ಭಾವಿ ಶಿಕ್ಷಕರು ಖಗೋಳ ಸಂಶೋಧನೆ ಅರಿಯಲಿ

| Published : Feb 02 2025, 01:00 AM IST

ಸಾರಾಂಶ

ಭವಿಷ್ಯಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ತಾವುಗಳಿಗೆ ಖಗೋಳ ಹಾಗೂ ಬಾಹ್ಯಾಕಾಶ ಬಗ್ಗೆ ಸಾಕಷ್ಟು ತಿಳಿವಳಿಕೆ ಹೊಂದಬೇಕು. ಅಂತಹ ಮಾಹಿತಿ ಇಂತಹ ಕಾರ್ಯಾಗಾರದ ಮೂಲಕ ಪಡೆಯಬೇಕು.

ಧಾರವಾಡ:

ಭಾವಿ ಶಿಕ್ಷಕರಾಗುವ ಬಿಇಡಿ ಅಭ್ಯರ್ಥಿಗಳು ಬಾಹ್ಯಾಕಾಶ, ಖಗೋಳ ಘಟನೆಗಳು ಹಾಗೂ ಪ್ರಸ್ತುತ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಬೆಂಗಳೂರಿನ ಯುಆರ್‌ರಾವ್‌ ಉಪಗ್ರಹ ಕೇಂದ್ರದ ನಿವೃತ್ತ ಉಪನಿರ್ದೇಶಕ ಎಚ್‌.ಎನ್‌. ಸುರೇಶಕುಮಾರ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಜಂಟಿಯಾಗಿ ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಖಗೋಳ ವಿದ್ಯಮಾನಗಳ ಹಾಗೂ ಬಾಹ್ಯಾಕಾಶ ಸಂಶೋಧನೆ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಭವಿಷ್ಯಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ತಾವುಗಳಿಗೆ ಖಗೋಳ ಹಾಗೂ ಬಾಹ್ಯಾಕಾಶ ಬಗ್ಗೆ ಸಾಕಷ್ಟು ತಿಳಿವಳಿಕೆ ಹೊಂದಬೇಕು. ಅಂತಹ ಮಾಹಿತಿ ಇಂತಹ ಕಾರ್ಯಾಗಾರದ ಮೂಲಕ ಪಡೆಯಬೇಕು ಎಂದರು.

ಗ್ಲೋಬಲ್‌ ಹಿಮಾಲಯನ್‌ ಸ್ಪೇಸ್‌ ಸೆಂಟರ್‌ನ ಸ್ಥಾಪಕ ವೀರೇಶ ಪಾಟೀಲ ಮಾತನಾಡಿ, ಬಾಹ್ಯಾಕಾಶ ಮತ್ತು ಖಗೋಳಿಯ ಕೌತುಕಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ಮಾಡಲು ತಿಳಿಸಿದರು.

ಪಿಪಿಟಿ ಮೂಲಕ ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿಸಿದರು. ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು, ಸಿ.ಎಫ್. ಚಂಡೂರ ವಂದಿಸಿದರು. ವಿಜ್ಞಾನ ಕೇಂದ್ರದ ಸಿಬ್ಬಂದಿ ಹಾಗೂ ಬಿಇಡಿ ಅಭ್ಯರ್ಥಿಗಳಿದ್ದರು.