ಸಾರಾಂಶ
ಮಂಗಳೂರು : ಕರ್ನಾಟಕ ಬಿಜೆಪಿಯಲ್ಲಿ ರಾಜ್ಯ ನಾಯಕತ್ವ ಬದಲಾವಣೆಯ ಕೂಗು ಇನ್ನೂ ಹಸಿರಾಗಿಯೇ ಇರುವಂತೆಯೇ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತೆ ರಾಜ್ಯಾಧ್ಯಕ್ಷರಾಗಲಿ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇರಳ ದೇವಸ್ಥಾನದಲ್ಲಿ ಪ್ರಾರ್ಥಿಸಿ ಹಾರೈಸಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಗಡಿನಾಡು ಕಾಸರಗೋಡಿನ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ವೇದಿಕೆಯಲ್ಲಿ ಶನಿವಾರ ಡಿಕೆಶಿ ಈ ಮಾತನ್ನಾಡಿದ್ದಾರೆ.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಡಿಕೆಶಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಡಿಕೆಶಿ ಒಂದೇ ವೇದಿಕೆಯಲ್ಲಿ ಜೊತೆಯಾಗಿದ್ದರು.
ಮಧೂರು ದೇವರ ಅನುಗ್ರಹದಿಂದ ನಳಿನ್ ಕುಮಾರ್ ಮತ್ತೆ ರಾಜ್ಯಾಧ್ಯಕ್ಷರಾಗಲಿ, ಮಾಜಿ ಆಗದೇ ಇರಲಿ ಎಂದು ಡಿಕೆಶಿ ಭಾಷಣದಲ್ಲಿ ಹೇಳಿರುವ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗಿದೆ.
ವೇದಿಕೆಯಲ್ಲಿ ನನ್ನ ಸ್ನೇಹಿತ, ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಅವರು ಮಾಜಿ ಅಂದುಕೊಳ್ಳುವುದು ಬೇಡ, ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಹೀರೋ ಝೀರೋ ಆಗುತ್ತಾನೆ, ಝೀರೋ ಹಿರೋ ಆಗುತ್ತಾನೆ. ನಾನು ಮತ್ತು ನೀವು ಒಂದೇ ವೇದಿಕೆಯಲ್ಲಿ ದೇವರನ್ನು ಪ್ರಾರ್ಥನೆ ಮಾಡಿದ್ದೇವೆ. ಭಗವಂತ ನಿಮಗೆ ಎಲ್ಲ ವಿಘ್ನ ನಿವಾರಣೆ ಮಾಡಿ ಮತ್ತೆ ಈ ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ ಕೊಡಲಿ. ಮತ್ತೆ ನಿಮಗೆ ಅವಕಾಶ ಸಿಗಲಿ ಎಂದು ನಾನು ಕೂಡ ಪ್ರಾರ್ಥನೆ ಮಾಡುತ್ತೇನೆ'' ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿದರು.