ಕನ್ನಡ ನಮ್ಮೆಲ್ಲರ ಉಸಿರಾಗಲಿ: ಪ್ರೊ. ನವಲಗುಂದ

| Published : Nov 02 2024, 01:39 AM IST

ಕನ್ನಡ ನಮ್ಮೆಲ್ಲರ ಉಸಿರಾಗಲಿ: ಪ್ರೊ. ನವಲಗುಂದ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆ ಹಾಗೂ ಕರ್ನಾಟಕ ರಾಜ್ಯದ ಹಿರಿಮೆ, ಗರಿಮೆ, ಸಾಂಸ್ಕೃತಿಕ, ಧಾರ್ಮಿಕ,ಶೈಕ್ಷಣಿಕ, ನೆಲ, ಜಲದ ಕುರಿತು ಕನ್ನಡ ನಾಡು ನುಡಿಯ ಗೀತೆ ಹಾಡುವ ಮೂಲಕ ತಿಳಿಸಿಕೊಟ್ಟರು

ಮುಂಡರಗಿ: ಹೆಸರಾತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬುದು ಇನ್ನೂ ಘೋಷಣೆಯಾಗಿಯೇ ಉಳಿದಿದೆ. ಇದು ಪೂರ್ಣಗೊಳ್ಳಲು ಮತ್ತು ಅನೇಕ ಕವಿಗಳ ಆಶಯ ಈಡೇರಬೇಕಾದರೆ ನಾವೆಲ್ಲ ಕನ್ನಡ ಭಾಷೆಯ ಬಗ್ಗೆ ಮನಪೂರ್ವಕವಾಗಿ ಅಭಿಮಾನ ಹೊಂದಬೇಕು. ಕನ್ನಡ ನಮ್ಮೆಲ್ಲರ ಉಸಿರಾಗಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವೈ. ನವಲಗುಂದ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ಕನ್ನಡ ಸಂಘದ ಆಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜರುಗಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಲು ಅನೇಕ ಕನ್ನಡ ಸಾಹಿತಿಗಳ ಕೊಡುಗೆ ಇದೆ. ಇದನ್ನು ಉಳಿಸಿಕೊಂಡು ಸಮೃದ್ಧಿ ರಾಜ್ಯ ಮಾಡಲು ನಾವೆಲ್ಲ ಸತತವಾಗಿ ಪರಿಶ್ರಮಿಸೋಣ ಎಂದರು.

ವಿಶ್ರಾಂತ ಪ್ರಾಥಮಿಕ ಶಾಲಾ ಶಿಕ್ಷಕಿ ಎಸ್.ಎ. ಹಾರೋಗೇರಿ ಕನ್ನಡ ಧ್ವಜಾರೋಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆ ಹಾಗೂ ಕರ್ನಾಟಕ ರಾಜ್ಯದ ಹಿರಿಮೆ, ಗರಿಮೆ, ಸಾಂಸ್ಕೃತಿಕ, ಧಾರ್ಮಿಕ,ಶೈಕ್ಷಣಿಕ, ನೆಲ, ಜಲದ ಕುರಿತು ಕನ್ನಡ ನಾಡು ನುಡಿಯ ಗೀತೆ ಹಾಡುವ ಮೂಲಕ ತಿಳಿಸಿಕೊಟ್ಟರು.

ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಸವರಾಜ ರಾಮೇನಹಳ್ಳಿ, ಎಸ್.ಎಸ್. ಗಡ್ಡದ, ಪ್ರಶಾಂತಗೌಡ ಪಾಟೀಲ, ವೈ.ಎಚ್. ಬಚೇನಹಳ್ಳಿ, ಬಿ.ವಿ. ಮುದ್ದಿ, ಬಿಇಒ ಎಚ್.ಎಂ. ಪಡ್ನೇಶಿ, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎಸ್. ಅಣ್ಣಿಗೇರಿ, ವೆಂಕಟೇಶ ಗುಗ್ಗರಿ, ಆನಂದ ರಾಮೇನಹಳ್ಳಿ, ಈರಣ್ಣ ಹುಲ್ಲೂರು, ಅಡಿವೆಪ್ಪ ಚಲವಾದಿ, ಪಾಲಾಕ್ಷಿ ಗಣದಿನ್ನಿ, ಸಾಹಿತಿ, ಪತ್ರಕರ್ತ ಸಿ.ಕೆ. ಗಣಪ್ಪನವರ, ಬಸವರಾಜ ಬೆನ್ನೂರ, ಕಾಶಿನಾಥ ಶಿರಬಡಗಿ, ಉಮೇಶ ಕೊರಡಕೇರಿ, ಶಿವು ಹಿರೇಮಠ, ಶಿವು ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.