ಕನ್ನಡ ಮನೆ, ಮನದ ಭಾಷೆಯಾಗಿ ಉಳಿಯಲಿ: ಶ್ರೀ ಶಂಭುನಾಥ ಸ್ವಾಮೀಜಿ

| Published : Mar 08 2024, 01:49 AM IST

ಕನ್ನಡ ಮನೆ, ಮನದ ಭಾಷೆಯಾಗಿ ಉಳಿಯಲಿ: ಶ್ರೀ ಶಂಭುನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಡು-ನುಡಿ, ನೆಲ-ಜಲ ಉಳಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನಾಡು-ನುಡಿ, ನೆಲ-ಜಲ ಉಳಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ಹೇಳಿದರು.

ತಾಲೂಕಿನ ಹಿರೀಸಾವೆ ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಆದಿಚುಂಚನಗಿರಿ ಮಠ, ಕರ್ನಾಟಕ ರಾಜ್ಯ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್, ಪಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪಾಠಶಾಲೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಆಶಿರ್ವಚನ ನೀಡಿದರು. ಮಕ್ಕಳು ದೇಶದ ಆಸ್ತಿ, ಇನ್ನೂ ಕನ್ನಡ ನಮ್ಮ ಮಾತೃಭಾಷೆ, ಈ ಎರಡನ್ನೂ ಒಂದೇ ವೇದಿಕೆಯ ಮೇಲೆ ತರುವ ಮೂಲಕ ನಾಡು-ನುಡಿಯನ್ನು ಹೆಮ್ಮರವಾಗಿ ಬೆಳೆಸುವಲ್ಲಿ ರಾಜ್ಯ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮ್ಮೇಳನಾಧ್ಯಕ್ಷೆ ಕು.ಗಾನವಿ ಎಸ್.ಗೌಡ ಮಾತನಾಡಿ, ಕನ್ನಡ ಭಾಷೆಯು ತನ್ನ ಪಾರಮ್ಯವನ್ನು ಮೆರೆಯಬೇಕಾದರೆ ಅದು ಮನೆ-ಮನದ ಭಾಷೆಯಾಗಿ ಉಳಿಯಬೇಕು. ಹೃದಯಕ್ಕೆ ಒಂದು ಭಾಷೆ, ದುಡಿಮೆಗೆ ಇನ್ನೊಂದು ಭಾಷೆ ಎನ್ನುವ ಇಬ್ಬಂದಿತನದ ಪರಿಸ್ಥಿತಿಯನ್ನು ತೊಡೆದು ಹಾಕಿ ನಲಿಯಲು, ನಮ್ಮದೆಲ್ಲವನ್ನೂ ಜಗತ್ತಿನೊಂದಿಗೆ ಹಂಚಿಕೊಳ್ಳಲು ಜಗತ್ತಿನ ಸಶಕ್ತ, ಸಮರ್ಥ ಭಾಷೆಯಾಗಿ ಕನ್ನಡ ರಾರಾಜಿಸಬೇಕೆಂದರು.ಜಗತ್ತಿನ ಎಲ್ಲ ತಿಳಿವನ್ನು ಉಣಬಡಿಸುವ ಜ್ಞಾನದ ಕೌಶಲದ ಭಾಷೆಯಾಗಿ ಈ ಹಿಂದೆಯೂ ವಿಜೃಂಭಿಸಿದ್ದ ಕನ್ನಡ ಮುಂದೆಯೂ ಹಾಗೆಯೇ ವೈಭವ ಕಾಣಬೇಕು. ಕನ್ನಡವೆಂಬುದು ಸಭ್ಯತೆಯ, ಸಜ್ಜನಿಕೆಯ ಗುರುತು ಮಾತ್ರವೇ ಅಲ್ಲ, ಅದು ಮಹತ್ವಾಕಾಂಕ್ಷೆಯ ಮಹಾನ್ ಅನ್ವೇಷಣೆಯ ಭಾಷೆಯೂ ಆಗಿದೆ ಎನ್ನುವುದನ್ನು ಯಾರೂ ಮರೆಯಬಾರದು ಎಂದರು.ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸಾಹಿತ್ಯದ ಅಭಿರುಚಿಯ ನಡುವೆ ಮಕ್ಕಳ ಸಂಭ್ರಮ ಇಮ್ಮಡಿಗೊಂಡಿದೆ. ಮಕ್ಕಳಲ್ಲಿನ ಸಾಹಿತ್ಯದ ಆಸಕ್ತಿಗೆ ನೀರೆರೆಯುವ ಕೆಲಸ ಆಗಬೇಕು. ಹೊರ ರಾಜ್ಯಗಳಲ್ಲೂ ಮಕ್ಕಳ ಸಾಹಿತ್ಯ ಸಮ್ಮೇಳನ ಗಮನ ಸೆಳೆದಿದ್ದು. ಮುಂಬರುವ ದಿನಗಳಲ್ಲಿ ಮುಂಬೈ ಮತ್ತು ಬೆಂಗಳೂರಿನಲ್ಲಿಯೂ ಸಮ್ಮೇಳನ ಜರುಗಲಿದೆ. ಆ ಮೂಲಕ ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಲಾಗುವುದು. ಎಲ್ಲಾ ಶಾಲೆಗಳಲ್ಲೂ ಮಕ್ಕಳ ಸಾಹಿತ್ಯ ಪರಿಷತ್ತಿನ ಘಟಕಗಳು ಕ್ರಿಯಾಶೀಲವಾಗಬೇಕೆಂದರು.ಹಿರಿಯ ಸಾಹಿತಿ ಬೆಳಗುಲಿ ಕೆಂಪಯ್ಯ ಮಾತನಾಡಿ, ಕೇವಲ ಬರವಣಿಗೆಯಿಂದ ಸಾಹಿತ್ಯ ಜ್ಞಾನ ಬರುವುದಿಲ್ಲ ಸಾಮಾಜದ ಒಳಿತಿಗೆ ಸಮಾಜದ ಅಂಕು-ಡೊಂಕುಗಳನ್ನೇ ಕವನ ಅಥವಾ ಕಾದಂಬರಿ ರೂಪದಲ್ಲಿ ಬರೆಯುವ ಸಾಮಾನ್ಯ ಜ್ಞಾನ ಇರಬೇಕು, ಕವನಗಳನ್ನು ಓದುವುದರ ಜತೆಗೆ ಅದರ ಒಳ ಅಂಶಗಳನ್ನು ಅರ್ಥ ಮಾಡಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗಿರುತ್ತದೆ ಎಂದರು. ಕನ್ನಡ ನಾಡು-ನುಡಿ ಹಾಗೂ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿರುವ ಶಾಸನಗಳು ಹಾಗೂ ಶಿಥಿಲಾವಸ್ಥೆ ತಲುಪಿರುವ ದೇಗುಲಗಳನ್ನು ಜೀರ್ಣೋದ್ಧಾರಗೊಳಿಸಿ ಸಂರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಮನವಿ ಮಾಡಿದರು. ರಾಜ್ಯ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್ ಮಾತನಾಡಿ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಪ್ರಾರಂಭಗೊಂಡ ರಾಜ್ಯ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ಶ್ರೀ ಆದಿಚುಂಚನಗಿರಿ ಮಠದ ಸಹಕಾರದೊಂದಿಗೆ ರಾಜ್ಯಾವ್ಯಾಪ್ತಿ ಅಲ್ಲದೆ ರಾಷ್ಟ್ರವ್ಯಾಪ್ತಿ ಬೆಳೆದಿದ್ದು, ನವದೆಹಲಿಯಲ್ಲಿ ಸಮ್ಮೇಳನ ಪ್ರಥಮ ಸಮ್ಮೇಳನ ಆಚರಿಸಲಾಯಿತು. ಮುಂಬರುವ ದಿನಗಳಲ್ಲಿ ಮುಂಬೈನಲ್ಲಿ ಸಮ್ಮೇಳನ ಆಚರಿಸಲು ಸಿದ್ದತೆ ಮಾಡಲಾಗುತ್ತಿದೆ ಎಂದರು. ಬೆಳ್ಳಿರಥದಲ್ಲಿ ಮೆರವಣಿಗೆ:

