ಸಾರಾಂಶ
ರಾಷ್ಟ್ರಕವಿ ಕುವೆಂಪು ಅವರ ಚಿಂತನೆಗಳು ಒಂದು ದಿನಕ್ಕೆ ಸೀಮಿತ ಆಗದೇ ಕನ್ನಡಿಗರಿಗೆ ನಿತ್ಯೋತ್ಸವವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಷ್ಟ್ರಕವಿ ಕುವೆಂಪು ಅವರ ಚಿಂತನೆಗಳು ಒಂದು ದಿನಕ್ಕೆ ಸೀಮಿತ ಆಗದೇ ಕನ್ನಡಿಗರಿಗೆ ನಿತ್ಯೋತ್ಸವವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ ಹೇಳಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡದ ಪ್ರಸಿದ್ಧ ಕವಿ-ಸಾಹಿತಿಗಳು ಮತ್ತು ಕನ್ನಡ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳು’ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕನ್ನಡ ಇನ್ನೂ ಅನ್ನದ ಭಾಷೆಯಾಗಿಲ್ಲ. ಎಲ್ಲರಿಗೂ ಇಂಗ್ಲಿಷ್ ವ್ಯಾಮೋಹ ಜಾಸ್ತಿಯಾಗುತ್ತಿದ್ದು, ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಕಳುಹಿಸುತ್ತಿದ್ದಾರೆ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದ ನನಗೆ ತುಂಬಾ ಆತಂಕವನ್ನು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತ್ಯಂತ ಸ್ಪಷ್ಟವಾದ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಕನ್ನಡ ಶಾಲೆಗಳು ಮುಚ್ಚಬಾರದು ಮುಚ್ಚಿರುವ ಶಾಲೆಗಳನ್ನು ಮತ್ತೆ ತೆರೆಯಬೇಕು. ಕಟ್ಟಡಗಳು ಸುವ್ಯವಸ್ಥಿತವಾಗಿರಬೇಕು. ಶಿಕ್ಷಕರು ನೇಮಕ ಆಗಬೇಕು ಎಂಬ ನಿರ್ಣಯ ಮಾಡಿದ್ದೇವೆ. ಕೈಗೊಂಡ ನಿರ್ಣಯವನ್ನು ಅನುಷ್ಠಾನಗೊಳಿಸುವುದಕ್ಕೆ ನಮ್ಮ ಮೊದಲ ಆದ್ಯತೆ ಎಂದರು.ಇದೇ ವೇಳೆ ಪ್ರಾಧ್ಯಾಪಕ ಡಾ.ಟಿ.ಕೆ.ಕೆಂಪೇಗೌಡ ಅವರು ಕುವೆಂಪು ಸಾರ್ವಕಾಲಿಕತೆ ವಿಷಯದ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಕೈಗಾರಿಕ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ವಿಜಯ ಸಂಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಶಾಂತರಾಜು, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಜಿ.ಅನಿಲ್ ಕುಮಾರ್, ಲೇಖಕ ಎಂ.ಕೆ.ರಂಗಪ್ಪ ಮಾದಲಗೆರೆ ಉಪಸ್ಥಿತರಿದ್ದರು.