ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕಳೆದ ಆರು ದಶಕಗಳಿಂದ ಹಲವು ವೈದ್ಯಕೀಯ ಸವಾಲನ್ನು ಜಂಟಿಯಾಗಿ ಎದುರಿಸಿರುವ ಭಾರತ ಹಾಗೂ ಅಮೆರಿಕ ಪ್ರಸ್ತುತ ಜಾಗತಿಕ ಸವಾಲಾದ ಮಾನಸಿಕ ಆರೋಗ್ಯ ವಿಚಾರದಲ್ಲೂ ಜೊತೆಗೂಡಿ ಕೆಲಸ ಮಾಡಬೇಕಿದೆ’ ಎಂದು ಯುಎಸ್ ಸರ್ಜನ್ ಜನರಲ್ ಡಾ। ವಿವೇಕ್‌ಮೂರ್ತಿ ಹೇಳಿದರು.ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಭಾರತ ಭೇಟಿ ಕಾರ್ಯಕ್ರಮದಲ್ಲಿರುವ ಅವರು, ಶುಕ್ರವಾರ ಇಲ್ಲಿನ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಸಂವಾದದಲ್ಲಿ ಪಾಲ್ಗೊಂಡರು.
‘ಸಿಡುಬು, ಪೋಲಿಯೋ, ಎಚ್‌ಐವಿ, ಕೋವಿಡ್ ಸೇರಿ ಇನ್ನಿತರ ಸವಾಲು ಎದುರಾದ ಸಂದರ್ಭದಲ್ಲಿ ಎರಡೂ ದೇಶಗಳು ಕೈಜೋಡಿಸಿ ಯಶಸ್ವಿಯಾಗಿವೆ. ಪರಸ್ಪರ ಬೆಂಬಲ, ಕಲಿಯುವಿಕೆ, ಒಟ್ಟಾಗಿ ಯೋಜನೆ ರೂಪಿಸುವ ಕೆಲಸ ಮಾಡಿವೆ. ಪ್ರಸ್ತುತ ಮಾನಸಿಕ ಆರೋಗ್ಯ ವಿಚಾರದಲ್ಲೂ ಎರಡೂ ದೇಶಗಳು ಒಗ್ಗೂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಹೇಳಿದರು.‘ಪ್ರಮುಖವಾಗಿ ಮೂರು ಕಾರಣಗಳು ಮಾನಸಿಕ ಆರೋಗ್ಯ ಹದಗೆಡಿಸುತ್ತಿವೆ. ಮೊದಲನೇಯದಾಗಿ ಒಂಟಿತನ ಕಾಡುವಿಕೆ, ಸಾಮಾಜದಿಂದ ದೂರವಾಗುವಿಕೆಯಿಂದ ಖಿನ್ನತೆ, ಆತಂಕಕ್ಕೆ ಒಳಗಾಗುವುದು ಮುಂದುವರಿದು ಆತ್ಮಹತ್ಯೆವರೆಗೆ ಹೋಗುತ್ತದೆ. ಎರಡನೇಯದು ಸಾಮಾಜಿಕ ಜಾಲತಾಣ ನಮ್ಮ ಆನ್‌ಲೈನ್ ಸಂಪರ್ಕ, ಸಹಜ ಸಂವಹನದ ಮೇಲೆ ಬೀರುತ್ತಿರುವ ಪರಿಣಾಮ ಹಾಗೂ ಮೂರನೇಯದಾಗಿ ಕೆಲಸ ಕಾರ್ಯದ ಒತ್ತಡಗಳು ಕಾಡುತ್ತಿವೆ. ಹೃದಯ ಸಂಬಂಧಿ ಕಾಯಿಲೆ, ಅಕಾಲಿಕ ಸಾವು ಸಂಭವಿಸುತ್ತಿರುವುದು ಗಂಭೀರ ವಿಚಾರ’ ಎಂದು ಕಳವಳ ವ್ಯಕ್ತಪಡಿಸಿದರು.
