ಧರ್ಮ, ಸಂಸ್ಕೃತಿ ಉಳಿವಿಗೆ ಮೋದಿ ಮತ್ತೆ ಪ್ರಧಾನಿಯಾಗಲಿ: ಕಾಗೇರಿ

| Published : Apr 17 2024, 01:29 AM IST

ಸಾರಾಂಶ

ಜಿಲ್ಲಾದ್ಯಂತ ಬಿಜೆಪಿಯ ಬಲ ಪ್ರಬಲವಾಗಿ ಗೋಚರಿಸುತ್ತಿದೆ. ಇಂತಹ ಬೆಂಬಲವನ್ನು ಕಾರ್ಯಕರ್ತರು ಮತವನ್ನಾಗಿ ಪರಿವರ್ತಿಸಬೇಕಾಗಿದೆ.

ಯಲ್ಲಾಪುರ: ಸನಾತನ ಧರ್ಮ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿರುವುದು ಅತ್ಯಂತ ಅಗತ್ಯವಾಗಿದೆ. ದೇಶದಲ್ಲಿ ಅಸಂಖ್ಯಾತ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತ ಮಾಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಏ. ೧೬ರಂದು ಪಟ್ಟಣದ ಅಡಿಕೆ ಭವನದಲ್ಲಿ ತಾಲೂಕು ಬಿಜೆಪಿ ಘಟಕವು ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿಯನ್ನು ಸೇರ್ಪಡೆಗೊಂಡ ನೂರಾರು ಕಾರ್ಯಕರ್ತರನ್ನು ಸ್ವಾಗತಿಸಿ, ಮಾತನಾಡಿದರು.

ಮತದಾರರ ಕಷ್ಟ- ಸುಖಗಳಿಗೆ ನಿರಂತರವಾಗಿ ಸ್ಪಂದಿಸುವ ಕಾರ್ಯಕರ್ತರು ತಮ್ಮ ಬೆಂಬಲಿಗರೊಂದಿಗೆ ಪಕ್ಷವನ್ನು ಸಾಂಕೇತಿಕವಾಗಿ ಸೇರಿದ್ದಾರೆ ಎಂದ ಅವರು, ನಾನು ಪಕ್ಷದ ಆಣತಿಯಂತೆ ಲೋಕಸಭೆ ಸ್ಥಾನಕ್ಕೆ ಸ್ಪರ್ಧಿಸಿದ್ದು, ಗೆದ್ದ ನಂತರವೂ ಸದಾ ನಿಮ್ಮೊಂದಿಗಿರುತ್ತೇನೆ ಎಂದರು.

ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಬದಲಾಗುತ್ತಿರುವ ಪ್ರಸ್ತುತ ರಾಜಕೀಯ ವಿದ್ಯಮಾನಗಳ ನಡುವೆ ಬಿಜೆಪಿ ಕುರಿತಂತೆ ಕೆಲವರು ಇಲ್ಲಸಲ್ಲದ ಮಾತುಗಳನ್ನಾಡುತ್ತಿರುವುದು ಅವರ ಹತಾಶ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ನೈತಿಕತೆ ಇರದೇ ಅಧಿಕಾರಕ್ಕೆ ಬಂದವರಿಗೆ ಕವಡೆ ಕಾಸಿನ ಕಿಮ್ಮತ್ತೂ ಇರದೆಂಬುದನ್ನು ಇಂತಹ ಟೀಕಿಸುವ ವ್ಯಕ್ತಿಗಳು ಮೊದಲು ಅರಿಯಬೇಕು. ಟೀಕಿಸುವ ಬದಲಿಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೊಡ್ಡತನ ಮೆರೆಯಬೇಕು ಎಂದು ಕುಟುಕಿದರು. ಯಲ್ಲಾಪುರ ಕ್ಷೇತ್ರದ ಜನತೆಯ ಸ್ವಾಭಿಮಾನ ಕಾಗೇರಿಯವರ ವಿಜಯಕ್ಕೆ ಕಾರಣವಾಗಬೇಕು ಎಂದರು.

ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಜಿಲ್ಲಾದ್ಯಂತ ಬಿಜೆಪಿಯ ಬಲ ಪ್ರಬಲವಾಗಿ ಗೋಚರಿಸುತ್ತಿದೆ. ಇಂತಹ ಬೆಂಬಲವನ್ನು ಕಾರ್ಯಕರ್ತರು ಮತವನ್ನಾಗಿ ಪರಿವರ್ತಿಸಬೇಕಾಗಿದೆ. ನಮ್ಮ ಪಕ್ಷದ ಸ್ವಾಭಿಮಾನಿ ಕಾರ್ಯಕರ್ತರ ನಿಲುವನ್ನು ಯಾವುದೇ ದುಷ್ಟಶಕ್ತಿಗಳೂ ಕಸಿಯಲಾರವು ಎಂದರು.

