ರೈತರಿಗೆ ಕಾರ್ಖಾನೆ ಉಳಿಸುವ ಕಳಕಳ ಬರಲಿ

| Published : Sep 15 2025, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಆಸ್ತಿ, ಅದನ್ನು ಉಳಿಸಿ, ಬೆಳೆಸುವುದು ರೈತರ ಕೆಲಸ. ಕಾರ್ಖಾನೆ ಉಳಿಯಬೇಕಾದರೆ ಅವಧಿ ಪೂರ್ಣಗೊಂಡ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು ಎಂದು ಪದೇ ಪದೇ ಮನವಿ ಮಾಡಿಕೊಂಡಿದ್ದೇನೆ. ರೈತರ ಬಳಿ ಕಾರ್ಖಾನೆಯ ಉಳಿಸುವ ಬಗ್ಗೆ ಕಳಕಳಿ ಇಲ್ಲವಾದರೆ, ಕಾರ್ಖಾನೆಯನ್ನು ಯಾರು ಬೇಕಾದರೂ ನಡೆಸಿಕೊಂಡು ಹೋಗಬಹುದು ಎಂದು ಕಾರ್ಖಾನೆಯ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟಿಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಆಸ್ತಿ, ಅದನ್ನು ಉಳಿಸಿ, ಬೆಳೆಸುವುದು ರೈತರ ಕೆಲಸ. ಕಾರ್ಖಾನೆ ಉಳಿಯಬೇಕಾದರೆ ಅವಧಿ ಪೂರ್ಣಗೊಂಡ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು ಎಂದು ಪದೇ ಪದೇ ಮನವಿ ಮಾಡಿಕೊಂಡಿದ್ದೇನೆ. ರೈತರ ಬಳಿ ಕಾರ್ಖಾನೆಯ ಉಳಿಸುವ ಬಗ್ಗೆ ಕಳಕಳಿ ಇಲ್ಲವಾದರೆ, ಕಾರ್ಖಾನೆಯನ್ನು ಯಾರು ಬೇಕಾದರೂ ನಡೆಸಿಕೊಂಡು ಹೋಗಬಹುದು ಎಂದು ಕಾರ್ಖಾನೆಯ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟಿಲ ಹೇಳಿದರು.

ಮರಗೂರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 2024-25ರ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿ, ಈ ಕಾರ್ಖಾನೆಯ ರೈತರ ಆಸ್ತಿಯಾಗಿ ಉಳಿಯಬೇಕು ಎಂದು ಸರ್ಕಾರದಿಂದ ಅನುದಾನ ತಂದು, ಜಪಾನ್‌ ಟೆಕ್ನಾಲಜಿ ಮೂಲಕ ಕಾರ್ಖಾನೆ ಕಟ್ಟಿದ್ದೇನೆ. ಆದರೆ ಇಂದು ಕಾರ್ಖಾನೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಾರ್ಖಾನೆ ಸ್ಥಾಪಿಸುವ ಹೊಸ ಯೋಜನೆ, ವಿಸ್ತರಣಾ ಯೋಜನೆಗಳಿಗೆ ಪಡೆದ ಸಾಲ ಮತ್ತು ಇತರೆ ಸಾಲಗಳ ಮೇಲೆ ವಾರ್ಷಿಕವಾಗಿ ಭರಿಸುತ್ತಿರುವ ಬಡ್ಡಿಯ ಹೊರೆಯಿಂದ ಕಾರ್ಖಾನೆಯು ಸತತವಾಗಿ ಹಾನಿ ಅನುಭವಿಸಿ ತೀವೃ ಆರ್ಥಿಕ ಸಂಕಷ್ಟದಲ್ಲಿದೆ. ಈ ಭಾಗದ ಕಬ್ಬು ಬೆಳೆಗಾರರ ಸದಸ್ಯರ ಹಿತದೃಷ್ಠಿಯಿಂದ ಕಾರ್ಖಾನೆ ಕಾರ್ಯಾಚಾರಣೆಯಲ್ಲಿರುವುದು ಅವಶ್ಯ. ಹೀಗಾಗಿ ಕಾರ್ಖಾನೆ ಆರ್ಥಿಕ ಸಂಕಷ್ಟದಿಂದ ಹೊರಬರಲು, ಕಾರ್ಖಾನೆಯನ್ನು ನಡೆಸಿಕೊಂಡು ಹೋಗಲು ಮಾಲ್ಕಿ ಹಕ್ಕು ಉಳಿಸಿಕೊಂಡು ಕಾರ್ಖಾನೆ ಗುತ್ತಿಗೆ ನೀಡುವುದು ಸಭೆಯಲ್ಲಿ ರೈತರ ಮುಂದೆ ಇಟ್ಟಿರುವುದಾಗಿ ಹೇಳಿದರು. ರೈತರು ಯಾವ ನಿರ್ಣಯ ಮಾಡುತ್ತಾರೆಯೊ ಅದಕ್ಕೆ ಆಡಳಿತ ಮಂಡಳಿ ಬದ್ದವಾಗಿದೆ ಎಂದರು.ಇದಕ್ಕೆ ರೈತರಾದ ಮಹಾದೇವ ಹಿರೇಕುರಬರ, ಸಂಗಣ್ಣ ಈರಾಬಟ್ಟಿ, ಶ್ರೀಮಂತ ಇಂಡಿ, ಗುರುನಾಥ ಬಗಲಿ, ಡಿ.ಆರ್‌.ಶಹಾ ಮಾತನಾಡಿ, ಇಂಡಿ, ಸಿಂದಗಿ, ಚಡಚಣ ಭಾಗದಲ್ಲಿ ಇದೊಂದೆ ಕಾರ್ಖಾನೆ. ಯಾವುದೇ ಕಾರಣಕ್ಕೂ ಕಾರ್ಖಾನೆ ಗುತ್ತಿಗೆ ನೀಡಬಾರದು. ರೈತರಿಂದ ಮತ್ತೆ ಶೇರ್‌ ಸಂಗ್ರಹಿಸಿ ರೈತರು ನಿಮ್ಮ ಹಿಂದೆ ಇದ್ದಾರೆ. ಸಧ್ಯದ ಆಡಳಿತ ಮಂಡಳಿ ನೇತೃತ್ವದಲ್ಲಿ ಕಾರ್ಖಾನೆ ನಡೆಯಲಿ ಎಂದು ಹೇಳಿದರು.

