ಅಹಂ ಬಿಟ್ಟು ಎಲ್ಲ ದೇವರ ಅಣತಿಯಂತೆ ಸಾಗಲಿ: ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

| Published : Feb 11 2025, 12:45 AM IST

ಸಾರಾಂಶ

ಶ್ರೀ ವಿಶ್ವೇಶತೀರ್ಥರ ಪಂಚಮ ಮಹಾಸಮಾರಾಧನೆ ಮತ್ತು 108 ದಿನಗಳ ತತ್ವಜ್ಞಾನ ಮಹೋತ್ಸವ ನಿಮಿತ್ತ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.

ಧಾರವಾಡ: ನಾನು ಎಂಬ ಅಹಂನಲ್ಲಿ ನಡೆಸುವ ಕೆಲಸಗಳು ಭಗವಂತನ ಪ್ರೀತಿಗೆ ಪಾತ್ರವಾಗುವುದಿಲ್ಲ. ಹೀಗಾಗಿ, ನಾನು ಎಂಬ ಅಹಂ ಬಿಟ್ಟು ಎಲ್ಲ ದೇವರ ಅಣತಿಯಂತೆ ಸಾಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು.

ಶ್ರೀ ವಿಶ್ವೇಶತೀರ್ಥರ ಪಂಚಮ ಮಹಾಸಮಾರಾಧನೆ ಮತ್ತು 108 ದಿನಗಳ ತತ್ವಜ್ಞಾನ ಮಹೋತ್ಸವ

ನಿಮಿತ್ತ ನಗರದ ಆಲೂರು ವೆಂಕಟರಾವ್​ ಸಭಾಭವನದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಳ, ಶ್ರೀ

ವಿಶ್ವೇಶತೀರ್ಥ ಗುರುವಂದನಾ ಸಮಿತಿ, ಪ್ರಹ್ಲಾದ ವಿದ್ಯಾರ್ಥಿ ನಿಲಯ ಪ್ರತಿಷ್ಠಾನ ವತಿಯಿಂದ ಸೋಮವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ನಾವು ಸಾಗುವ ಪ್ರತಿ ಹೆಜ್ಜೆಯಲ್ಲೂ ಭಗವಂತನ ಚಿಂತನೆ ಇರಬೇಕು. ಅಂದಾಗ ಮಾತ್ರ ಮಾಡಿದ ಕಾರ್ಯಗಳು ಭಗವಂತನ ಕೃಪೆಗೆ ಪಾತ್ರವಾಗಲು ಸಾಧ್ಯ ಎಂದರು.

ಪಂ. ಬ್ರಹ್ಮಣ್ಯಾಚಾರ್ಯ ಮಾತನಾಡಿ, ಶ್ರೀಗಳು ಇಡೀ ಜಗತ್ತಿನ ಜನರಲ್ಲಿ ದೇಶಪ್ರೇಮ, ದೈವ ಪ್ರೇಮ ಬೆಳೆಸಿದ್ದಾರೆ. ಸಮಾಜದ ಜನರ ಜತೆಗೆ ಪ್ರಾಣಿ, ಪರಿಸರದ ಮೇಲೆ ಅಪಾರ ಪ್ರೀತಿ, ಕಾಳಜಿ ಹೊಂದಿದ್ದರು. ಸಮಾಜದ ನೋವನ್ನು ತಮ್ಮ ನೋವು ಎಂದು ಸ್ಪಂದಿಸುವ ಕೆಲಸ ಮಾಡುತ್ತಿದ್ದರು ಎಂದರು.

ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಟೀಕೆ-ಟಿಪ್ಪಣಿಗಳ ಮಧ್ಯೆ ಪೇಜಾವರ ಶ್ರೀಗಳು ಆಧ್ಯಾತ್ಮಿಕ ಗುರುವಾಗಿ ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ. ಉತ್ತಮ ಮಾರ್ಗದರ್ಶನ ಮಾಡುತ್ತಲೇ ಸನ್ಮಾರ್ಗ ತೋರಿದವರು. ರಾಮ ಮಂದಿರ ಹೋರಾಟದ ಶ್ರೇಯಸ್ಸು ಶ್ರೀಗಳಿಗೆ ಸಲ್ಲಬೇಕು. ಧಾರ್ಮಿಕ ವಿಚಾರದಲ್ಲಿ ಹೋರಾಟಕ್ಕೆ ನಿಂತಾಗ ಶ್ರೀಗಳು ಶ್ರೀಕೃಷ್ಣನಂತೆ ಕಾಣುತ್ತಿದ್ದರು ಎಂದರು.

ಪಂ. ಕೃಷ್ಣರಾಜ ಕುತ್ಪಾಡಿ ಭಟ್​ ಮಾತನಾಡಿದರು. ಹ.ವೆಂ. ಕಾಖಂಡಕಿ, ಕೆ.ಆರ್​. ದೇಶಪಾಂಡೆ, ಸತ್ಯಮೂರ್ತಿ ಆಚಾರ್ಯ, ಸಮೀರ ಜೋಶಿ, ಇತರರು ಇದ್ದರು. ಹರ್ಷ ಡಂಬಳ ಸ್ವಾಗತಿಸಿದರು. ಮಾಯಾ ರಾಮನ್​ ನಿರೂಪಿಸಿದರು. ಗಿರಿಧರ ಕಿನ್ನಾಳ ವಂದಿಸಿದರು.