ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜನರಿಗೆ ನೆರವಾಗಲು ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಮತ್ತು ಸಮಿತಿ ಪದಾಧಿಕಾರಿಗಳು ಶ್ರಮಿಸಬೇಕು. ಒಬ್ಬ ಫಲಾನುಭವಿಯೂ ಯೋಜನೆಯಿಂದ ವಂಚಿತವಾಗಬಾರದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಜಿಲ್ಲಾಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ತಿಳಿಸಿದರು.ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಕಚೇರಿ ಉದ್ಘಾಟಿಸಿ, ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಈ ಯೋಜನೆಯ ಪ್ರಯೋಜನ ತಲುಪಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ ಈ ಕಚೇರಿ ಆರಂಭಿಸಿದ್ದೇವೆ. ಗ್ಯಾರಂಟಿಗಳಿಗೆ ಸಂಬಂಧಿಸಿ ಯಾವುದೇ ಗೊಂದಲವಿದ್ದರೆ ಜನರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಕಚೇರಿಗೆ ಸಂಪರ್ಕಿಸಬಹುದು ಎಂದರು.
ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಮತ್ತು ಯುವ ನಿಧಿ ಯೋಜನೆಯಲ್ಲಿ ಅರ್ಹರಾಗಿದ್ದರೂ ವಂಚಿತ ರಾಗಿರುವವರನ್ನು ಗುರುತಿಸಿ ಅವರಿಗೆ ಯೋಜನೆಯ ಫಲವನ್ನು ನೀಡುವುದೇ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.ಚಿಕ್ಕಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಈಗ ಮಾತ್ರವಲ್ಲ, ಈ ಹಿಂದೆಯೂ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ನೆರವಾಗಲು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಒಂದೂವರೆ ವರ್ಷವಾಗಿದೆ. ಇವುಗಳಿಗೆ ಸಂಬಂಧಿಸಿ ಯಾವುದೇ ದೂರುಗಳಿದ್ದರೆ, ಜಿಲ್ಲಾ ಮತ್ತು ತಾಲೂಕು ಹಂತದ ಅಧಿಕಾರಿಗಳು ಸ್ಪಂದಿಸಬೇಕು. ಸಮಿತಿಯವರು ತಾಲೂಕು ಹಂತದಲ್ಲಿ ಜನರೊಂದಿಗೆ ಸಂವಾದ ನಡೆಸಿ, ಗ್ಯಾರಂಟಿ ಯೋಜನೆಯ ಲಾಭವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಕ್ರಮ ವಹಿಸಬೇಕು, ಪ್ರತಿಯೊಬ್ಬರೂ ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಹೊಸ ಕ್ರಾಂತಿ ಪ್ರಾರಂಭವಾಗಿದೆ. ಬೇರೆ ಬೇರೆ ರಾಜ್ಯದವರು ಕೂಡ ಇಂದು ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿವೆ. ಇದು ರಾಜ್ಯದಲ್ಲಿ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಉಪಯುಕ್ತತೆ ಮತ್ತು ಮಹತ್ವ ತಿಳಿಸುತ್ತಿದೆ. ಅನೇಕ ಟೀಕೆ, ಟಿಪ್ಪಣಿಗಳ ನಡುವೆಯೂ ರಾಜ್ಯ ಸರ್ಕಾರ ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇಂದು ಈ ಯೋಜನೆಗಳು ಜನರಿಗೆ ಆರ್ಥಿಕ ಶಕ್ತಿ ತುಂಬಿವೆ. ಜಿಲ್ಲೆಯ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿವೆ ಎಂದರು.ಈ ವೇಳೆ ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್. ಉಪಕಾರ್ಯದರ್ಶಿ ಅತೀಕ್ ಪಾಷ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಜಾತವಾರ ರಾಮಕೃಷ್ಣಪ್ಪ, ಆದಿರೆಡ್ಡಿ, ಸ್ಕೂಲ್ ಸುಬ್ಬಾರೆಡ್ಡಿ, ಸದಸ್ಯರಾದ ವೇಣುಗೋಪಾಲ್, ನಾರಾಯಣಸ್ವಾಮಿ, ಮುನಿನಾರಾಯಣಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಯರಾಮ್, ಡಿವಿಆರ್ ರಾಜೇಶ್, ಮಾಜಿ ಜಿಪಂ ಸದಸ್ಯ ಕೆ.ಸಿ.ರಾಜಾಕಾಂತ್, ಮುಖಂಡರಾದ ಕಳವಾರ ಶ್ರೀಧರ್, ಆವುಲರೆಡ್ಡಿ, ಯಲುವಹಳ್ಳಿ ಜನಾರ್ದನ್, ಲಕ್ಷ್ಮಣ್, ವಿಜಯ್ ಕುಮಾರ್, ಅಂಗರೇಖನಹಳ್ಳಿ ರವಿಕುಮಾರ್, ಬಾಬಾಜಾನ್, ಮಸೂದ್, ಆಸೀಪ್, ಮತ್ತಿತರರು ಇದ್ದರು.