ಸಾರಾಂಶ
ಕೋಟೆಯಲ್ಲಿ ಪಾಳುಬಿದ್ದ ಮನೆಗಳ ಆವಶೇಷಗಳು ಮನೆಯ ಬುನಾದಿಗಳು, ಹಲವಾರು ಹೊಂಡಗಳು, ಪುಷ್ಕರಣಿಗಳು ನೋಡುಗರನ್ನು ಕೈಬೀಸಿ ಕರೆಯುತ್ತವೆ.
ಭೀಮಣ್ಣ ಗಜಾಪುರ
ಕೂಡ್ಲಿಗಿ: ತಾಲೂಕಿನಲ್ಲಿ ಆಳ್ವಿಕೆ ನಡೆಸಿದ 3 ಪಾಳೇಗಾರರಲ್ಲಿ ಗುಡೇಕೋಟೆ ಪಾಳೇಗಾರರು ಪ್ರಮುಖರು. ಗುಡೇಕೋಟೆಯ ಪಾಳೇಗಾರರು ಆಳ್ವಿಕೆ ನಡೆಸಿದ ಕುರಿತು ತಾಣಗಳಿದ್ದು, ಅವುಗಳು ಪ್ರವಾಸಿಸ್ಥಳವಾಗಬೇಕೆಂಬ ಕೂಗು ಜೋರಾಗಿದೆ.ಗುಡೇಕೋಟೆ ಪಾಳೇಗಾರರು ಆಳ್ವಿಕೆ ನಡೆಸಿದ ಕೋಟೆ, ಕೊತ್ತಲುಗಳು, ಬುರುಜು, ಸಿಹಿನೀರಿನ ಹೊಂಡಗಳು, ಉಗ್ರಾಣಗಳು, ಶತ್ರುಗಳಿಂದ ರಕ್ಷಿಸಿಕೊಳ್ಳಲು ಅಭೇದ್ಯಕೋಟೆಗಳು, ಸುಂದರ ದೇವಾಲಯಗಳಿವೆ. ಇವರು ನಿರ್ಮಿಸಿದ ಕೋಟೆಯನ್ನು ನೋಡಬೇಕೆಂದರೆ ಚಿಕ್ಕ ಚಿಕ್ಕ ಮೆಟ್ಟಿಲಗಳನ್ನು ಏರಿ ಹೋಗಬೇಕು. ಬೆಟ್ಟವೇರಿದ ತಕ್ಷಣ ತಂಗಾಳಿ ಮನಸನ್ನು ಪುಳಕಿತಗೊಳಿಸುತ್ತದೆ. ಬೆಟ್ಟದ ಮೇಲೆ ನಿಂತು ಸುತ್ತಲೂ ಪ್ರಕೃತಿ ಸೌಂದರ್ಯ ನೋಡುವುದೇ ಅನನ್ಯ ಅನುಭವ ನೀಡುತ್ತದೆ.
ಕೋಟೆಯ ಒಳಭಾಗದಲ್ಲಿ ಪ್ರಾಕೃತಿಕವಾಗಿ ನಿರ್ಮಿತವಾಗಿರುವ ಮಳೆ ನೀರಿನ ಹೊಂಡಗಳಿವೆ. ನಿಸರ್ಗ ನಿರ್ಮಿತ ಬೆಟ್ಟಗುಡ್ಡ, ಬಂಡೆಗಳ ಮಧ್ಯೆ ಸುಂದರ ಹೊಂಡವನ್ನಾಗಿ ನಿರ್ಮಿಸಲಾಗಿದೆ. ಇದರ ಸುತ್ತ ರಕ್ಷಾಕವಚದಂತಿರುವ ಕೋಟೆಯ ಗೋಡೆಗಳಿವೆ. ಮುಂದೆ ಸಾಗಿದರೆ, ದೊಡ್ಡ ಉಗ್ರಾಣದ ರೀತಿಯ ಕೋಣೆ ಕಂಡುಬರುತ್ತದೆ. ಇದಕ್ಕೆ ಎಲ್ಲಿಯೂ ಬಾಗಿಲುಗಳಿಲ್ಲ. ಎತ್ತರದಲ್ಲಿ ಮಾತ್ರ ಒಳಹೋಗಲು ಕಿಂಡಿಗಳನ್ನು ನಿರ್ಮಿಸಲಾಗಿದೆ. ಇದು ಆಹಾರ ಧಾನ್ಯಗಳನ್ನು ಸಂಗ್ರಹಿಸಿಡಲು ಬಳಸುತ್ತಿದ್ದರು ಅಥವಾ ಮದ್ದುಗುಂಡುಗಳ ಸಂಗ್ರಹಕ್ಕಾಗಿ ನಿರ್ಮಿಸಿರಬಹುದು ಎಂದು ಇತಿಹಾಸಕಾರರ ಅಭಿಪ್ರಾಯ.ಕೋಟೆಯಲ್ಲಿ ಪಾಳುಬಿದ್ದ ಮನೆಗಳ ಆವಶೇಷಗಳು ಮನೆಯ ಬುನಾದಿಗಳು, ಹಲವಾರು ಹೊಂಡಗಳು, ಪುಷ್ಕರಣಿಗಳು ನೋಡುಗರನ್ನು ಕೈಬೀಸಿ ಕರೆಯುತ್ತವೆ. ಕೆಲವು ದೇವಾಲಯಗಳೂ ಇವೆ. ಪ್ರಾಕೃತಿಕವಾಗಿರುವ ಬಂಡೆಗಲ್ಲುಗಳನ್ನೇ ವಾಸಸ್ಥಳಗಳನ್ನಾಗಿ ಮಾಡಿಕೊಂಡಿರುವ ಪುರಾವೆಗಳು ಇಲ್ಲಿ ಸಿಗುತ್ತವೆ.
ಗಂಡಳನಾಯಕ, ಬೊಮ್ಮಂತರಾಜ, ಚಿನ್ನಯರಾಜ, ಇಮ್ಮಡಿ ರಾಜಪ್ಪನಾಯಕ, ಜಟಿಂಗರಾಯ, ರಾಮಪ್ಪನಾಯಕ ಸೇರಿದಂತ ಹಲವಾರು ಪಾಳೇಗಾರರು ಆಳ್ವಿಕೆ ನಡೆಸಿದ್ದರು ಎನ್ನಲಾಗಿದೆ.ಗುಡೇಕೋಟೆ ಪಾಳೇಗಾರರು ಚಿತ್ರದುರ್ಗದ ಪಾಳೇಗಾರರೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸಿದ್ದರು ಎನ್ನುವುದಕ್ಕೆ ಐತಿಹಾಸಿಕ ದಾಖಲೆಗಳಿವೆ ಎನ್ನುತ್ತಾರೆ ಇತಿಹಾಸಕಾರರು.