ಹಿರಿಯ ಧುರೀಣ ಪ್ರಮೋದ ಹೆಗಡೆ ಮಾತನಾಡಿ, ಕಾಗೇರಿಯವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಳಂಕರಹಿತ ವ್ಯಕ್ತಿಯಾಗಿದ್ದಾರೆ. ಅವರು, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಕ್ಷೇತ್ರದಲ್ಲಿ ಮಾಡಿದ್ದಾರೆ. ಪ್ರಧಾನಿ ಮೋದಿಯವರ ವಿಶ್ರಾಂತಿರಹಿತ ಸಮಾಜಸೇವೆ ಹಾಗೂ ರಾಷ್ಟ್ರದ ಸರ್ವಾಂಗೀಣ ಪ್ರಗತಿಯತ್ತ ಇಡುತ್ತಿರುವ ದಾಪುಗಾಲು ಅವರ ಹಿರಿಮೆಗೆ ಸಾಕ್ಷಿಯಾಗಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಂಗೂರಮಠ, ಜಿಲ್ಲಾ ಮಹಿಳಾ ಪ್ರಮುಖಿ ರೇಖಾ ಹೆಗಡೆ ಮುಂತಾದವರು ಮಾತನಾಡಿದರು. ಪ್ರಮುಖರಾದ ಚಂದ್ರಕಲಾ ಭಟ್ಟ, ಶ್ರುತಿ ಹೆಗಡೆ, ಶ್ಯಾಮಿಲಿ ಪಾಟಣಕರ, ನಟರಾಜ ಗೌಡರ್, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ನಿಕಟಪೂರ್ವ ಮಂಡಳಾಧ್ಯಕ್ಷ ಜಿ.ಎನ್. ಗಾಂವ್ಕರ, ಉಮೇಶ ಭಾಗ್ವತ, ರವಿ ಕೈಟ್ಕರ್, ಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಮುಂತಾದವರು ವೇದಿಕೆಯಲ್ಲಿದ್ದರು.

ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಸ್ವಾಗತಿಸಿದರು. ಕಂಪ್ಲಿ ಶಕ್ತಿ ಕೇಂದ್ರ ಅಧ್ಯಕ್ಷ ವಿನೇಶ ಭಟ್ಟ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಹಾಗೂ ನಂತರ ಕಾಗೇರಿಯವರು ಪಕ್ಷದ ವಿವಿಧ ಸ್ತರದ ಕಾರ್ಯಕರ್ತರೊಂದಿಗೆ ತಾಲೂಕಿನ ಹಿಟ್ಟಿನಬೈಲ್, ಕಣ್ಣೀಗೇರಿ, ಆನಗೋಡ, ಇಡಗುಂದಿ, ವಜ್ರಳ್ಳಿ, ಚಂದಗುಳಿ, ಕಿರವತ್ತಿ ಹಾಗೂ ಹುಣಶೆಟ್ಟಿಕೊಪ್ಪಗಳಿಗೆ ತೆರಳಿ, ಮತಯಾಚನೆ ಮಾಡಿದರು.

ಬಿಜೆಪಿಗೆ ಸೇರ್ಪಡೆ...ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ ಮತ್ತು ಶಂಕರ ಗೌಡ ಬಾಶಿ ನೇತೃತ್ವದಲ್ಲಿ ಗಜಾನನ ಬರ‍್ಮನೆ, ರತ್ನಾಕರ ಹೆಗಡೆ ಹಿತ್ಲಳ್ಳಿ, ನಾರಾಯಣ ಕಾಂಡೇಕರ ಚಿಪಗೇರಿ, ರಾಜೇಂದ್ರ ಗೌಡ್ರು, ಗಣೇಶ ಹೆಗಡೆ, ಅನುಪಮಾ ಪೂಜಾರಿ, ಹೇರಿ ಶಿಂಧೆ, ಸುನೀಲ ಕಾಂಬ್ಳೆ, ಬಾಬು ಶಿಂಡಗೆ, ಬಾಗು ಪಟಗಾರ, ಗುರು ಪೂಜಾರಿ, ಬಿ.ವಿ. ಗೌಡ್ರು, ಶ್ರೀಧರ ನಾಯ್ಕ, ಪುಟ್ಟಪ್ಪ ಗೌಡ್ರು, ವಿಜಯ ನಾಯ್ಕ ಮುಂತಾದ ನೂರಾರು ಕಾರ್ಯಕರ್ತರು ಬಿಜೆಪಿಯ ತತ್ವ- ಸಿದ್ಧಾಂತಗಳನ್ನು ಒಪ್ಪಿ, ಬಿಜೆಪಿ ಸೇರ್ಪಡೆಗೊಂಡರು.