ಕೆಡಿಸಿಸಿ ಬ್ಯಾಂಕ್‌ ಕೃಷಿಯೇತರ ಸಾಲದ ಬಡ್ಡಿದರ ಇಳಿಕೆ ಮಾಡಲಿ

| Published : Sep 22 2024, 01:56 AM IST

ಸಾರಾಂಶ

ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಕೃಷಿಯೇತರ ಸಾಲ ನೀಡುವ ಬಡ್ಡಿದರಲ್ಲಿ ಕನಿಷ್ಠ ಶೇ. ೧ರಷ್ಟು ಇಳಿಕೆ ಮಾಡಿದರೆ ಅನುಕೂಲವಾಗುತ್ತದೆ. ಇದರಿಂದ ಸಂಘಗಳ ಆರ್ಥಿಕ ಶಕ್ತಿ ಹೆಚ್ಚಾಗಲಿದೆ ಎಂದು ಸಹಕಾರಿ ಸಂಘಗಳ ಪ್ರತಿನಿಧಿಗಳು ಕೆಡಿಸಿಸಿ ಬ್ಯಾಂಕ್‌ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಆಗ್ರಹಿಸಿದರು.

ಶಿರಸಿ: ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಕೃಷಿಯೇತರ ಸಾಲ ನೀಡುವ ಬಡ್ಡಿದರಲ್ಲಿ ಕನಿಷ್ಠ ಶೇ. ೧ರಷ್ಟು ಇಳಿಕೆ ಮಾಡಿದರೆ ಅನುಕೂಲವಾಗುತ್ತದೆ. ಇದರಿಂದ ಸಂಘಗಳ ಆರ್ಥಿಕ ಶಕ್ತಿ ಹೆಚ್ಚಾಗಲಿದೆ ಎಂದು ಸಹಕಾರಿ ಸಂಘಗಳ ಪ್ರತಿನಿಧಿಗಳು ಆಗ್ರಹಿಸಿದರು.

ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನ (ಕೆಡಿಸಿಸಿ) ನಗರದ ಪ್ರಧಾನ ಶಾಖೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣೆ ಸಭೆಯಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳ ಪ್ರತಿನಿಧಿಗಳು ಒತ್ತಾಯಿಸಿದರು.

ಸದಸ್ಯ ಎನ್.ಬಿ. ಹೆಗಡೆ ಮತ್ತಿಹಳ್ಳಿ ಮಾತನಾಡಿ, ಕೆಡಿಸಿಸಿ ಬ್ಯಾಂಕ್ ಕೃಷಿಯೇತರ ಸಾಲ ನೀಡುವ ಸಲುವಾಗಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ ಶೇ. ೧೨ರ ಬಡ್ಡಿದರದಲ್ಲಿ ಸಾಲ ಒದಗಿಸುತ್ತಿದೆ. ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ಈ ಹಣವನ್ನು ಶೇ. ೧೪ರ ಬಡ್ಡಿದರದಲ್ಲಿ ಸಣ್ಣ ಉದ್ದಿಮೆದಾರರು, ಕೃಷಿಯೇತರ ಸಾಲ ಪಡೆಯುವವರಿಗೆ ನೀಡುತ್ತಿವೆ. ಆದರೆ, ಈ ಹಣ ಮರುಪಾವತಿ ಕಷ್ಟವಾಗುತ್ತಿರುವ ಸಲುವಾಗಿ ಕೆಡಿಸಿಸಿ ಬ್ಯಾಂಕ್ ನೀಡುವ ಈ ಸಾಲದ ಬಡ್ಡಿಯಲ್ಲಿ ಶೇ. ೧ರಷ್ಟು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಬೆಳೆ ಸಾಲಮನ್ನಾ ಮಾಡಿದ್ದರು. ೧೭೯೬ ರೈತರ ಸಾಲ ₹೫.೪೧ ಕೋಟಿ ಮನ್ನಾ ಹಣ ಬರಬೇಕಿದೆ ಎಂದರು.

