ಹೊನ್ನಾವರ ತಾಲೂಕಿನ ಗೇರುಸೊಪ್ಪ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ 'ಸಂಸ್ಕೃತಿ ಕುಂಭ - ಮಲೆನಾಡ ಉತ್ಸವ - 2026' ಇದರ ಅಂಗವಾಗಿ ಶನಿವಾರ ಸಾಹಿತ್ಯೋತ್ಸವ ನಡೆಯಿತು.
ಹೊನ್ನಾವರ: ಸಾಹಿತ್ಯ ಕಾರ್ಯಕ್ರಮಗಳು ವೇದಿಕೆಗೆ ಸೀಮಿತವಾಗದೆ ಪ್ರತಿಯೊಬ್ಬರ ಜೀವನದಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ವೈಯಕ್ತಿಕ ಜೀವನದಲ್ಲಿ ಜವಾಬ್ದಾರಿ ಹೆಚ್ಚಿಸುವ ಕಾರ್ಯಕ್ರಮವಾಗಿ ಮಾರ್ಪಡಬೇಕು ಎಂದು ಬೆಂಗಳೂರು ಓಂಕಾರ ಆಶ್ರಮ ಮಹಾ ಸಂಸ್ಥಾನದ ಸ್ವಾಮಿ ಡಾ. ಮಧುಸೂದನಂದಪುರಿ ಸಲಹೆ ನೀಡಿದರು.
ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ''''ಸಂಸ್ಕೃತಿ ಕುಂಭ - ಮಲೆನಾಡ ಉತ್ಸವ - 2026'''' ಇದರ ಎರಡನೇ ದಿನವಾದ ಶನಿವಾರ ನಡೆದ ಸಾಹಿತ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಪುಸ್ತಕಗಿಂತ ಉತ್ತಮವಾದ ಸ್ನೇಹಿತ ಬೇರೊಂದಿಲ್ಲ. ಸಾಹಿತ್ಯದೊಂದಿಗೆ ನಾವು ಬೆರೆತಾಗ ಸಜ್ಜನ ವ್ಯಕ್ತಿತ್ವ ರೂಪಿಸುವ ಜತೆಗೆ ಸಮಾಜದಲ್ಲಿ ಗೌರವ ಪಡೆದುಕೊಳ್ಳುವುದು. ಜತೆಗೆ ಸಾಹಿತ್ಯ ಅಭಿರುಚಿ ಬೆಳೆಸುವ ಮೂಲಕ ನಾಡು, ನುಡಿಯನ್ನು ಉಳಿಸಿ ಬೆಳೆಸುವ ಕೆಲಸವೂ ನಡೆಯುತ್ತದೆ ಎಂದು ಅವರು ಹೇಳಿದರು.ಬಂಗಾರಮಕ್ಕಿ ಶ್ರೀ ಕ್ಷೇತ್ರದ ಮಾರುತಿ ಗುರೂಜಿ ಅವರು ಒಂದು ಚೌಕಟ್ಟಿಗೆ ಸೀಮಿತವಾಗದೆ, ಎಲ್ಲರನ್ನೂ ಒಗ್ಗೂಡಿಸಿ ಸರ್ವ ವ್ಯಾಪ್ತಿಗೆ ತನ್ನ ಕಾರ್ಯ ವಿಸ್ತರಿಸಿದ್ದಾರೆ. ಇದು ಸನಾತನ ಧರ್ಮದ ಮೂಲ ತತ್ವವಾಗಿದೆ. ತಾನು ಯಾವುದೇ ಕೀರ್ತಿ ಬಯಸದೆ ನಾಡಿನ ಕೀರ್ತಿ, ಜನತೆಯ ಒಳಿತನ್ನು ಬಯಸುತ್ತ, ಅವರು ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಶಿವಮೊಗ್ಗ ಶ್ರೀ ರಾಮಕೃಷ್ಣ ಆಶ್ರಮದ ಶ್ರಿ ಸ್ವಾಮಿ ವಿನಯಾನಂದ ಸರಸ್ವತಿ ಉಪದೇಶ ನೀಡಿ, ಸಾಹಿತ್ಯ ಜನರ ಮಧ್ಯೆ ಸತ್ಯ ಮತ್ತು ಜಾಗೃತಿ ಮೂಡಿಸಬೇಕು. ಸಾಹಿತ್ಯ ಮತ್ತು ಆಧ್ಯಾತ್ಮಿಕತೆ ಒಂದೇ ಆಗಿವೆ. ಸಾಹಿತ್ಯ, ಸಂಗೀತ, ಕಲೆ ಮಾನವರ ಹಿತಕ್ಕಾಗಿ ಇದ್ದು, ಅವು ಮಾನವರಿಗೆ ಒಳಿತನ್ನು ಬಯಸುತ್ತದೆ. ಮಾನವರಿಗೆ ಒಳಿತನ್ನು ಬಯಸುವ ಸರ್ವವೂ ಆಧ್ಯಾತ್ಮಿಕತೆಯ ಬೇರುಗಳಾಗಿವೆ ಎಂದು ಹೇಳಿದರು.ಆಧ್ಯಾತ್ಮಿಕತೆಯ ತತ್ವಾದರ್ಶದ ಮೇಲೆ ನಿಂತಿರುವುದರಿಂದ ಭಾರತದ ಸಾಹಿತ್ಯ, ಸಂಗೀತ, ಕಲೆಗೆ ಪ್ರಪಂಚದಲ್ಲಿ ಮಹತ್ವ ಇರಲು ಕಾರಣವಾಗಿದೆ. ಆಧ್ಯಾತ್ಮಿಕತೆಯ ಮೂಲ ಇಲ್ಲದ ಪ್ರಪಂಚದ ಎಲ್ಲ ಸಾಹಿತ್ಯ ಪರಂಪರೆ ನಾಶವಾಗಿವೆ ಎಂದು ಅವರು ಹೇಳಿದರು.
