ಸಾರಾಂಶ
ಸಚಿವರು ರಾಜ್ಯ ಸರ್ಕಾರ ಸರಿಯಾದ ದಾಖಲೆ ಸಲ್ಲಿಸಿಲ್ಲ, ಕಳಿಸಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಕಳೆದ ಜ. 30 ರಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್, ಡಾ. ಕೌಶಿಕ್ ಅವರ ಸಭೆಯ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ರೈತಸೇನಾದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಹದಾಯಿ, ಕಳಸಾ -ಬಂಡೂರಿ ಯೋಜನೆಗೆ ಕೇಂದ್ರದಿಂದ ಅಧಿಕೃತ ಪರವಾನಗಿ ಕೊಡಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶ್ರಮಿಸಬೇಕು ಎಂದು ರೈತಸೇನಾದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯ ಸರ್ಕಾರ ಕೇಂದ್ರಕ್ಕೆ ಹಾಗೂ ಪರಿಸರ ಇಲಾಖೆಗೆ ಸರಿಯಾದ ದಾಖಲೆ ನೀಡಿಲ್ಲ. ಇದರಿಂದಾಗಿ ಮಹದಾಯಿ ಯೋಜನೆ ಜಾರಿಗೆ ವಿಳಂಬವಾಗುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಇದು ಸಂಪೂರ್ಣ ಸುಳ್ಳು. ರಾಜ್ಯ ಸರ್ಕಾರ ಈಗಾಗಲೇ ಸಂಬಂಧಿಸಿದ ದಾಖಲೆಗಳನ್ನು ನೀಡಿದೆ. ಯೋಜನೆಯಲ್ಲಿ ರಾಜಕೀಯ ಮಾಡದೇ ಸಚಿವರು ಪರವಾನಗಿ ಕೊಡಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಸಚಿವರು ರಾಜ್ಯ ಸರ್ಕಾರ ಸರಿಯಾದ ದಾಖಲೆ ಸಲ್ಲಿಸಿಲ್ಲ, ಕಳಿಸಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಕಳೆದ ಜ. 30 ರಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್, ಡಾ. ಕೌಶಿಕ್ ಅವರ ಸಭೆಯ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಮಾಹಿತಿ ನೀಡಿದೆ. ಮಹದಾಯಿ ವ್ಯಾಪ್ತಿಯ 4 ಸಂಸದರಲ್ಲಿ ತಾವು ಪ್ರಭಾವಿಗಳಿದ್ದು ಮಹದಾಯಿ ಯೋಜನೆಗೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಒಳಗಾಗಿ ಅನುಮತಿ ಕೂಡಿಸಬೇಕು ಎಂದರು.ಬೊಮ್ಮಾಯಿ ಸತ್ಯ ನುಡಿಯಲಿ:
ಮಹದಾಯಿ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಳ್ಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಮಹದಾಯಿ ನ್ಯಾಯಾಧಿಕರಣ ಮತ್ತು ಟೆಂಡರ್ ಪ್ರಕ್ರಿಯೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ನ್ಯಾಯಾಧೀಕರಣ ರಚನೆ ಮಾಡಿದ್ದರಿಂದ ಆ ಸರ್ಕಾರ ಕಿತ್ತು ಹಾಕಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲಾಗಿತ್ತು. ನಾಲ್ಕು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಡಿಪಿಆರ್ ರೂಪಿಸಿ ಕೇಂದ್ರದ ಸಂಬಂಧಿಸಿದ ಇಲಾಖೆಗೆ ಪರವಾನಗಿ ಕೇಳಲಾಗಿತ್ತು. ಆದರೆ, ತಮ್ಮನ್ನು ಭೇಟಿಯಾದಾಗ ಕೆಲವೊಬ್ಬರು ಅಡ್ಡಿಮಾಡುತ್ತಿದ್ದಾರೆ ಎಂಬುದನ್ನು ಸ್ವತಃ ಬೊಮ್ಮಾಯಿ ಅವರು ಹೇಳಿದ್ದಾರೆ. ಇದೀಗ ರಾಜಕೀಯಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಸುಳ್ಳಿಗೆ ರೈತ ಹೋರಾಟಗಾರರನ್ನು ಬಲಿಕೊಡಬೇಡಿ, ಸತ್ಯವನ್ನು ಹೇಳಿ, ನಿಮ್ಮ ಹೋರಾಟ ಪ್ರಯತ್ನಕ್ಕೆ ಯಾರು ಹಿನ್ನಡೆ ಮಾಡಿದ್ದರು ಎಂಬುದನ್ನು ಸಮಯ ಬಂದಾಗ ದಾಖಲೆಗಳೊಂದಿಗೆ ಜನರ ಮುಂದಿಡುತ್ತೇವೆ. ಅಲ್ಲದೇ ತಮ್ಮ ಸರ್ಕಾರ ಇದ್ದಾಗ ಚುನಾವಣೆ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಟೆಂಡರ್ ಕರೆಯಲಾಗಿತ್ತು. ಮಹದಾಯಿಗಾಗಿ ಹೋರಾಟ ಮಾಡಿದ ನೀವು, ಈಗ ಜವಾಬ್ದಾರಿಯಿಂದ ಮಾತನಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ರೈತ ಹೋರಾಟಗಾರ ಗುರುಶಾಂತಪ್ಪ ಕಾರಿ, ಮಲ್ಲಣ್ಣ ಆಲೇಗಾರ, ಗುರು ರಾಯನಗೌಡ್ರ ಸೇರಿದಂತೆ ಹಲವರಿದ್ದರು.