ಸಾರಾಂಶ
ಧಾರವಾಡ:
ವಚನ ಸಾಹಿತ್ಯ ಉಳಿಸಿದ ಕೀರ್ತಿ ಅಕ್ಕನಾಗಮ್ಮನಿಗೆ ಸಲ್ಲುತ್ತದೆ. ತಾಯಂದಿರು ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯ ಬೆಳೆಸಬೇಕು. ಮಾತೃಭಾಷೆ ಮರೆತರೆ ಮಾತೆಯನ್ನು ಮರೆತಂತೆ ಎಂದು ಹಿರಿಯ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ರೇಣವ್ವ ಅಂಗಡಿ ಹಾಗೂ ದಿ. ರುದ್ರಪ್ಪ ಅಂಗಡಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಮತ್ತು ‘ತಾಯಿ’ ಪ್ರಶಸ್ತಿ ಪ್ರದಾನದಲ್ಲಿ ‘ತಾಯಿ ಮತ್ತು ಸಂಸ್ಕೃತಿ’ ವಿಷಯ ಕುರಿತು ಮಾತನಾಡಿದ ಅವರು, ಅಪ್ಪಂದಿರಿಗೆ ಸಿಟ್ಟು ಹೆಚ್ಚು. ತಾಯಂದಿರಿಗೆ ತಾಳ್ಮೆ ಗುಣ ಹೆಚ್ಚು. ತಾಯಂದಿರು ಇಂಗ್ಲಿಷ್ ಮಾಧ್ಯಮದ ಬೆನ್ನು ಹತ್ತದೆ ಮಾತೃಭಾಷೆಯ ಮಾಧ್ಯಮದಲ್ಲಿ ಕಲಿತರೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯಗಳು ಪರಿಚಯವಾಗುತ್ತದೆ. ಅಂಕಗಳ ಬೆನ್ನು ಹತ್ತದೆ ಸಂಬಂಧ, ಕೌಶಲ, ಮೌಲ್ಯಗಳು ಸಂಸ್ಕಾರದಿಂದ ಮಗುವಿನ ವ್ಯಕ್ತಿತ್ವ ಆದರ್ಶಮಯವಾಗುತ್ತದೆ. ಮಗುಗೆ ಮಾರ್ಗದರ್ಶನ ತಾಯಿ ಮಾಡಬೇಕು ಎಂದರು.
ಕಪ್ಪತಗುಡ್ಡದ ನಂದಿವೇರಿ ಶಿವಕುಮಾರ ಸ್ವಾಮೀಜಿ, ಸಂಪತ್ತು-ಸಂಬಂಧಗಳ ಕುರಿತು ಮಾತನಾಡಿ, ಸಂಪತ್ತು ಮೌಲ್ಯಗಳನ್ನು ಗೌರವಿಸದೆ ವ್ಯವಹಾರಿಕ ಜಾಣ್ಮೆ ಕಲಿಸಿದರೆ, ಸಂಬಂಧಗಳು ಸಂಸ್ಕೃತಿ-ಸಂಸ್ಕಾರ ಮೌಲ್ಯಗಳನ್ನು ಕಲಿಸುತ್ತದೆ ಎಂದು ಹೇಳಿದರು.ಹಿರಿಯ ವೈದ್ಯರ ಡಾ. ಮಹೇಶ ನಾಲವಾಡ ಮತ್ತು ಡಾ. ರವಿಕಿರಣ ಅವರಿಗೆ ‘ತಾಯಿ’ ಪ್ರಶಸ್ತಿಯನ್ನು ಮಾನವ ಹಕ್ಕುಗಳ ಆಯೋಗದ ಸದಸ್ಯ ಸುರೇಶ ಒಂಟಗೋಡಿ ಪ್ರಶಸ್ತಿ ಪ್ರದಾನ ಮಾಡಿದರು.
ದತ್ತಿದಾನಿ ಡಾ. ಲಿಂಗರಾಜ ಅಂಗಡಿ ದತ್ತಿ ಆಶಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಬಸವಶಾಂತಿ ಮಿಶನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಮಾತನಾಡಿದರು. ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವಿದುಷಿ ಡಾ. ಶೋಭಾ ಜಾಬೀನ ಸುಗಮ ಸಂಗೀತ ಪ್ರಸ್ತುತ ಪಡಿಸಿದರು.ಸ್ನೇಹಾ ಅಂಗಡಿ ಪ್ರಾರ್ಥಿಸಿದರು. ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.