ಸಾರಾಂಶ
ವಿದ್ಯಾಭ್ಯಾಸದಲ್ಲಿ ಪಡೆದ ಜ್ಞಾನವೊಂದೇ ಜೀವನದ ಯಶಸ್ವಿಗೆ ಸಾಕಾಗುವುದಿಲ್ಲ. ಪಡೆದ ಜ್ಞಾನವನ್ನು ಸಮರ್ಪಕವಾಗಿ ಉಪಯೋಗಿಸಲು ಸಕಾಲಿಕ ಬುದ್ಧಿವಂತಿಕೆಯ ಅವಶ್ಯಕತೆ ಇರುತ್ತದೆ.
ಕುಮಟಾ:
ವಿದ್ಯಾಭ್ಯಾಸದಲ್ಲಿ ಪಡೆದ ಜ್ಞಾನವೊಂದೇ ಜೀವನದ ಯಶಸ್ವಿಗೆ ಸಾಕಾಗುವುದಿಲ್ಲ. ಪಡೆದ ಜ್ಞಾನವನ್ನು ಸಮರ್ಪಕವಾಗಿ ಉಪಯೋಗಿಸಲು ಸಕಾಲಿಕ ಬುದ್ಧಿವಂತಿಕೆಯ ಅವಶ್ಯಕತೆ ಇರುತ್ತದೆ. ಜೀವನವು ಜ್ಞಾನ ಮತ್ತು ಬುದ್ಧಿವಂತಿಕೆಯ ಸಮನ್ವಯವಾಗಬೇಕು ಎಂದು ಆದಿಚುಂಚನಗಿರಿಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.ಮಿರ್ಜಾನದ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಕಲಾಸಿಂಚನ ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು. ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಮತ್ತು ಸೂಕ್ತ ಮಾರ್ಗದರ್ಶನ ಮಾಡಿ ಅವರ ವ್ಯಕ್ತಿತ್ವ ರೂಪುಗೊಳ್ಳಲು ಸಹಕರಿಸಬೇಕು ಎಂದರು.ಡಿಎಫ್‌ಒ ಯೋಗೀಶ್ ಸಿ. ಕೆ. ಮಾತನಾಡಿ, ಅಧ್ಯಯನ, ಕ್ರೀಡೆ, ಕಲೆ, ಸಂಗೀತ, ನೃತ್ಯ, ವಿಜ್ಞಾನಕ್ಕೆ ಸಂಬಂಧಿಸಿದ ಪರಿಕರಗಳ ತಯಾರಿಕೆ ಇತ್ಯಾದಿ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗುವಂತೆ ಬಿಜಿಎಸ್ ವಿದ್ಯಾಲಯ ಮಾಡುತ್ತಿದೆ ಎಂದು ಹೇಳಿದರು.ಬಿಇಒ ರಾಜೇಂದ್ರ ಎಲ್. ಭಟ್ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನಮಠ ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಕಲೋತ್ಸವ, ಕ್ರೀಡೋತ್ಸವ ಮತ್ತು ವಿಜ್ಞಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತಿದೆ ಎಂದರು.
ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮಿರ್ಜಾನ ಶಾಖಾಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಶುಭ ಹಾರೈಸಿದರು. ಜ್ಞಾನಾಂಜಲಿ ಸ್ಮರಣ ಸಂಚಿಕೆ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜಿಎಸ್‌ನಲ್ಲಿ ಓದಿ ವೈದ್ಯಕೀಯ ಪದವಿ ಓದುತ್ತಿರುವ ಮತ್ತು ಪದವಿ ಹೊಂದಿದವರು ಹಾಗೂ ಕಳೆದ ಸಾಲಿನಲ್ಲಿ ಸಿಬಿಎಸ್‌ಇ ೧೦ನೇ ತರಗತಿ ಸಾಧಕರು ಹಾಗೂ ಇತರ ಚಟುವಟಿಕೆಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.ಬಿಜಿಎಸ್ ಆಡಳಿತಾಧಿಕಾರಿ ಜಿ. ಮಂಜುನಾಥ, ಪ್ರಾಚಾರ್ಯೆ ಲೀನಾ ಎಂ. ಗೊನೇಹಳ್ಳಿ, ಪ್ರಾಚಾರ್ಯೆ ಡಾ. ಪ್ರೀತಿಭಂಡಾರ್ಕರ್, ಬಿಜಿಎಸ್ ಶೈಕ್ಷಣಿಕ ನಿರ್ದೇಶಕ ಎಂ.ಟಿ. ಗೌಡ, ನಿವೃತ್ತ ಮುಖ್ಯಶಿಕ್ಷಕ ಎಸ್.ಎನ್. ಭಟ್, ವಿಷ್ಣು ಕಾಮತ, ಭಾರತಿ ಶಂಕರ ಶಿವಮೊಗ್ಗ ಹಾಜರಿದ್ದರು.
ಶುಭಾಂಗಿ ಸಂಗಡಿಗರು ಪ್ರಾರ್ಥಿಸಿದರು. ಸಮೃದ್ಧಿ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ನಿನಾದ ಸಂಗಡಿಗರು ವೇದಘೋಷಗೈದರು. ಶುಮೈಲಾ ಸ್ವಾಗತಿಸಿದಳು. ಪೃಥ್ವಿ ಪ್ರಭು, ಎಚ್.ಆರ್. ಈಶಾನಿ, ರೋಶನಿ ನದಾಫ್, ಆಲ್ಪಿಯಾ ಖಾನ್, ಹನಿ ನಿರೂಪಿಸಿದರು. ಅಭಿಜ್ಞಾ ಗೌಡ ವಂದಿಸಿದಳು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮ ಜನಮನಸೂರೆಗೊಂಡಿತು.