ಜಗತ್ತಿನಲ್ಲಿರುವ ಅಶಾಂತಿ ಹೊಡೆದೋಡಿಸಲು ಹಿಂದುತ್ವ ಒಂದಾಗಲಿ: ಕೇಶವಜಿ

| Published : Oct 12 2025, 01:01 AM IST

ಜಗತ್ತಿನಲ್ಲಿರುವ ಅಶಾಂತಿ ಹೊಡೆದೋಡಿಸಲು ಹಿಂದುತ್ವ ಒಂದಾಗಲಿ: ಕೇಶವಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ಪಟ್ಟಣದ ವಾಸವಿ ನಗರದಲ್ಲಿರುವ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಹತ್ತಿರ ಕುಷ್ಟಗಿಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ವಿಜಯದಶಮಿ ಉತ್ಸವ ಹಾಗೂ ಸಂಘ ಶತಾಬ್ದಿ ಕಾರ್ಯಕ್ರಮ ನಡೆಯಿತು.

ಕುಷ್ಟಗಿ: ಮನುಕುಲದ ಉದ್ಧಾರಕ್ಕಾಗಿ, ಜಗತ್ತಿನಲ್ಲಿರುವ ಅಶಾಂತಿ ಹೋಗಲಾಡಿಸಲು ಹಿಂದುತ್ವ ಒಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗ ಕಾರ್ಯವಾಹ ಕೇಶವಜಿ ಹೇಳಿದರು.

ಪಟ್ಟಣದ ವಾಸವಿ ನಗರದಲ್ಲಿರುವ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಹತ್ತಿರ ಕುಷ್ಟಗಿಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ನಡೆದ ವಿಜಯದಶಮಿ ಉತ್ಸವ ಹಾಗೂ ಸಂಘ ಶತಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದುತ್ವ ಎಂದರೆ ರಾಷ್ಟ್ರೀಯತೆಯಾಗಿದೆ. ಜಗತ್ತಿಗೆ ಹಿಂದೂ ಸಮಾಜದ ಅವಶ್ಯಕತೆಯಿದೆ. ಆರ್‌ಎಸ್‌ಎಸ್‌ ಹಿಂದೂ ಸಮಾಜದಲ್ಲಿನ ದೋಷ ನಿವಾರಣೆಯ ಸಲುವಾಗಿ ಕೆಲಸ ಮಾಡುತ್ತಿದೆಯೇ ಹೊರತು ಯಾರ ವಿರೋಧಿಯೂ ಅಲ್ಲ. ಮುಂದಿನ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ವಿಸ್ತರಿಸುವ ಸಂಕಲ್ಪ ಮಾಡಲಾಗಿದೆ ಎಂದರು.

ಸಾಮಾಜಿಕ ಸಾಮರಸ್ಯ, ಸ್ವದೇಶಿ ಆಚರಣೆ, ಮಾತೃಭಾಷೆ ಬಳಕೆ, ಪರಿಸರ ರಕ್ಷಣೆ, ಮತದಾನ, ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯ ಪಾಲನೆ, ದೇಶಾಭಿಮಾನ ಕುರಿತು ಸಮಗ್ರ ಮಾಹಿತಿ ನೀಡಿದರು.

ಸಾನ್ನಿಧ್ಯ ವಹಿಸಿದ್ದ ನಿಡಶೇಸಿಯ ಅಭಿನವ ಕರಿಬಸವಶಿವಾಚಾರ್ಯರು ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತದ ಕಿರೀಟವಾಗಿದೆ. ಇದು ದೇಶದ ಸುಭದ್ರತೆಯ ಸಲುವಾಗಿ ಕೆಲಸ ಮಾಡುತ್ತಿದ್ದು, ಯುವಕರು ಸಂಘಟನೆ ಸೇರುವ ಮೂಲಕ ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಸ್ವಯಂ ಸೇವಕರಾದ ನಿತೀನ್‌ ಗೌಡ ಪಾಟೀಲ ಪ್ರಾರ್ಥಿಸಿದರು. ವೀರೇಶ ತೊಂಡಿಹಾಳ ಧ್ವಜಾರೋಹಣ ನೆರವೇರಿಸಿದರು. ಬಸವರಾಜ ಹೊಸೂರು ಹಾಗೂ ಆದೇಶ ಕಂಚಿ ವೈಯಕ್ತಿಕ ಗೀತೆ ಪ್ರಸ್ತುತಪಡಿಸಿದರು. ದೊಡ್ಡಬಸವ ಸುಂಕದ ಸ್ವಾಗತಿಸಿದರು. ಚಂದ್ರಶೇಖರ ಪಾಟೀಲ ವಚನಾಮೃತ ಹೇಳಿದರು. ಬಸನಗೌಡ ಪಾಟೀಲ ವಂದಿಸಿದರು. ಮುತ್ತಣ್ಣ ಗೋತಗಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.