ಸಮ್ಮೇಳನದ ಅಧ್ಯಕ್ಷರು, ಸಹ ಅಧ್ಯಕ್ಷರನ್ನು ಬೆಳ್ಳಿರಥದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ರಥಕ್ಕೆ ಗ್ರಾಪಂ ಸದಸ್ಯ ಎಚ್.ಕೆ.ಸುಧಾಕರ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಹುಲಿಕುಣಿತ, ಕಂಸಾಳೆ, ಕೋಲಾಟ, ಕಲಶಗಳನ್ನು ಹೊತ್ತ ಮಕ್ಕಳು ಹಾಗೂ ಬ್ಯಾಂಡ್‌ಸೆಟ್ ವಾದ್ಯಗಳು ಮೇಳೈಸಿದವು. ಇದಕ್ಕೂ ಮುನ್ನ ಶಾಲಾ ಆವರಣದಲ್ಲಿ ರಾಷ್ಟ್ರ ಧ್ವಜ, ಕನ್ನಡಧ್ವಜ ಹಾಗೂ ಪರಿ?ತ್ ಧ್ವಜಗಳನ್ನು ಆರೋಹಣ ಮಾಡಲಾಯಿತು. ಶ್ರೀ ಶಂಭುನಾಥ ಸ್ವಾಮೀಜಿ ಕನುವನಘಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ೫ನೇ ತರಗತಿ ವಿದ್ಯಾರ್ಥಿ ಗಗನ್‌ಗೌಡ ರಚಿಸಿರುವ ಚಿಲಿಪಿಲಿ ಕವನ ಸಂಗ್ರಹದ ಲೋಕಾರ್ಪಣೆ ಮಾಡಿದರು. ಸಮ್ಮೇಳನದ ಅಧ್ಯಕ್ಷೆ ಗಾನವಿ ಎಸ್.ಗೌಡ, ಸಹ ಅಧ್ಯಕ್ಷೆ ಎಸ್.ಎನ್.ಶೃತಿ, ಡಿ.ಲೀಲಾವತಿ ಅವರನ್ನು ಗೌರವಿಸಲಾಯಿತು. ವಿಚಾರ ಗೋಷ್ಠಿಯಲ್ಲಿ ೧೨ ಹಾಗೂ ಕವಿಗೋಷ್ಠಿಯಲ್ಲಿ ೫೨ ವಿದ್ಯಾರ್ಥಿಗಳು ವಿಚಾರ ಮಂಡನೆಗೊಳಿಸಿ ನೆರೆದಿದ್ದ ಸಾಹಿತ್ಯಾಭಿಮಾನಿಗಳ ಗಮನ ಸೆಳೆದರು. ವೇದಿಕೆ ಮುಂಭಾಗ ಬಾಹುಬಲಿ ಕೃಷಿ ರೈತ ಉತ್ಪಾದರ ಕಂಪನಿಯು ತೆರದಿದ್ದ ಸಿರಿಧಾನ್ಯಗಳ ಆಹಾರ ಮಳಿಗೆಯನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಶ್ರೀ ಶಂಭುನಾಥಸ್ವಾಮೀಜಿ ಸೇರಿದಂತೆ ಗಣ್ಯರು ಭೇಟಿ ನೀಡಿ ವೀಕ್ಷಿಸಿ ಮುಖ್ಯಸ್ಥ ಎಸ್.ಜಿ.ಚಕ್ರವರ್ತಿ ಹಾಗೂ ತಂಡವನ್ನು ಅಭಿನಂದಿಸಿದರು. ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಹಿರೀಸಾವೆ ಸಿದ್ಧಾಶ್ರಮದ ಶ್ರೀ ಗುರುಮೂರ್ತಿ ಗುರೂಜಿ, ಶ್ರೀ ಶಿವಾನಂದ ಗುರೂಜಿ, ಜಿಪಂ ಮಾಜಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ ಪತ್ನಿ ಗೀತಾ ಗೋಪಾಲಸ್ವಾಮಿ, ತಾಪಂ ಮಾಜಿ ಸದಸ್ಯೆ ಪ್ರಮೀಳಾ ಪ್ರಕಾಶ್, ಗ್ರಾಪಂ ಉಪಾಧ್ಯಕ್ಷೆ ಸವಿತಾ, ಸದಸ್ಯ ಎಚ್.ಕೆ.ಸುಧಾಕರ್, ಜಿಲ್ಲಾಧ್ಯಕ್ಷ ಬಿ. ಕೆ. ಗಂಗಾಧರ್, ಹೋಬಳಿ ಅಧ್ಯಕ್ಷ ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್, ಇಸಿಒ ರವೀಂದ್ರ, ಸಿಆರ್‌ಪಿ ಧರ್ಮಪಾಲ್, ಮುಖ್ಯಶಿಕ್ಷಕಿ ಧನಲಕ್ಷ್ಮೀ, ಸಹಶಿಕ್ಷಕ ಪುರುಷೋತ್ತಮ್, ಪ್ರಮುಖರಾದ ರಘುರಾಂ, ಪುಟ್ಟರಾಜು, ಎಂ.ಆರ್.ವಾಸು ಮತ್ತಿತರರಿದ್ದರು.