ರೈತರು ಕೃಷಿ ಕ್ಷೇತ್ರವನ್ನು ಉದ್ಯಮವಾಗಿಸುವತ್ತ ಚಿಂತಿಸಲಿ: ಚುಂಚಶ್ರೀ ಸಲಹೆ

| Published : Oct 04 2024, 01:00 AM IST

ಸಾರಾಂಶ

ಆಧುನಿಕ ತಂತ್ರಜ್ಞಾನದ ಫಲವಾಗಿ ಕೃಷಿಕ್ಷೇತ್ರ ಇಂದು ಲಾಭದಾಯಕವಾಗಿ ಬೆಳೆಯುತ್ತಿರುವುದು ಸಂತೋಷ ತಂದಿದೆ. ಎಐ ತಂತ್ರಜ್ಞಾನವೂ ಕೂಡ ಹನಿ ನೀರಾವರಿ, ಕೊಳವೆ ಬಾವಿ ನಿರ್ವಹಣೆ, ಹವಾಮಾನ ಮಾಹಿತಿ, ತೋಟಗಾರಿಕೆ ಬೆಳೆಗಳ ಸಂವರ್ಧನೆಗೆ ನೆರವು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಐಟಿ, ಬಿಟಿಯಂತೆ ಕೃಷಿಗೂ ಒಳ್ಳೆಯ ದಿನಗಳು ಬರುವ ಕಾಲ ದೂರವಿಲ್ಲ. ಭೂತಾಯಿಗೆ ಬೆವರು ಹರಿಸಿ ದುಡಿಯುವ ರೈತಾಪಿ ವರ್ಗ ಕೃಷಿ ಮತ್ತು ತೋಟಗಾರಿಕೆ ವಲಯವನ್ನು ಉದ್ಯಮವಾಗಿಸುವತ್ತ ಚಿಂತಿಸಬೇಕಿದೆ ಮತ್ತು ಕೃಷಿಯತ್ತ ಯುವಜನಾಂಗ ಹೆಚ್ಚಾಗಿ ಆಕರ್ಷಿತರಾಗಲಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.

ನಗರದ ಹೊರವಲಯದ ಹರ್ಷೋದಯ ಕಲ್ಯಾಣಮಂಟಪದಲ್ಲಿ ರಾಷ್ಟ್ರೀಯ ದಾಳಿಂಬೆ ಖರೀದಿದಾರರ ಹಾಗೂ ಮಾರಾಟಗಾರರ ಸಮಾವೇಶ- 2024ಕ್ಕೆ ಚಾಲನೆ ನೀಡಿ ಮಾತನಾಡಿ, ಆಧುನಿಕ ತಂತ್ರಜ್ಞಾನದ ಫಲವಾಗಿ ಕೃಷಿಕ್ಷೇತ್ರ ಇಂದು ಲಾಭದಾಯಕವಾಗಿ ಬೆಳೆಯುತ್ತಿರುವುದು ಸಂತೋಷ ತಂದಿದೆ. ಎಐ ತಂತ್ರಜ್ಞಾನವೂ ಕೂಡ ಹನಿ ನೀರಾವರಿ, ಕೊಳವೆ ಬಾವಿ ನಿರ್ವಹಣೆ, ಹವಾಮಾನ ಮಾಹಿತಿ, ತೋಟಗಾರಿಕೆ ಬೆಳೆಗಳ ಸಂವರ್ಧನೆಗೆ ನೆರವು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ರೈತರು ಕೂಡ ತಂತ್ರಜ್ಞಾನದೊಂದಿಗೆ ಹೆಜ್ಜೆಹಾಕಿದಾಗ ಮಾತ್ರವೇ ಲಾಭ- ನಷ್ಟಗಳನ್ನು ಸರಿದೂಗಿಸಲು ಸಾಧ್ಯ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹನಿನೀರಾವರಿ ತಂತ್ರಜ್ಞಾನವನ್ನು ತುಂಬಾ ಸಮರ್ಥವಾಗಿ ಬಳಸಿಕೊಂಡು ತೋಟಗಾರಿಕೆ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸ್ವಾಭಿಮಾನದ ಬದುಕಿನ ರೀತಿ. ಪ್ರತಿಕೂಲ ಸನ್ನಿವೇಶಗಳಲ್ಲೂ ಅಧೀರರಾಗದೆ ಸ್ವಾಭಿಮಾನದಿಂದ ಸವಾಲುಗಳನ್ನು ಮೆಟ್ಟಿನಿಲ್ಲುವ ಪರಿ, ಉಳಿದ ರೈತರಿಗೆ ಮಾದರಿಯಾಗಬೇಕಿದೆ ಎಂದರು.

