ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮೀಸಲಾತಿ ತೆಗೆದು ಹಾಕುತ್ತೇವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ಎಸ್ಸಿ ಪೋರ್ಚಾ ಘಟಕ ಖಂಡಿಸುತ್ತಿರುವುದಾಗಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸೆ ಹೇಳಿದರು,ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ರಾಹುಲಗಾಂಧಿ ಅವರು ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಹೇಳಿಕೆ ನೀಡುವುದು ಕೆಲಸ ಖಂಡನೀಯ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕೊಟ್ಟಿರುವ ಮೀಸಲಾತಿ ದಲಿತರ ಹಕ್ಕು ಅದು ಕಾಂಗ್ರೆಸ್‌ನ ಭಿಕ್ಷೆಯಲ್ಲ. ಅದನ್ನು ಅರಿತುಕೊಳ್ಳದ ರಾಹುಲ ಗಾಂಧಿ ಅವರು ಅಪ್ರಭುದ್ಧತೆ ಹೇಳಿಕೆ ಕೊಡುತ್ತಿದ್ದಾರೆ. ಈ ಮೂಲಕ ಸಂವಿಧಾನಕ್ಕೆ ಅವರು ಅಗೌರವ ತೋರಿಸುತ್ತಿದ್ದಾರೆ. ದಲಿತರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಮೊದಲಿನಿಂದಲೂ ನೆಹರು, ರಾಜೀವ ಗಾಂಧಿ, ರಾಹುಲಗಾಂಧಿ ಅವರು ದಲಿತರ ವಿರೋಧಿಗಳೇ ಆಗಿದ್ದಾರೆ. ಕಾಂಗ್ರೆಸ್‌ಗೆ ದಲಿತರನ್ನು ಉದ್ಧಾರ ಮಾಡಬೇಕು ಎಂಬುದಿಲ್ಲ. ಕಾಂಗ್ರೆಸ್ ನವರಿಗೆ ದಲಿತರ ಬಗ್ಗೆ, ಅಂಬೇಡ್ಕರ್ ಬಗ್ಗೆ ಕಾಳಜಿ ಇದ್ದರೆ ದಲಿತರಿಗಾಗಿ ಕೆಲಸ ಮಾಡಬಹುದಾಗಿತ್ತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ ಅವರ ಸ್ಥಳಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಅಂಬೇಡ್ಕರ್‌ಗೆ ಭಾರತರತ್ನ ಕೊಡುವ ಮೂಲಕ ಗೌರವ ಸಲ್ಲಿಸಿದ್ದು ಬಿಜೆಪಿ ಎಂಬುದನ್ನು ಕಾಂಗ್ರೆಸ್ ನೆನಪು ಮಾಡಿಕೊಳ್ಳಬೇಕು ಎಂದರು.ಡಾ.ಬಾಬಾ ಸಾಹೇಬರ, ದಲಿತರ, ಸಂವಿಧಾನದ ವಿರುದ್ಧ ಯಾರಾದರೂ ಮಾತನಾಡಿದರೆ ಎಲ್ಲ ದಲಿತ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ತಕ್ಷಣ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ದಲಿತರಾಗಿರುವುದರಿಂದ ದಲಿತರ ವಿರೋಧಿ ಹೇಳಿಕೆ ನೀಡಿದ ರಾಹುಲ ಗಾಂಧಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಕಾಂಗ್ರೆಸ್‌ನ ಒಳಸಂಚಿನ ಬಗ್ಗೆ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಮನೆಮನೆಗೆ ಮುಟ್ಟಿಸುತ್ತೇವೆ. ಬಳಿಕ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ತಿರಸ್ಕಾರ ಮಾಡುವ ಮೂಲಕ ತಕ್ಕ ಪಾಠ ದಲಿತರು ಕಲಿಸಲಿದ್ದಾರೆ. ಬಿಜೆಪಿ ಇರುವವರೆಗೂ ಮೀಸಲಾತಿ ತೆಗೆಯಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಶಾಸಕ ಮುನಿರತ್ನ ಬಂಧನ:
ದಲಿತರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಪಕ್ಷದ ಶಿಸ್ತು ಸಮೀತಿ ನೊಟೀಸ್ ಕೊಟ್ಟಿದೆ. ಯಾರಾದರೂ ದಲಿತರ ವಿರೋಧಿ ಹೇಳಿಕೆ ಕೊಟ್ಟರೆ ಅದನ್ನು ನಾನು ಖಂಡಿಸುತ್ತೇನೆ. ಅಂತಹವರ ವಿರುದ್ಧ ಪಕ್ಷವು ಸಹ ಖಂಡಿತ ಕ್ರಮ ಕೈಗೊಳ್ಳುತ್ತದೆ ಎಂಬ ಭರವಸೆ ಇದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಪವಾರ, ಶ್ರೀನಿವಾಸ ಕಂದಗಲ್, ಎಸ್ಸಿ ಮೋರ್ಚಾ ಕಾರ್ಯದರ್ಶಿ ಸಿದ್ದಲಿಂಗಪ್ಪ ಮಖಣಾಪುರ, ಮುಖಂಡರಾದ ವಿಕ್ರಮ ಗಾಯಕವಾಡ, ಶಿವರಾಜ ಒಡ್ಡರ, ಮಂತ್ರಿ ಚವ್ಹಾಣ, ವಿಜಯ ಜೋಷಿ ಉಪಸ್ಥಿತರಿದ್ದರು.