ಸಾಹಿತ್ಯದ ಕೃಷಿ ಋಷಿಗಳಿಂದಲೇ ಉಗಮವಾಗಿದೆ. ಪುರಾತನ ಕಾಲದಲ್ಲಿ ದೇವಸ್ಥಾನಗಳು ಸಾಹಿತ್ಯ, ಸಂಗೀತ, ಕಲೆಯ ನೆಲೆಯಾಗಿತ್ತು. ಕಾಲ ಕಳೆದಂತೆ ಇವುಗಳಿಂದ ದೇವಸ್ಥಾನಗಳು ಅಂತರ ಪಡೆದುಕೊಂಡಿದೆ. ಮತ್ತೆ ದೇವಸ್ಥಾನಗಳು ಈ ಕಾರ್ಯದಲ್ಲಿ ತೊಡಗುವಂತಾಗಬೇಕು ಎಂದು ಹೇಳಿದರು.ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಛಲವಾದಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಸಾನ್ನಿಧ್ಯ ವಹಿಸಿ ಉಪದೇಶ ನೀಡಿದರು. ಲೇಖಕ, ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ಕೇರಿ ಎಂ.ಕೆ. ನಾಯಕ್ ದಾಂಡೇಲಿ, ಡಾ. ಜಿ.ಜಿ. ಹೆಗಡೆ ಬಾಳಗೋಡ, ಸುಮುಖಾನಂದ ಜಲವಳ್ಳಿ, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಡಾ. ಆರ್.ಜಿ. ಗುಂದಿ ಅಂಕೋಲಾ, ಕೆ.ಟಿ. ಶ್ರೀಮತಿ ಮೈಸೂರು, ಪ್ರೊ. ಫಾಲ್ಗುಣ ಗೌಡ ಅಂಕೋಲಾ, ನಿವೃತ್ತ ಉಪನ್ಯಾಸಕ ಸುರೇಶ್ ಕಡೆಮನೆ ಮಾತನಾಡಿದರು.''''ವೀರಾಂಜನೇಯ ಶತಕ'''', ''''ಹಾಡಿನ ಪಟ್ಟಿ'''', ''''ಅಕ್ಷರೋಪಾಯನ'''', ''''ಭಾರತ ರತ್ನಗಳು'''' ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಕ್ಷೇತ್ರ ಬಂಗಾರಮಕ್ಕಿಯಿಂದ ಪ್ರತಿ ವರ್ಷ ಸಾಧಕರಿಗೆ ನೀಡುವ ''''ಜಾನಪದ'''' ಪ್ರಶಸ್ತಿಯನ್ನು ಪ್ರೊ. ಫಾಲ್ಗುಣ ಗೌಡ ಅಂಕೋಲಾ ಅವರಿಗೆ ನೀಡಲಾಯಿತು.
ಅನುಸೂಯಾ ಜಹಗೀರದಾರ ಕೊಪ್ಪಳ, ನಾಗರತ್ನಾ ಲೋಕೇಶ, ಚಿತ್ರನಟ ಪ್ರೇಮಾನಂದ ಗವಾಸ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಗಣಪತಿ ಹೆಗಡೆ ಸ್ವಾಗತಿಸಿದರು. ಭರತ್ ಶಂಖನಾದ ಗೈದರು. ಶೈಲೇಶ್, ಭಾರತಿ, ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು.