ಸಂಸ್ಕೃತಿ ಮತ್ತು ಸಂಗೀತ ದಿಗ್ಗಜರನ್ನು ನಾಡಿಗೆ ನೀಡಿದ ಗದಗ ನಗರದಲ್ಲಿ ಶನಿವಾರ ರಾತ್ರಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆಯು ಭವ್ಯವಾಗಿ ಜರುಗಿತು.

ಗದಗ: ಸಂಸ್ಕೃತಿ ಮತ್ತು ಸಂಗೀತ ದಿಗ್ಗಜರನ್ನು ನಾಡಿಗೆ ನೀಡಿದ ಗದಗ ನಗರದಲ್ಲಿ ಶನಿವಾರ ರಾತ್ರಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆಯು ಭವ್ಯವಾಗಿ ಜರುಗಿತು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಉತ್ತರ ಪ್ರಾಂತದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ಪ್ರಮುಖ ಕೃಷ್ಣಾ‌ ಜೋಶಿ, ಹಿಂದೂ ಸಮಾಜವು ಇತಿಹಾಸದಿಂದ ಪಾಠ ಕಲಿಯಬೇಕಿದೆ. ಪೃಥ್ವಿರಾಜ ಚೌಹಾಣ್ ಸೋಲಲು ಜಯಚಂದನಂತಹ ಆಂತರಿಕ ಶಕ್ತಿಗಳೇ ಕಾರಣವಾಯಿತು. ನಾವು ಹಿಂದೂಗಳಾಗಿ ಒಂದಾಗದಿದ್ದರೆ ಭವಿಷ್ಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಕರ.

ಇಂದು ಲವ್ ಜಿಹಾದ್, ಡ್ರಗ್ ಜಿಹಾದ್, ಆರ್ಥಿಕ ಮತ್ತು ಶೈಕ್ಷಣಿಕ ಜಿಹಾದ್‌ಗಳ ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಜನಸಂಖ್ಯಾ ಅಸಮತೋಲನವು ಸಂವಿಧಾನದ ಅಸ್ತಿತ್ವಕ್ಕೆ ಧಕ್ಕೆ ತರಬಹುದು. ಹಿಂದೂ ಸಮಾಜ ಬಹುಸಂಖ್ಯಾತರಾಗಿ ಇರುವವರೆಗೆ ಮಾತ್ರ ಈ ದೇಶದ ಸಂವಿಧಾನ ಮತ್ತು ಸಂಸ್ಕೃತಿ ಸುಭದ್ರವಾಗಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಘದ ಶತಮಾನೋತ್ಸವದ ಪ್ರಯುಕ್ತ ಸಮಾಜದಲ್ಲಿ ಪ್ಲಾಸ್ಟಿಕ್ ಮುಕ್ತ ಮತ್ತು ಪ್ರಕೃತಿ ಪೂರಕ ಜೀವನ, ​ಸಂವಿಧಾನದ ಹಕ್ಕುಗಳ ಜೊತೆಗೆ ಕರ್ತವ್ಯ ಪಾಲನೆ, ಭಾರತೀಯ ಸಂಸ್ಕೃತಿ ಮತ್ತು ಉತ್ಪನ್ನಗಳಿಗೆ ಒತ್ತು ನೀಡುವು ವಿಷಯಗಳ ಕುರಿತು ಮಾತನಾಡಿದರು.

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ತಾಯಿ ಮತ್ತು ಭೂಮಿಗೆ ಗೌರವ ನೀಡುವುದೇ ನಿಜವಾದ ಧರ್ಮ ಎಂದರು.

ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಶ್ರೀಗಳು, ಅಡ್ನೂರು ಮಠದ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. ಹಿಂದೂ ಸಮಾಜೋತ್ಸವದ ಅಧ್ಯಕ್ಷ ಬಸವರಾಜ ಬಿಂಗಿ ಸೇರಿದಂತೆ ಅನೇಕ ಪ್ರಮುಖರು ವೇದಿಕೆಯಲ್ಲಿದ್ದರು.ಹಿಂದೂ ಸಮ್ಮೇಳನದ ಶೋಭಾಯಾತ್ರೆಗೆ ಚಾಲನೆ

ಗದಗ: ಹಿಂದೂ ಸಮಾಜೋತ್ಸವ ಸಮಿತಿ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಉಪನಗರದ ಸಹಯೋಗದಲ್ಲಿ ಶನಿವಾರ ಬೃಹತ್ ಹಿಂದೂ ಸಮ್ಮೇಳನದ ಶೋಭಾಯಾತ್ರೆಗೆ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ. ಕಲ್ಲಯ್ಯ ಅಜ್ಜನವರು ಚಾಲನೆ ನೀಡಿದರು.ನಗರದ ವೀರೇಶ್ವರ ಪುಣ್ಯಾಶ್ರಮ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಮಠದಿಂದ ಆರಂಭವಾಗಿ ವೆಂಕಟೇಶ ಟಾಕೀಸ್ ರಸ್ತೆ, ಟ್ಯಾಗೋರ್ ರಸ್ತೆ, ಕಿತ್ತೂರಾಣಿ ಚೆನ್ನಮ್ಮ ರಸ್ತೆ, ಚೇತನ ಕ್ಯಾಂಟೀನ್, ಹಾತಲಗೇರಿ ನಾಕಾ, ಸಾಯಿಬಾಬಾ ದೇವಸ್ಥಾನದಿಂದ ಕಾರ್ಯಕ್ರಮದ ಸ್ಥಳದ ವರೆಗೂ ನಡೆಯಿತು.ಶೋಭಾಯಾತ್ರೆಗೆ ನೂರಾರು ಮಹಿಳೆಯರ ಕುಂಭಮೇಳ ಮತ್ತಷ್ಟು ಮೆರಗು ನೀಡಿತು. ವಿವಿಧ ಜಾನಪದ ಕಲಾ ತಂಡಗಳು ಹಾಗೂ ಸಾವಿರಾರು ಜನ ಪಾಲ್ಗೊಂಡಿದ್ದರು. ದೇಶಭಕ್ತಿಗೀತೆಗಳೊಂದಿಗೆ ರಾಷ್ಟ್ರ ಭಕ್ತರ ಭವ್ಯ ಭಾವಚಿತ್ರದ ಮೆರವಣಿಗೆ ಗಮನ ಸೆಳೆಯಿತು.

ಸಮ್ಮೇಳನದ ಹಿನ್ನೆಲೆಯಲ್ಲಿ ಇಡೀ ನಗರದಾದ್ಯಂತ ಭಾಗವಾಧ್ವಜಗಳು, ದೊಡ್ಡ ಪ್ರಮಾಣದ ಬ್ಯಾನರ್ ಗಳಿಂದ ನಗರಕ್ಕೆ ನಗರವೇ ಕೇಸರಿ ಬಣ್ಣದಲ್ಲಿ ಕಂಗೊಳಿಸಿತು. ಅವಳಿ ನಗರದ ವಿವಿಧೆಡೆ ಶೋಭಾಯಾತ್ರೆಗೆ ಸಂಭ್ರಮದಿಂದ ಸ್ವಾಗತ ದೊರಕಿತು.ಹಿಂದೂ ಸಮಾಜೋತ್ಸವ ಸಮಿತಿ ಉಪಾಧ್ಯಕ್ಷ ಕೇಶವರಾಮ್ ಕೊಳ್ಳಿ, ಸಂಘಟನಾ ಕಾರ್ಯದರ್ಶಿ ಜಗದೀಶ್ ಎಸ್.ಪಿ., ಚಿನ್ಮಯಾನಂದ ಟೆಂಗಿನಕಾಯಿ, ಶಶಿಧರ ದಿಂಡೂರ, ರಘುನಾಥಸಾ ಮೆರವಾಡೆ, ರಾಜಣ್ಣ ಮಲ್ಲಾಡದ, ಮಂಜುನಾಥ ಕೊಟ್ನೆಕಲ್, ಚಂದ್ರಕಾಂತ ಚವ್ಹಾಣ, ಪ್ರೇಮಾ ಕಡೆಮನಿ, ಕಾರ್ಯದರ್ಶಿ ಪ್ರಕಾಶ ಉಗಲಾಟದ, ಶೈಲೇಶ್ ಬಾಗಮಾರ, ಹರೀಶ ಪೂಜಾರ, ರಾಜಶೇಖರ ಕುಂಬಿ, ನಾಗವೇಣಿ ಕಟ್ಟಿಮನಿ, ಡಾ. ಉಮೇಶ ಹಾದಿ, ಚಿನ್ಮಯಾನಂದ ಟೆಂಗಿನಕಾಯಿ ಇದ್ದರು.