ಗ್ರಾಮೀಣ ಭಾಗಕ್ಕೂ ಎಟಿಎಂ ಸೇವೆ ಬರಲಿ: ಕೆಡಿಸಿಸಿ ಬ್ಯಾಂಕ್‌ನ ಸಂಚಾರಿ ಎಟಿಎಂ ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯ ಒದಗಿಸುತ್ತಿಲ್ಲ. ಕೇವಲ ನಗರ ಭಾಗದಲ್ಲಿ ಸೇವೆ ಇದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ರೀತಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ಮತ್ತು ಸಂಚಾರಿ ಎಟಿಎಂ ವಾಹನ ಗ್ರಾಮೀಣ ಭಾಗಕ್ಕೂ ತೆರಳಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಸದಸ್ಯರು ಹೇಳಿದರು.ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ, ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಈ ಸೌಲಭ್ಯ ಒದಗಿಸಲಾಗುತ್ತಿಲ್ಲ. ಕಳೆದ ವರ್ಷ ಮೊಬೈಲ್ ಎಟಿಎಂನಿಂದ ₹೫೬ ಸಾವಿರ ಲಾಭವಾಗಿದೆ. ಆದರೆ, ನಿರ್ವಹಣೆಗೆ ಖರ್ಚು ₹೭೬ ಸಾವಿರವಾಗಿದೆ. ಸಹಕಾರಿ ಸಾಕ್ಷರತಾ ಕಾರ್ಯಕ್ರಮಗಳಿಗೂ ಈ ವಾಹನ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಲಾಭದಾಯವಲ್ಲದಿದ್ದರೂ ಸೇವೆಯ ದೃಷ್ಟಿಯಿಂದ ಸಂಚಾರಿ ಎಟಿಎಂ ವಾಹನ ಮುಂದುವರಿಸುತ್ತಿದ್ದೇವೆ ಎಂದರು.

ಮೊಬೈಲ್ ಬ್ಯಾಂಕಿಂಗ್ ಅನುಮತಿ ಸಾಧ್ಯತೆ: ರಾಷ್ಟ್ರೀಕೃತ ಬ್ಯಾಂಕ್‌ಗಳ ಮಾದರಿಯಲ್ಲಿಯೇ ಕೆಡಿಸಿಸಿ ಬ್ಯಾಂಕ್‌ನಿಂದ ಆನ್‌ಲೈನ್ ಮೊಬೈಲ್ ಬ್ಯಾಂಕಿಗೆ ಅನುಮತಿ ನೀಡುವಂತೆ ಆರ್‌ಬಿಐ ಬಳಿ ವಿನಂತಿಸಿದ್ದೇವೆ. ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಸದ್ಯದಲ್ಲಿಯೇ ಆರಂಭವಾಗುವ ನಿರೀಕ್ಷೆಯಿದೆ ಎಂದು ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು.

ಬ್ಯಾಂಕ್‌ನ ೫೩ ಶಾಖೆಗಳ ಪೈಕಿ ಕೇವಲ ೨ ಶಾಖೆಗಳು ಮಾತ್ರ ಹಾನಿ ಅನುಭವಿಸಿವೆ. ಶಿರಸಿಯ ಕೆಎಚ್‌ಬಿ ಕಾಲೋನಿ ಶಾಖೆ ₹೮ ಲಕ್ಷ, ಕ್ಯಾಸಲ್ ರಾಕ್ ಶಾಖೆ ₹೧೨ ಲಕ್ಷ ಹಾನಿ ಅನುಭವಿಸಿದೆ. ಹಾನಿ ಮುಂದುವರಿದರೆ ಆರ್‌ಬಿಐ ಅನುಮತಿ ಪಡೆದು ಶಾಖೆಯನ್ನು ಅಗತ್ಯ ಇರುವೆಡೆ ಸ್ಥಳಾಂತರಿಸಲಾಗುವುದು ಎಂದರು.

ಕೆಡಿಸಿಸಿ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿಗೆ ವಸ್ತ್ರಸಂಹಿತೆ ಜಾರಿ ಮಾಡಲು ತೀರ್ಮಾನಿಸಿದ್ದೇವೆ. ಆರ್‌ಬಿಐ ಮಾರ್ಗಸೂಚಿಯಂತೆ ನಿರ್ದೇಶಕ ಸಾಲ ಚುಕ್ತವಾಗಿದೆ ಎಂದರು

ಸಭೆಯಲ್ಲಿ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಶ್ರೀಕಾಂತ ಘೊಟ್ನೇಕರ, ಗಣಪತಿ ಹೆಗಡೆ ಸೋಂದಾ, ಕೃಷ್ಣ ದೇಸಾಯಿ, ಶಿವಾನಂದ ಹೆಗಡೆ ಕಡತೋಕಾ, ಪ್ರಕಾಶ ಗುನಗಿ, ಆರ್.ಎಂ. ಹೆಗಡೆ, ರಾಮಕೃಷ್ಣ ಹೆಗಡೆ, ಎಲ್.ಟಿ. ಪಾಟೀಲ, ಭೀರಣ್ಣ ನಾಯಕ, ಗಜಾನನ ಪೈ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ರಾಘವೇಂದ್ರ ಶಾಸ್ತ್ರಿ, ಪ್ರಮೋದ ದವಳೆ ಮತ್ತಿತರರು ಇದ್ದರು.