ನರಗುಂದ ಮಾರುಕಟ್ಟೆ ಮಾದರಿಯಾಗಲಿ

| Published : Jan 24 2025, 12:48 AM IST

ಸಾರಾಂಶ

ಅರ್ಧಕ್ಕೆ ನಿಂತಿರುವ ಸಾಯಿ ಮಂದಿರಕ್ಕೆ ಆರ್ಥಿಕ ಧನಸಹಾಯದ ಭರವಸೆ ನೀಡಿದ ಅವರು, ಫೆ.8ಕ್ಕೆ ವರ್ತಕರ ಭವನ ಉದ್ಘಾಟನೆ ಮಾಡಲಾಗುವುದು

ನರಗುಂದ: ಶ್ರಮಿಕ ಭವನವು ವಿಶ್ರಾಂತಿ ಮತ್ತು ಶೌಚಾಲಯ ಸೇರಿದಂತೆ ಹಮಾಲರ ಅನುಕೂಲಕ್ಕೆ ತಕ್ಕಂತೆ ನಿರ್ಮಾಣವಾಗಲಿ. ನರಗುಂದ ಮಾರುಕಟ್ಟೆ ರಾಜ್ಯದಲ್ಲಿಯೇ ಮಾದರಿ ಮಾರುಕಟ್ಟೆಯಾಗಿ ಪರಿವರ್ತನೆಯಾಗಲು ವ್ಯಾಪಾರಸ್ಥರು ಸೇರಿದಂತೆ ಎಲ್ಲರ ಸಹಕಾರ ಅವಶ್ಯ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ಗುರುವಾರ ಎಪಿಎಂಸಿ ಆವರಣದಲ್ಲಿ ಕೇಂದ್ರ ರಸ್ತೆ ನಿಧಿ ಯೋಜನೆಯಡಿ ನರಗುಂದ-ಬನಹಟ್ಟಿ- ಅಮರಗೋಳ ರಸ್ತೆಯ 6.17 ಕಿಮೀ ಆಯ್ದ ಭಾಗಗಳಲ್ಲಿ ₹ 3.16 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 2023-24 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಮಂಜೂರಾದ ಅಭಿವೃದ್ಧಿ ಕಾಮಗಾರಿ, ಎಪಿಎಂಸಿಯಲ್ಲಿ ₹15 ಲಕ್ಷ ವೆಚ್ಚದ ಕ್ಯಾಂಟಿನ್‌ ಮತ್ತು ₹ 30 ಲಕ್ಷ ವೆಚ್ಚದ ಶ್ರಮಿಕ ಭವನ ನಿರ್ಮಾಣ ಹಾಗೂ ಶಿರೋಳ ಮತ್ತು ಕೊಣ್ಣೂರ ಉಪ ಮಾರುಕಟ್ಟೆಗಳಲ್ಲಿ ₹ 40 ಲಕ್ಷ ವೆಚ್ಚದ ಬಾಕಿಯಿರುವ ಕಂಪೌಂಡ ಗೋಡೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಮಾತನಾಡಿದರು.

ದಿ. ಎಸ್.ಎಫ್.ಪಾಟೀಲ ಶಾಸಕರಿದ್ದಾಗ 102 ಎಕರೆ ವಿಸ್ತೀರ್ಣವುಳ್ಳ ಎಪಿಎಂಸಿ ನಿರ್ಮಾಣವಾಗಿದೆ. ನಾನು ಸಚಿವನಾಗಿದ್ದಾಗ ಮತ್ತು ಎಪಿಎಂಸಿಗೆ ಎನ್.ವಿ.ಮೇಟಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಟ್ಟಣದಲ್ಲಿನ ಎಲ್ಲ ವ್ಯಾಪಾರಸ್ಥರು ಎಪಿಎಂಸಿ ಆವರಣದಲ್ಲಿಯೇ ವ್ಯಾಪಾರ ಮಾಡಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದಾಗ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಈ ವರ್ಷ ಎರಡೂವರೆ ಕೋಟಿ ವಹಿವಾಟು ನಡೆದು ಜಿಲ್ಲೆಯಲ್ಲಿಯೇ ಶ್ರೇಷ್ಠ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ನೆಟ್ಟ 900 ಗಿಡಗಳಲ್ಲಿ ಐದನೂರಕ್ಕೂ ಹೆಚ್ಚು ಗಿಡಮರ ಬೆಳೆದು ನಿಂತಿವೆ. ವ್ಯಾಪಾರಸ್ಥರಿಗಾಗಿ 25 ಚಿಕ್ಕ ಮಳಿಗೆ ನಿರ್ಮಾಣ ಮಾಡಲಾಗಿದೆ. ಅರ್ಧಕ್ಕೆ ನಿಂತಿರುವ ಸಾಯಿ ಮಂದಿರಕ್ಕೆ ಆರ್ಥಿಕ ಧನಸಹಾಯದ ಭರವಸೆ ನೀಡಿದ ಅವರು, ಫೆ.8ಕ್ಕೆ ವರ್ತಕರ ಭವನ ಉದ್ಘಾಟನೆ ಮಾಡಲಾಗುವುದು ಎಂದರು.

ಮಾಜಿ ಶಾಸಕ ಬಿ.ಆರ್.ಯಾವಗಲ್ಲ ಹಿರಿಯರು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದ್ದು, ನಾನೊಬ್ಬ ಶಾಸಕನಾಗಿ ಆಯ್ಕೆಯಾಗಲಿಲ್ಲವಲ್ಲ ಎಂಬ ನೋವಿದೆ. ಸರ್ಕಾರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲಿಕ್ಕೆ ತಮ್ಮ ಮಗನನ್ನು ಪಕ್ಷದ ತಾಲೂಕಾಧ್ಯಕ್ಷ ಮತ್ತು ಮತ್ತೊಬ್ಬ ಮಗನನ್ನು ಗ್ಯಾರಂಟಿ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅವರಿಗೆ ನನ್ನ ಬೆಳವಣಿಗೆ ಸಹಿಸಲಿಕ್ಕೆ ಆಗುತ್ತಿಲ್ಲ, ನನಗೆ ಉದ್ಯೋಗವಿದೆ, ಇನ್ಮುಂದೆ ಅವರ ಬಗ್ಗೆ ನಾನು ಟೀಕೆ, ಟಿಪ್ಪಣಿ ಮಾಡದೇ ಅಭಿವೃದ್ಧಿ ಕಡೆ ಗಮನ ಹರಿಸುವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ಜಿ.ಟಿ. ಗುಡಿಸಾಗರ, ಶಿವನಗೌಡ ಕರಿಗೌಡ್ರ, ಸಂಭಾಜಿ ಕಾಶೀದ, ಮಂಜು ಆನೇಗುಂದಿ, ವಿಜಯ ಕೊಪ್ಪಳ, ರಾಜುಗೌಡ ಪಾಟೀಲ, ನಿಂಗಪ್ಪ ನಾಗನೂರ, ಬಸವರಾಜ ಹುಲಕುಂದ, ಮಹೇಶ ಹಟ್ಟಿ, ವಿಜಯ ಕೊಪ್ಪಳ, ಎನ್.ವಿ. ಮೇಟಿ, ಕೊಟ್ರೇಶ ಕೊಟ್ರಶೆಟ್ಟಿ, ಶಂಕರಗೌಡ ಯಲ್ಲಪ್ಪಗೌಡ್ರ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ, ಸಂತೋಷ ಹಂಚಿನಾಳ, ಸಿದ್ದು ಹೂಗಾರ, ವಿಠ್ಠಲ ಹವಾಲ್ದಾರ, ಗುತ್ತಿಗೆದಾರ ಎಸ್.ಬಿ. ಅಬ್ಬಿಗೇರಿ, ಎಂ.ಎಂ. ಭಾವಿಕಟ್ಟಿ, ಪಿ.ಎಸ್. ಕೊಪ್ಪದ ಸೇರಿದಂತೆ ಮುಂತಾದವರು ಇದ್ದರು.