‘ಮನೋವ್ಯಾಕುಲತೆ ದುಷ್ಪರಿಣಾಮ ಹೆಚ್ಚಾಗಿ ಯುವ ಸಮುದಾಯವನ್ನು ಬಾಧಿಸುತ್ತಿದೆ. ಶಾಲಾ ಹಂತ, ಕೌಟುಂಬಿಕ, ಕಚೇರಿ, ಸಮುದಾಯಗಳಲ್ಲಿ ಇದು ಕಂಡುಬರುತ್ತಿದೆ. ಅವರಿಗೆ ಮಾನಸಿಕ ಸಮಸ್ಯೆ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಅವಮಾನಕಾರಿಯಲ್ಲ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ಸಾಮಾಜಿಕ ಸಂಬಂಧವನ್ನು ಗಟ್ಟಿಗೊಳಿಸಬೇಕು. ತೊಂದರೆಗೆ ಕಾರಣಗಳನ್ನು ಅರ್ಥೈಸಿಕೊಂಡು ಮುಂಜಾಗೃತಾ ಕ್ರಮ ವಹಿಸುವುದು ಅಗತ್ಯ’ ಎಂದು ಸಲಹೆ ನೀಡಿದರು.‘ಯಶಸ್ವಿ ಜೀವನದ ಬಗ್ಗೆ ಮಕ್ಕಳನ್ನು ಪ್ರಶ್ನಿಸಿದರೆ ಅವರು ಸಹಜವಾಗಿ ಹಣ, ಹೆಸರು, ಅಧಿಕಾರ ಬಯಸುವುದಾಗಿ ಹೇಳುತ್ತಾರೆ. ಆದರೆ, ಈ ಮೂರು ಸಂಗತಿಗಳೇ ನಮ್ಮ ಸಂತೋಷ ಕಿತ್ತುಕೊಳ್ಳುತ್ತಿವೆ. ಹೀಗಾಗಿ ಮಕ್ಕಳಲ್ಲಿ ಸಂಬಂಧ, ಪ್ರಗತಿ, ಮೌಲ್ಯವನ್ನು ತುಂಬಿ ಅವರನ್ನು ಗಟ್ಟಿಗೊಳಿಸಬೇಕು’ ಎಂದು ಡಾ। ಮೂರ್ತಿ ಹೇಳಿದರು.
ಮಾನಸಿಕ ಆರೋಗ್ಯ ಸಲಹೆ, ಚಿಕಿತ್ಸೆ ಕೈಗೆಟಕುವ ರೀತಿಯಲ್ಲಿರಬೇಕು ಎಂದ ಅವರು, ರಾಜ್ಯ ಸರ್ಕಾರದ ಟೆಲಿಮನಸ್ ಕಾರ್ಯಕ್ರಮವನ್ನು ಶ್ಲಾಘಿಸಿದರು.ಚೆನ್ನೈನ ಯುಎಸ್ ಕಾನ್ಸುಲ್ ಜನರಲ್ ಕ್ರಿಸ್ ಹಾಡ್ಜ್ಸ್, ಜಯದೇವ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಡಾ। ವಿವೇಕ್ ಮೂರ್ತಿ ಅವರ ಪಾಲಕರು ಇದ್ದರು.
ನಿಮ್ಹಾನ್ಸ್‌ಗೆ ಭೇಟಿಇದಕ್ಕೂ ಮುನ್ನ ಡಾ। ವಿವೇಕ್‌ಮೂರ್ತಿ ಅವರು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್) ಭೇಟಿ ನೀಡಿದರು. ಈ ವೇಳೆ ನಿಮ್ಹಾನ್ಸ್ ಹಾಗೂ ಅಮೆರಿಕದ ಸಂಸ್ಥೆಗಳ ನಡುವೆ ಮಾನಸಿಕ ಆರೋಗ್ಯ ಕುರಿತ ಜಂಟಿ ಕಾರ್ಯಗಳ ಕುರಿತು ಚರ್ಚೆ ನಡೆದವು. ಟೆಲಿಮನಸ್ ಸೆಂಟರ್‌ಗೆ ಭೇಟಿ ನೀಡಿ ಕಾರ್ಯಾಚರಣೆಯ ಮಾಹಿತಿ ಪಡೆದರು. ಈ ವೇಳೆ ನಿಮ್ಹಾನ್ಸ್ ಇಕೋ ಕಾರ್ಯಕ್ರಮ ನಡೆಯಿತು. ನಿಮ್ಹಾನ್ಸ್ ನಿರ್ದೇಶಕಿ ಡಾ। ಪ್ರತಿಮಾಮೂರ್ತಿ ಇದ್ದರು.