ಮಲ್ಲಿಕಾರ್ಜು ಖರ್ಗೆ ರೋಮ್‌ಗೆ ಹೋಗುವ ಸೋನಿಯಾರನ್ನು ಪ್ರಶ್ನಿಸಲಿ: ಶಾಸಕ ಅರವಿಂದ ಬೆಲ್ಲದ

| Published : Jan 29 2025, 01:33 AM IST

ಮಲ್ಲಿಕಾರ್ಜು ಖರ್ಗೆ ರೋಮ್‌ಗೆ ಹೋಗುವ ಸೋನಿಯಾರನ್ನು ಪ್ರಶ್ನಿಸಲಿ: ಶಾಸಕ ಅರವಿಂದ ಬೆಲ್ಲದ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲೆಂದು 144 ವರ್ಷಗಳ ನಂತರ ಬರುವ ಮಹಾಕುಂಭ ಮೇಳಕ್ಕೆ ಪ್ರಪಂಚದಾದ್ಯಂತ 40 ಕೋಟಿಗೂ ಹೆಚ್ಚು ಜನರು ಶ್ರದ್ಧಾ- ಭಕ್ತಿಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಬರುತ್ತಿದ್ದಾರೆ. ಸನಾತನ ಧರ್ಮದ ಪ್ರಕಾರ ಇದು ದೊಡ್ಡ ಅವಕಾಶ.

ಹುಬ್ಬಳ್ಳಿ:

ಪುಣ್ಯಸ್ನಾನ ಮಾಡಿದರೆ ಬಡತನ ಹೋಗುತ್ತದೆಯೇ? ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ರೋಮ್‌ಗೆ ತೆರಳುವ ಸೋನಿಯಾ ಗಾಂಧಿ ಅವರಿಗೆ ಏಕೆ ಈ ರೀತಿಯ ಪ್ರಶ್ನೆ ಕೇಳುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲೆಂದು 144 ವರ್ಷಗಳ ನಂತರ ಬರುವ ಮಹಾಕುಂಭ ಮೇಳಕ್ಕೆ ಪ್ರಪಂಚದಾದ್ಯಂತ 40 ಕೋಟಿಗೂ ಹೆಚ್ಚು ಜನರು ಶ್ರದ್ಧಾ- ಭಕ್ತಿಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಬರುತ್ತಿದ್ದಾರೆ. ಸನಾತನ ಧರ್ಮದ ಪ್ರಕಾರ ಇದು ದೊಡ್ಡ ಅವಕಾಶ ಎಂದರು.

ಮುಸ್ಲಿಮರಿಗೆ ಕೇಳುವ ಧೈರ್ಯವಿದೆಯೇ?:

ರಾಜ್ಯ ಸರ್ಕಾರ ಮೆಕ್ಕಾಗೆ ತೆರಳುವವರಿಗೆ ವಿಶೇಷ ಅನುದಾನ ಕೊಡುತ್ತದೆ.‌ ಅಲ್ಲಿಗೆ ಹೋಗಿ ಬಂದರೆ ಬಡತನ ನಿಲ್ಲುವುದಾದರೆ ಅವರಿಗೆ ಕೊಡುವ ಅನುದಾನ ಸ್ಥಗಿತಗೊಳಿಸುವುದೇ? ಇದೇ ಪ್ರಶ್ನೆ ಮುಸ್ಲಿಮರಿಗೆ ಕೇಳುವ ಧೈರ್ಯ ಖರ್ಗೆ ಅವರಿಗೆ ಇದೆಯೇ?. ಅದೇ ರೀತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರಿಗೆ ರೋಮ್‌ಗೆ ಹೋಗಿ ಪೋಪ್ ಕೈ ಹಿಡಿದು ಪ್ರಾರ್ಥಿಸಬೇಡಿ.‌ ಚರ್ಚ್‌ಗೆ ನಡೆದುಕೊಳ್ಳಬೇಡಿ ಎಂದು ಹೇಳುವ ತಾಕತ್‌ ಇದೆಯೇ?. ಕೂಡಲೇ ಅವರು ‌ಹಿಂದೂಗಳ‌ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಓಲೈಕೆಯ ಹೇಳಿಕೆ ಸರಿಯಲ್ಲ:

ಖರ್ಗೆ ಹೇಳಿಕೆ ಸಮರ್ಥಿಸಿಕೊಂಡಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಮರಾಠ ಸಮಾಜದ ನಾಯಕರು, ಶಿವಾಜಿ ವಂಶಸ್ಥರು. ಮುಸ್ಲಿಮರ ಓಲೈಕೆಗಾಗಿ ಈ ರೀತಿಯ ಹೇಳಿಕೆ‌ ನಿಮ್ಮಿಂದ ನಿರೀಕ್ಷಿಸಿರಲಿಲ್ಲ. ಖರ್ಗೆ ಅವರನ್ನು ಓಲೈಸಲು ಹೀಗೆ ಮಾಡುವುದು ಸರಿಯಲ್ಲ ಎಂದರು.

ಕುಂಭಮೇಳಕ್ಕೆ ಹೋಗಲ್ಲ ಎನ್ನಲಿ:

ಕಾಂಗ್ರೆಸ್ಸಿನವರಿಗೆ ಹಿಂದೂಗಳ ಭಾವನೆಗೆ ಬೆಲೆಯಿಲ್ಲವಾಗಿದೆಯೇ? ಆ ಪಕ್ಷದ ಯಾರೂ ಮಾಹಾಕುಂಭಮೇಳಕ್ಕೆ ಹೋಗಲ್ಲ ಎಂದು ಆದೇಶ ಹೊರಡಿಸಲಿ ಎಂದು ಬೆಲ್ಲದ ಸವಾಲು ಹಾಕಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಕೇಂದ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕಾಂಗ್ರೆಸ್‌ನವರು ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗೆ ಉಳಿಗಾಲವಿಲ್ಲ. ಇದರಲ್ಲಿ ಯಾರ‍್ಯಾರು ಶಾಮೀಲಾಗಿದ್ದಾರೆಯೋ ಅವರೆಲ್ಲರ ಮೇಲೆಯೂ ಕ್ರಮವಾಗಲಿ ಎಂದರು.ಹೂಡಿಕೆದಾರರನ್ನು ಈ ಭಾಗಕ್ಕೆ ಕರೆತರಲಿ

ಮುಂದಿನ ತಿಂಗಳು ಬೆಂಗಳೂರಿನಲ್ಲಿ ವಿಶ್ವ ಹೂಡಿಕೆದಾರರ ಸಮ್ಮೇಳನ ನಡೆಯಲಿದ್ದು, ಈ ವೇಳೆ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಉದ್ಯೋಗ ಹೆಚ್ಚಿಸಬೇಕು.‌ ಶೇ‌.‌ 75ರಷ್ಟು ಹೂಡಿಕೆದಾರರನ್ನು ಈ ಭಾಗಕ್ಕೆ ಕರೆತರಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು. ಆ ಜವಾಬ್ದಾರಿ ಮುಖ್ಯಮಂತ್ರಿ ಮತ್ತು ಬೃಹತ್ ಕೈಗಾರಿಕಾ ಸಚಿವರ ಮೇಲಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆದಿರುವುದಾಗಿ ತಿಳಿಸಿದರು.