇವಾದಳ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.