ಸಾಹಿತ್ಯ ಮಾನವೀಯ ಮೌಲ್ಯ ತಿಳಿಸಲಿ: ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ

| Published : Mar 22 2025, 02:05 AM IST

ಸಾಹಿತ್ಯ ಮಾನವೀಯ ಮೌಲ್ಯ ತಿಳಿಸಲಿ: ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ
Share this Article
  • FB
  • TW
  • Linkdin
  • Email

ಸಾರಾಂಶ

ಹಳೆಗನ್ನಡ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು ಇವೆ. ನಿಜಕ್ಕೂ ಕನ್ನಡ ಸಾಹಿತ್ಯ ಚರಿತ್ರೆಯು ಜೈನ ದಿಗಂಬರರ ಮುನಿಗಳಿಂದ ಪ್ರಾರಂಭಗೊಂಡಿದೆ. ಇವರು ಕನ್ನಡ ಭಾಷೆ ಸದೃಢಗೊಳಿಸಿದರು.

ಕೊಪ್ಪಳ:

ಸಾಹಿತ್ಯವು ಸಮಾಜಕ್ಕೆ ಮಾನವೀಯ ಮೌಲ್ಯ ತಿಳಿಸಬೇಕು ಎಂದು ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ಐಕ್ಯೂಎಸಿ ಮತ್ತು ಕನ್ನಡ ವಿಭಾಗ ಹಮ್ಮಿಕೊಂಡಿದ್ದ ಹಳೆಗನ್ನಡ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಹಳೆಗನ್ನಡ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು ಇವೆ. ನಿಜಕ್ಕೂ ಕನ್ನಡ ಸಾಹಿತ್ಯ ಚರಿತ್ರೆಯು ಜೈನ ದಿಗಂಬರರ ಮುನಿಗಳಿಂದ ಪ್ರಾರಂಭಗೊಂಡಿದೆ. ಇವರು ಕನ್ನಡ ಭಾಷೆ ಸದೃಢಗೊಳಿಸಿದರು. ಇವರಿಂದ ಮುಂದುವರಿದ ಕನ್ನಡ ಸಾಹಿತ್ಯ ಚರಿತ್ರೆ ನಂತರದಲ್ಲಿ ವಡ್ಡಾರಾಧನೆ, ಕವಿರಾಜಮಾರ್ಗ, ಆದಿಪುರಾಣ, ವಿಕ್ರಮಾರ್ಜುನ, ವಿಜಯ ಸಹಸಭೀಮ, ವಿಜಯ ಮುಂತಾದ ಕೃತಿಗಳು ರಚನೆಗೊಂಡವು. ಇಂತಹ ಕಾವ್ಯಗಳಲ್ಲಿ ಮನುಷ್ಯನ ಮಾನವೀಯ ಮೌಲ್ಯಗಳನ್ನು ಕವಿಗಳು ತಮ್ಮ ಕಾವ್ಯಗಳಲ್ಲಿ ವಿವರಿಸಿದ್ದಾರೆ ಎಂದರು.

ಕ್ರಿಶ 850ರ ಕಾಲಕ್ಕೆ ಕನ್ನಡ ಸಾಹಿತ್ಯ ಹಳೆಗನ್ನಡವಾಗಿ, ಪಂಪನ ಕಾಲಕ್ಕೆ ಅದೇ ಸಾಹಿತ್ಯ ಹೊಸ ಕನ್ನಡವಾಗಿ, ಪ್ರಸ್ತುತ ದಿನಗಳಲ್ಲಿ ಆಧುನಿಕ ಸಾಹಿತ್ಯ ಎಂದು ಗುರುತಿಸಬಹುದು. ಕೊಪ್ಪಳ ಪರಿಸರವು ಹಳೆಗನ್ನಡ ಭಾಷಾ ಅಸ್ತಿತ್ವವನ್ನು ಇನ್ನೂ ಹಾಗೆ ಉಳಿಸಿಕೊಂಡಿದೆ. ಕಾವ್ಯ ಎಂದರೆ ನಮಗೆ ಅರಿವು ಮೂಡಿಸುವಂತಿರಬೇಕು. ಅಂತಹ ಆದರ್ಶ ಬರಹಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಬರಹಗಾರರು ಹಿಂದಿನ ಕವಿಗಳ ಗುಣಗಳನ್ನು ತಮ್ಮ ಜೀವನದಲ್ಲಿ ಮತ್ತು ಬರಹದಲ್ಲಿ ಮೂಡಿಸಬೇಕು ಎಂದರು

ಕನ್ನಡ ವಿಭಾಗದ ಮುಖ್ಯ ಸ್ಥೆ ಡಾ. ಹುಲಿಗೆಮ್ಮ ಬಿ., ಮಾತನಾಡಿ, ಪಂಡಿತರ ಶೈಲಿಯಲ್ಲಿ ಹೇಳುವುದನ್ನು ಹಳೆಗನ್ನಡ ಎಂದು ಕರೆಯುತ್ತಾರೆ. ಕನ್ನಡ ವಿಷಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಅಗತ್ಯವಿದೆ. ಕನ್ನಡವೇ ನಮ್ಮ ಬದುಕು ಆಗಬೇಕು. ಎಲ್ಲರೂ ಸಾಹಿತ್ಯದ ಜ್ಞಾನ ಪಡೆದುಕೊಳ್ಳಬೇಕು ಎಂದರು.

ಉಪನ್ಯಾಸಕ ಡಾ. ಮಂಜು ಕುರ್ಕಿ ಮಾತನಾಡಿ, ವೈಚಾರಿಕ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಪ್ರಾಧ್ಯಾಪಕಿ ನಾಗರತ್ನ ತಮ್ಮಿನಾಳ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಡಾ. ಅಶೋಕಕುಮಾರ, ಉಪನ್ಯಾಸಕರಾದ ಶಿವಪ್ರಸಾದ್ ಹಾದಿಮನಿ, ಡಾ. ಸೂರಪ್ಪ ವೈ. ಪಿ, ಶುಭ ಹಾಗೂ ಡಾ. ನರಸಿಂಹ ಉಪಸ್ಥಿತರಿದ್ದರು.