ಯುವಕರು ಕೃಷಿಯತ್ತ ಆಕರ್ಷಿತರಾಗುವ ಮೂಲಕ ತಂದೆ- ತಾಯಿಯ ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಇಲ್ಲಿಯೇ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಸಾಫ್ಟ್ ವೇರ್ ವಿಜ್ಞಾನಿಗಳಂತೆ ಗೌರವದ ಬದುಕನ್ನು ಕೃಷಿಯಲ್ಲಿ ಕಾಣಲು ಸಾಧ್ಯ. ಪರಾವಲಂಬಿಗಳಾಗಿ ಇನ್ನೊಬ್ಬರ ಕೈಕೆಳಗೆ ದುಡಿಯುವ ಬದಲು ನೀವೇ 10 ಮಂದಿಗೆ ಉದ್ಯೋಗ ಕೊಟ್ಟು ಇದ್ದಲ್ಲಿಯೇ ನೆಮ್ಮದಿಯಾಗಿ ಬದುಕುವುದನ್ನು ಕಲಿಯಿರಿ ಎಂದು ಕರೆ ನೀಡಿದರು.

ಯುವರೈತ ಮರಳುಕುಂಟೆ ಚೇತನ್ ಮಾತನಾಡಿ, ದಾಳಿಂಬೆ ಬೆಳೆ ರೈತರಿಗೆ ಲಾಭದಾಯಕ ಕೃಷಿಯಾಗಿದೆ. ಈ ಬಗ್ಗೆ ಜಿಲ್ಲೆಯ ರೈತರಿಗೆ ಸಂಪೂರ್ಣವಾದ ಮಾಹಿತಿ ನೀಡುವ ಭಾಗವಾಗಿ ಈ ಸಮಾವೇಶವನ್ನು ಏರ್ಪಡಿಸಲಾಗಿದೆ. ದಾಳಿಂಬೆ ಬೆಳೆಗೆ ರೋಗಬಾಧೆ ಹೆಚ್ಚಿದೆ. ಎಂತಹ ಪರಿಸರದಲ್ಲಿ ಈ ಬೆಳೆ ಬೆಳೆಯಬಹುದು, ಯಾವ ರೋಗಕ್ಕೆ ಯಾವ ಔಷಧಿ ಬಳಸಬೇಕು. ಮಾರುಕಟ್ಟೆಯ ರೀತಿ, ರಿವಾಜುಗಳೇನು ಎಂಬ ಬಗ್ಗೆ ತೋಟಗಾರಿಕೆ ಮತ್ತು ಕೃಷಿ ವಿಜ್ಞಾನಿಗಳಿಂದ ಒಂದೇ ಸೂರಿನಡಿ ಅರಿವು ಮೂಡಿಸಲು ರಾಷ್ಟ್ರೀಯ ದಾಳಿಂಬೆ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶವನ್ನು ರೈತರೇ ಸೇರಿ ಮಾಡುತ್ತಿದ್ದೇವೆ ಎಂದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, ನಮ್ಮ ಜಿಲ್ಲೆ ಹಣ್ಣು, ತರಕಾರಿ ಬೆಳೆಯುವಲ್ಲಿ ರಾಜ್ಯಕ್ಕೇ ಮಾದರಿಯಾಗಿದೆ. ದ್ರಾಕ್ಷಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದ ರೈತರು ಬದಲಾದ ಕೃಷಿಯಂತೆ ದಾಳಿಂಬೆ ಬೆಳೆದು ಲಾಭಮಾಡುವತ್ತ ಮನಸ್ಸು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ದಾಳಿಂಬೆ ಬೆಳೆಗಾರರನ್ನು ಒಂದೆಡೆ ಸೇರಿಸಿ ಈ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆ, ಸವಾಲುಗಳ ಬಗ್ಗೆ ವಿಜ್ಞಾನಿಗಳ ಮೂಲಕ ರೈತರಿಗೆ ವೈಜ್ಞಾನಿಕವಾಗಿ ಸಮಗ್ರ ಮಾಹಿತಿ ನೀಡಲು ಈ ಸಮಾವೇಶ ಮಾಡುತ್ತಿದ್ದಾರೆ. ಇದು ಯಶಸ್ವಿಯಾಗಲಿ ಎಂದರು.

ರಾಷ್ಟ್ರೀಯ ದಾಳಿಂಬೆ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶದಲ್ಲಿ ತೋಟಗಾರಿಕೆ ಬೆಳೆಗಾರರಿಗೆ ಬೇಕಾದ ಕೃಷಿ ಪರಿಕರ, ಟ್ರ್ಯಾಕ್ಟರ್, ಸ್ಪಿಂಕ್ಲರ್, ಔಷಧೋಪಚಾರ, ಬೀಜೋಪಚಾರ ಮೊದಲಾಗಿ ಎಲ್ಲಾ ರೀತಿಯ ಕಂಪನಿಗಳು ಒಂದೇ ಸೂರಿನಡಿ ಮಳಿಗೆಗಳನ್ನು ತೆರೆದು, ಮಾಹಿತಿ ನೀಡುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗಿತ್ತು.