ಲಿಂಗಾಯತ ವಿಷಯದಲ್ಲಿ ತಪ್ಪಾಗಿದ್ದರೆ ಹೇಳಲಿ; ಕ್ಷಮೆ ಕೇಳ್ತೇನೆ

| Published : Mar 29 2024, 12:51 AM IST

ಲಿಂಗಾಯತ ವಿಷಯದಲ್ಲಿ ತಪ್ಪಾಗಿದ್ದರೆ ಹೇಳಲಿ; ಕ್ಷಮೆ ಕೇಳ್ತೇನೆ
Share this Article
  • FB
  • TW
  • Linkdin
  • Email

ಸಾರಾಂಶ

ದಿಂಗಾಲೇಶ್ವರ ಸ್ವಾಮೀಜಿ ಬಗ್ಗೆ ನನಗೆ ಶ್ರದ್ಧೆ ಇದೆ. ಶಿರಹಟ್ಟಿ ಪೀಠ ನನಗೆ ಸದಾಕಾಲ ಆಶೀರ್ವಾದ ಮಾಡಿದೆ. ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಬಗೆಹರಿಸುತ್ತೇವೆ.

ಹುಬ್ಬಳ್ಳಿ:

ಲಿಂಗಾಯತ ವಿಷಯದಲ್ಲಿ ಏನಾದರೂ ತಪ್ಪಾಗಿದ್ದರೆ ನೇರವಾಗಿ ಹೇಳಲಿ. ತಪ್ಪು ಎಸಗಿದ್ದರೆ ಕ್ಷಮೆ ಕೇಳಲೂ ಹಿಂಜರಿಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತ ಸ್ವಾಮೀಜಿಯವರಲ್ಲಿ ಕೇಳಿಕೊಂಡಿಕೊಂಡಿದ್ದಾರೆ.

ನಗರದ ಹೋಟೆಲ್‌ವೊಂದರಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಜಂಟಿ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮದವರ ಜತೆ ಅವರು ಮಾತನಾಡಿದರು.

ಜೋಶಿ ಲಿಂಗಾಯತರನ್ನು ತುಳಿದಿದ್ದಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಲೋಕಸಭಾ ಸದಸ್ಯನಾದ ಮೇಲೆ ಕ್ಷೇತ್ರದಲ್ಲಿ ಎಂಟರಲ್ಲಿ ಏಳು ಜನ ಲಿಂಗಾಯತರಿಗೆ ಟಿಕೆಟ್ ಕೊಡಲಾಗಿದೆ. ಅವರ ಗೆಲುವಿಗೆ ಕಾಯಾ, ವಾಚಾ, ಮನಸಾ ಕೆಲಸ ಮಾಡಿರುವೆ. ಆದರೆ, ದಿಂಗಾಲೇಶ್ವರ ಸ್ವಾಮೀಜಿ ಅವರ ವೈಯಕ್ತಿಕ ಆರೋಪಗಳಿಗೆ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸುವುದಿಲ್ಲ ಎಂದರು.

ದಿಂಗಾಲೇಶ್ವರ ಸ್ವಾಮೀಜಿ ಬಗ್ಗೆ ನನಗೆ ಶ್ರದ್ಧೆ ಇದೆ. ಶಿರಹಟ್ಟಿ ಪೀಠ ನನಗೆ ಸದಾಕಾಲ ಆಶೀರ್ವಾದ ಮಾಡಿದೆ. ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಬಗೆಹರಿಸುತ್ತೇವೆ. ಈ ಸಂದರ್ಭದಲ್ಲಿ ನಾನು ಹೆಚ್ಚೇನೂ ಮಾತಾಡುವುದಿಲ್ಲ. ಸ್ವಾಮೀಜಿ ಸಮಯ ಕೊಟ್ಟರೆ ಅವರ ಜತೆ ಚರ್ಚಿಸಲು ನಾನು ಸಿದ್ಧನಿದ್ದೇನೆ. ಒಂದು ವೇಳೆ ನಾನು ತಪ್ಪು ಎಸಗಿದ್ದರೆ ಅದನ್ನು ನೇರವಾಗಿ ತಿಳಿಸಲಿ ಕ್ಷಮೆ ಕೇಳುತ್ತೇನೆ ಎಂದರು.

ಅತೃಪ್ತಿ ಶೀಘ್ರ ಶಮನ:

ರಾಜ್ಯದ ಕೆಲ ಮತಕ್ಷೇತ್ರಗಳಲ್ಲಿ ದುಃಖ, ದುಮ್ಮಾನ, ಬಂಡಾಯ ಇದೆ. ಹೈಕಮಾಂಡ್ ಮತ್ತು ರಾಜ್ಯ ನಾಯಕರು ಚರ್ಚಿಸಿ ಬಗೆಹರಿಸಲಿದ್ದಾರೆ ಎಂದರು. 28 ಕ್ಷೇತ್ರಗಳಲ್ಲೂ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಕಾಂಗ್ರೆಸ್‌ನವರಿಗೆ ಹತಾಶೆಯಾಗಿದೆ. ಸೋಲಿನ ಭಯದಿಂದಾಗಿ ನರೇಂದ್ರ ಮೋದಿ ಅವರ ಬಗ್ಗೆ ಕ್ಷುಲ್ಲಕ ಭಾಷೆಯಲ್ಲಿ ಟೀಕೆ ಮಾಡುತ್ತಾರೆ. ಆದರೆ ಅವರು ಎಷ್ಟು ಟೀಕೆ ಮಾಡುತ್ತಾರೋ ಅಷ್ಟೇ ಮೋದಿ ಅವರ ಜನಪ್ರಿಯತೆ ಹೆಚ್ಚಾಗುತ್ತದೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಸೇರಿ ಚುನಾವಣೆ ಮಾಡುತ್ತಿದ್ದು, ಕ್ಷೇತ್ರಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಭೇಟಿಯಾಗಿ ಹೆಚ್ಚಿನ ಮತಗಳಿಂದ ಗೆಲ್ಲುತ್ತೇವೆ ಎಂದರು.