ಕಾರ್ಖಾನೆಯ ಅಧ್ಯಕ್ಷರಾದಿಯಾಗಿ ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಆದರೆ ಕಾರ್ಖಾನೆಯ ಕೆಲ ಅಧಿಕಾರಿ ವರ್ಗ, ಟ್ರ್ಯಾಕ್ಟರ್‌ ಟೋಳಿಯವರು ಕಳಕಳಿ ಇಲ್ಲದೆ ಕೆಲಸ ಮಾಡುತ್ತಿದ್ದು, ಕಾರ್ಖಾನೆ ಕಬ್ಬು ನುರಿಸುವಲ್ಲಿ ಹಿಂದೆ ಬಿದ್ದಿದೆ ಎಂದು ತಿಳಿಸಿದರು.

ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, 2024-25ರಲ್ಲಿ ಕಬ್ಬು ನುರಿಸುವ ಹಂಗಾಮಿನ 111 ದಿನಗಳಲ್ಲಿ 32,7452 ಮೆಟ್ರಿಕ್‌ ಟನ್‌ ಕಬ್ಬು ನುರಿಸಿ, 3,00,280 ಕ್ವಿಂಟಲ್‌ ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಶೇ.9.17 ಪ್ರತಿಶತ ಸಕ್ಕರೆ ಇಳುವರಿಯನ್ನು ಪಡೆದಿದೆ. 2025-26ರ ಕಬ್ಬು ನುರಿಸುವ ಹಂಗಾಮಿನಲ್ಲಿ 5 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ಗುರಿ ಇದೆ ಎಂದು ತಿಳಿಸಿದರು.ಸಭೆಯಲ್ಲಿ ಕಾರ್ಖಾನೆ ಉಪಾಧ್ಯಕ್ಷ ಎಂ.ಆರ್‌.ಪಾಟೀಲ, ನಿರ್ದೇಶಕರಾದ ವಿಶ್ವನಾಥ ಬಿರಾದಾರ, ಸಿದ್ದಣ್ಣ ಬಿರಾದಾರ, ಜಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ರೇವಗೊಂಡಪ್ಪ ಪಾಟೀಲ, ಬಸವರಾಜ ಧನಶ್ರಿ, ವಿಶ್ವನಾಥ ಬಿರಾದಾರ, ದುಂಡಪ್ಪ ಖೇಡ, ವ್ಯವಸ್ಥಾಪಕ ನಿರ್ದೇಶಕಿ ಎಸ್‌.ಕೆ.ಭಾಗ್ಯಶ್ರೀ ಮುಂತಾದವರು ಹಾಜರಿದ್ದರು.

ಕೋಟ್‌ಇತರೆ ಕಾರ್ಖಾನೆಗಳಿಗಿಂತ ಪಿಆರ್‌ಪಿಗಿಂತ ಹೆಚ್ಚಿನ ದರ ನೀಡಿದ್ದು, ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದೆ. ಕಾರ್ಖಾನೆಯ ವಿಷಯ ಗೌಪ್ಯವಾಗಿ ಇಡದೆ, ರೈತರ ಮಧ್ಯದಲ್ಲಿ ಎಲ್ಲವು ಚರ್ಚೆಯಾಗಬೇಕು. ಎಲ್ಲ ವಿಷಯಗಳನ್ನು ರೈತರ ಮುಂದೆ ಇಟ್ಟಿದ್ದೇನೆ. ರೈತರಿಗೆ ಮೋಸ ಮಾಡಿ ಕಾರ್ಖಾನೆ ಲಾಭದಲ್ಲಿ ತರಬಹುದಿತ್ತು. ಆದರೆ ರೈತರಿಗೆ ಮೋಸ ಮಾಡಿದರೆ ಯಾವ ಕಾಲಕ್ಕೂ ಒಳ್ಳೆಯದಾಗುವುದಿಲ್ಲ ಎಂಬ ರೈತಪರ ಕಾಳಜಿಯಿಂದ ಬದ್ದತೆ, ಪ್ರಾಮಾಣಿಕತೆಯಿಂದ ಆ ಕೆಲಸಕ್ಕೆ ಕೈ ಹಾಕಿಲ್ಲ, ಹಾಕುವುದಿಲ್ಲ. ರೈತರು ಇದು ನಮ್ಮ ಕಾರ್ಖಾನೆ ಎಂದು ಭಾವಿಸಬೇಕು. ಸತ್ಯಕ್ಕೆ ಸಹಕರಿಸಿ, ಸುಳ್ಳಿಗೆ ವಿರೋಧ ಮಾಡುವ ಕೆಲಸವನ್ನು ರೈತರು ಮಾಡಬೇಕು.ಯಶವಂತರಾಯಗೌಡ ಪಾಟೀಲ, ಆಡಳಿತ ಮಂಡಳಿ ಅಧ್ಯಕ್ಷ