ಸಾರಾಂಶ
ಬೆಂಗಳೂರು : ಅರ್ಹ ವಿದ್ಯಾರ್ಥಿ ವೇತನ ನೀಡುವುದಕ್ಕೆ ಸಂಬಧಿಸಿದಂತೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು, ವಿದ್ಯಾರ್ಥಿ ವೇತನ ನೀಡಲು ಹಣವಿಲ್ಲದಿದ್ದರೆ ಶಾಸಕರು, ಸಚಿವರು ತಮ್ಮ ವೇತನದಲ್ಲಿ ನೀಡಲಿ ಎಂದು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಗ್ರಹಿಸಿದರು.
ವಿದ್ಯಾರ್ಥಿ ವೇತನ ನೀಡುವಂತೆ ಆಗ್ರಹಿಸಿ ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಒಎಸ್) ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಜವಾಬ್ದಾರಿ. ಆದರೆ, ಆಡಳಿತಾರೂಢ ಸರ್ಕಾರ ಅದನ್ನು ಮರೆಯುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಲಕ್ಷ್ಯ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಡಿಮೆ ದಾಖಲಾತಿಯ ಕಾರಣ ಹೇಳಿ ಸರ್ಕಾರಿ ಶಾಲೆಗಳ ಮುಚ್ಚುವುದಕ್ಕೆ ಸರ್ಕಾರ ಮುಂದಾಗಿದೆ. ಆದರೆ, ಶಾಲೆಗಳಲ್ಲಿ ಸಮರ್ಪಕ ಮೂಲಸೌಕರ್ಯ ಒದಗಿಸಿದುವುದು ಶಾಲೆಗಳಿಗೆ ದಾಖಲಾತಿ ಕಡಿಮೆಯಾಗಲು ಕಾರಣ. ಹೀಗಾಗಿ ಸರ್ಕಾರಿ ಶಾಲೆಗಳ ಉಳಿವಿಗೆ ಹೋರಾಟ ಮಾಡಬೇಕಿದೆ. ಈ ಹೋರಾಟಕ್ಕೆ ಸದಾ ಜತೆಯಲ್ಲಿರುತ್ತೇನೆ ಎಂದು ಭರವಸೆ ನೀಡಿದರು.
ಸಾಮಾಜಿಕ ಹೋರಾಟಗಾರ ಉಗ್ರನರಸಿಂಹೇಗೌಡ, ಎಐಡಿಎಸ್‌ಒ ಉಪಾಧ್ಯಕ್ಷರಾದ ಅಭಯಾ ದಿವಾಕರ್, ಎಸ್.ಎಚ್. ಹಣಮಂತ, ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಇತರರಿದ್ದರು.