ಕನ್ನಡ ಮನಗಳು ಒಂದಾಗುವ ಮೂಲಕ ಭಾಷೆ, ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ನಾಡು ರಕ್ಷಣೆಗೆ ಮತ್ತು ತಾಯಿ ಭುವನೇಶ್ವರಿ ಸೇವೆಗೆ ತಾವು ಸದಾ ಸಿದ್ಧನಿದ್ದೇನೆ ಎಂದು ಕನ್ನಡ ರಕ್ಷಣಾ ವೇದಿಕೆ ತಾಲೂಕು ಘಟಕದ ನೂತನ ಅಧ್ಯಕ್ಷ ಎಸ್. ಮಂಜುನಾಥ ನುಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಕನ್ನಡ ಮನಗಳು ಒಂದಾಗುವ ಮೂಲಕ ಭಾಷೆ, ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ನಾಡು ರಕ್ಷಣೆಗೆ ಮತ್ತು ತಾಯಿ ಭುವನೇಶ್ವರಿ ಸೇವೆಗೆ ತಾವು ಸದಾ ಸಿದ್ಧನಿದ್ದೇನೆ ಎಂದು ಕನ್ನಡ ರಕ್ಷಣಾ ವೇದಿಕೆ ತಾಲೂಕು ಘಟಕದ ನೂತನ ಅಧ್ಯಕ್ಷ ಎಸ್. ಮಂಜುನಾಥ ನುಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎನ್. ನಾರಾಯಣ ಗೌಡ ಬಣದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಕನ್ನಡ ಕೇವಲ ಭಾಷೆಯಾಗಿರದೇ ನಮ್ಮ ಹೆಮ್ಮೆ ಮತ್ತು ಅಸ್ಮಿತೆಯಾಗಿದ್ದು, ನಾಡಿನ ಸಂಪತ್ತನ್ನು ರಕ್ಷಿಸುವ ಹೊಣೆ ಎಲ್ಲರದ್ದಾಗಿದೆ ಎಂದ ಅವರು, ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಪ್ರತಿಯೊಬ್ಬರಲ್ಲೂ ಕನ್ನಡಾಭಿಮಾನ ಬೆಳೆಯುವಂತಾಗಬೇಕು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ನಾಡಿನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಹೊರ ರಾಜ್ಯದಿಂದ ಉದ್ಯೋಗ ಮತ್ತಿತತರ ಕಾರಣಗಳಿಂದ ರಾಜ್ಯಕ್ಕೆ ಆಗಮಿಸಿದವರಿಗೂ ಸಹ ಕನ್ನಡ ಕಲಿಸಬೇಕು ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಂಜು ಕೇಬಲ್ ಮಾತನಾಡಿ, ಅಧ್ಯಕ್ಷರಾದ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ವೇದಿಕೆ ರಾಜ್ಯಾದ್ಯಂತ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ಇಂದು ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ಹಳ್ಳಿ ಹಳ್ಳಿಯಲ್ಲೂ ಕರವೇ ಕಾರ್ಯಕರ್ತರಿದ್ದಾರೆ. ೭೨ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಬಲ ಹೊಂದಿರುವ ನಮ್ಮ ವೇದಿಕೆ ಕನ್ನಡಿಗರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಕನ್ನಡಿಗರಿಗೆ ಉದ್ಯೋಗ, ಕನ್ನಡ ಶಾಲೆಗಳ ಉಳಿವು, ನಾಮಫಲಕಗಳಲ್ಲಿ ಕನ್ನಡ ಜಾರಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು. ಇದು ಕನ್ನಡಿಗರ ನಾಡು. ಇಲ್ಲಿ ಕನ್ನಡಿಗರೇ ಸಾರ್ವಭೌಮರು ಎಂಬುದನ್ನು ಯಾರೂ ಮರೆಯಬಾರದು. ಕನ್ನಡದ ವಿಚಾರ ಬಂದಾಗ ರಾಜಿ ಇಲ್ಲದೆ, ಮೊದಲು ರಸ್ತೆಗಿಳಿದು ಹೋರಾಟ ಮಾಡುವುದು ನಮ್ಮ ವೇದಿಕೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಗೌರವ ಅಧ್ಯಕ್ಷ ನಾಗರಾಜ್, ಹೊನ್ನಪ್ಪ, ರಾಘವೇಂದ್ರ, ದೇವರಾಜ್, ಪ್ರಧಾನ ಕಾರ್ಯದರ್ಶಿ ವಿಜಯ್ ಶಕುನವಳ್ಳಿ, ಮಹೇಶ್ ಕಾರ್ವಿ, ಸ್ವರೂಪ್, ನಿಂಗರಾಜು, ಮಂಜುನಾಥ್, ಕೇಶವ್, ಚನ್ನಬಸಪ್ಪ, ಪುನೀತ್ ಕುಮಾರ್, ಸಂದೀಪ್, ವಿನಯ್ ಕುಮಾರ್, ಭರತ್ ಸ್ವಾಮಿ, ಕುಮಾರ್ ಕುಳುವಳ್ಳಿ, ಮಂಜಣ್ಣ ಮೊದಲಾದವರಿದ್ದರು.