ಸಾರಾಂಶ
ಸೊರಬ ಪಟ್ಟಣದ ಕಾನುಕೇರಿ ಮಠದಲ್ಲಿ ಅಕ್ಕನ ಬಳಗದ ವತಿಯಿಂದ ಶ್ರಾವಣ ಮಾಸದ ಪರ್ಯಂತ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಸೊರಬ
ಇಂದು ಬಹಳಷ್ಟು ಜನ ತಮ್ಮ ವಿಚಾರಗಳನ್ನು ಹೇಳುತ್ತಾರೆ. ಆದರೆ ಅದೇ ವಿಚಾರಗಳನ್ನು ಸ್ವತಃ ತಾವು ಆಚರಿಸುವುದನ್ನು ಮರೆತಿರುತ್ತಾರೆ. ಹಾಗಾಗಿ ವಿಚಾರಗಳು ಆಚರಣೆಗೆ ಬಂದಾಗ ಬದುಕಿಗೆ ಅರ್ಥ ಮಾಡುತ್ತದೆ ಎಂದು ಮೂಡಿ ಹಾಗು ತುರಬಿಗುಡ್ಡ ಶಿವಲಿಂಗೇಶ್ವರ ವಿರಕ್ತ ಮಠದ ಸದಾಶಿವ ಮಹಾಸ್ವಾಮಿಗಳು ಹೇಳಿದರು.ಬುಧವಾರ ಪಟ್ಟಣದ ಕಾನುಕೇರಿ ಮಠದಲ್ಲಿ ಅಕ್ಕನ ಬಳಗದ ವತಿಯಿಂದ ಶ್ರಾವಣ ಮಾಸದ ಪರ್ಯಂತ ಆಯೋಜಿಸಿರುವ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಜಡೆ ಹಿರೇಮಠದ ಸಿದ್ಧಬಸವ ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಹಿಂದಿನ ಕಾಲದಲ್ಲಿ ವ್ಯಕ್ತಿಗಳ ಗುಣ ಗಾನ ಮಾಡಬೇಕಾದರೆ ಅವನ ಆಚಾರ ವಿಚಾರ ಬಗ್ಗೆ ಮಾತನಾಡುತ್ತಿದ್ದರು. ಅಂದರೆ ಕೇವಲ ವಿಚಾರ ಅನ್ನದೆ ಆಚಾರವನ್ನು ಸೇರಿಸಿಯೇ ಹೇಳುತ್ತಿದ್ದರು. ಅಂದರೆ ನಮ್ಮ ಬದುಕಿನಲ್ಲಿ ವಿಚಾರಕ್ಕಿಂತ ಆಚಾರ ಹಾಗೂ ಅದರ ಆಚರಣೆ ಬಹು ಮುಖ್ಯವಾದದು ಎಂಬುದು ಹಿರಿಯರಿಗೆ ಗೊತ್ತಿತ್ತು. ಇಂದೂ ನಾವು ಆಚಾರಗಳನ್ನು ಬಿಟ್ಟು ಕೇವಲ ವಿಚಾರಗಳ ಬೆನ್ನು ಹತ್ತಿದ್ದೇವೆ ಎಂದರು.ಸಮ್ಮುಖ ವಹಿಸಿ ಮಾತನಾಡಿದ ಜಡೆ ಬಂಕಸಾಣದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರಾವಣ ಮಾಸ ಕೇಳುವ ಮಾಸ. ಕೇಳುವುದು ಕೇವಲ ಕಿವಿಯಿಂದಲ್ಲ. ಮನುಷ್ಯ ಪ್ರತಿಯೊಂದು ಅಂಗಾಂಗಳಿಂದಲೂ ಕೇಳುತ್ತಾನೆ. ಇಂದ್ರಿಯಗಳನ್ನು ಹೊಂದಿದ ಪ್ರತಿಯೊಂದು ಜೀವಿಯೂ ತನ್ನ ಇದ್ರಿಯಗಳ ಮೂಲಕ ಕೇಳುತ್ತದೆ ಎಂದರು.
ಕೇಳುವಿಕೆ ಶುದ್ಧಿಗೊಳ್ಳಬೇಕು. ಒಳ್ಳೆಯ ಮಾತುಗಳಿಂದ ಕಿವಿ ಶುದ್ಧವಾಗಬೇಕು. ಉತ್ತಮ ದರ್ಶನದಿಂದ ನಮ್ಮ ನೇತ್ರ ಶುದ್ಧಿಯಾಗಬೇಕು. ಶ್ರೇಷ್ಠ ನುಡಿಯಿಂದ ಬಾಯಿ ಶುದ್ಧವಾಗಬೇಕು. ಉತ್ತಮ ಸ್ಪರ್ಶದಿಂದ ಚರ್ಮ ಶುದ್ಧವಾಗಬೇಕು. ಹೀಗೆ ಇಂದ್ರಿಯಗಳ ಶುದ್ಧಿಯಿಂದ ಮನುಷ್ಯನ ಮನಸ್ಸು ಶುದ್ಧವಾಗುತ್ತದೆ. ಮನೋ ಶುದ್ಧಿಯೇ ಆತ್ಮ ಸಾಕ್ಷಾತ್ಕಾರಕ್ಕೆ ಸೋಪಾನವಾಗುತ್ತದೆ. ಹೀಗೆ ಇಂದ್ರಿಯಗಳ ಶುದ್ಧತೆಗೆ ಆಚಾರ ವಿಚಾರಗಳು ಬಹು ಮುಖ್ಯವಾಗುತ್ತದೆ. ಜಡೆ ಹಿರೇಮಠದ ಸಿದ್ಧಬಸವ ಸ್ವಾಮಿಗಳು ಬಹು ಆಚಾರ ವಿಚಾರ ನಿಷ್ಠರಾಗಿ ಸಮಾಜಕ್ಕೆ ಮಾದರಿಯಾಗಿದ್ದರು. ಅವರು ನೀಡುತ್ತಿದ್ದ ಆಯುರ್ವೇದ ಔಷಧ ಹಾಗೂ ನೀಡುತ್ತಿದ್ದ ನ್ಯಾಯ ನಿರ್ಣಯ ಹಿಂದಿನ ಜನ ಮಾನಸದಲ್ಲಿ ಜನಜನಿತವಾಗಿದ್ದನ್ನು ಸ್ಮರಿಸಿಕೊಳ್ಳಬಹುದು ಎಂದರು.ಸೊರಬ ಟೌನ್ ವೀರಶೈವ ಸಮಾಜದ ಅಧ್ಯಕ್ಷರಾದ ವಿಶ್ವನಾಥ ಗೌಡರು ಹಾಗೂ ಅಕ್ಕನ ಬಳಗದ ಅಧ್ಯಕ್ಷರಾದ ರೇಣುಕಮ್ಮ ಗೌಳಿ ಉಪಸ್ಥಿತರಿದ್ದರು. ಜಯಮಾಲಾ ಅಣ್ಣಾಜಿಗೌಡ ನಿರೂಪಿಸಿದರು. ಬಳಗದ ಮಾತೆಯರಿಂದ ಭಜನೆ, ವಚನ , ವಿಶ್ಲೇಷಣೆ ನಡೆಯಿತು.