ಶಾಂತಿ, ಸಾಮರಸ್ಯಕ್ಕೆ ಯಾರೂ ಭಂಗ ತರಬೇಡಿ: ಎಸ್ಸೆಸ್ಸೆಂ

| Published : Sep 25 2024, 12:48 AM IST

ಶಾಂತಿ, ಸಾಮರಸ್ಯಕ್ಕೆ ಯಾರೂ ಭಂಗ ತರಬೇಡಿ: ಎಸ್ಸೆಸ್ಸೆಂ
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ರಾಜ್ಯಕ್ಕೆ ಮಾದರಿ, ಅಭಿವೃದ್ಧಿ ಹೊಂದಿದ ಮಹಾ ನಗರವನ್ನಾಗಿಸಲು ದಾವಣಗೆರೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಒಗ್ಗಟ್ಟಿನಿಂದ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸೋಣ. ಮುಂದಿನ ದಿನಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸಲು ಜಿಲ್ಲಾಡಳಿತವೇ ಮಾರ್ಗಸೂಚಿ ರೂಪಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

- ಪೊಲೀಸ್ ಇಲಾಖೆ ಕ್ರಮದಲ್ಲಿ ಯಾರ ಮಧ್ಯ ಪ್ರವೇಶವಿಲ್ಲ, 1991ರಲ್ಲಿ ದಾವಣಗೆರೆ ಸಾಕಷ್ಟು ನೋವುಂಡಿದೆ ಎಂದ ಸಚಿವ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಇಡೀ ರಾಜ್ಯಕ್ಕೆ ಮಾದರಿ, ಅಭಿವೃದ್ಧಿ ಹೊಂದಿದ ಮಹಾ ನಗರವನ್ನಾಗಿಸಲು ದಾವಣಗೆರೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಒಗ್ಗಟ್ಟಿನಿಂದ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸೋಣ. ಮುಂದಿನ ದಿನಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸಲು ಜಿಲ್ಲಾಡಳಿತವೇ ಮಾರ್ಗಸೂಚಿ ರೂಪಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಕಾನೂನು ಸುವ್ಯವಸ್ಥೆ ಕಾಪಾಡಲು ಕರೆದಿದ್ದ ನಾಗರೀಕ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣೇಶ ಮೆರವಣಿಗೆ, ಇತರೆ ಸಮುದಾಯದವರು ನಡೆಸುವ ಮೆರವಣಿಗೆಯಲ್ಲಿ ಆಗುವ ಸಣ್ಣ ಘಟನೆಗಳು ಸಮಾಜಕ್ಕೆ ಬಹಳ ನಷ್ಟವನ್ನುಂಟು ಮಾಡುತ್ತವೆ ಎಂಬುದು ಮರೆಯಬೇಡಿ ಎಂದರು.

1991-92ರಲ್ಲಿ ಆದ ಸಣ್ಣ ಘಟನೆಯಿಂದ ಜನರು ಅನೇಕ ಸಂಕಷ್ಟಗಳ ಎದುರಿಸುವಂತಾಯಿತು. ಮೊನ್ನೆ ಅರಳಿ ಮರ ವೃತ್ತದ ಘಟನೆಯು ಅಷ್ಟೇ, ಪ್ರಚೋದನಾಕಾರಿ ಪೋಸ್ಟ್‌ನಿಂದ ಆಗಿದೆ. ಘಟನೆ ನಡೆಯುತ್ತಿದ್ದಂತೆಯೇ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು, ಪರಿಸ್ಥಿತಿ ನಿಯಂತ್ರಿಸಿದೆ. ಮುಂದೆ ಇಂತಹ ಯಾವುದೇ ಘಟನೆಗಳು ನಡೆಯಬಾರದು ಎಂದರು.

ಶಾಂತಿ, ಸೌಹಾರ್ದತೆ, ಸಾಮರಸ್ಯ, ಕಾನೂನಿಗೆ ಯಾರೇ ಭಂಗ ತಂದರೂ ಅಂತಹ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಕ್ರಮದಲ್ಲಿ ಯಾರ ಮಧ್ಯ ಪ್ರವೇಶವೂ ಇರುವುದಿಲ್ಲ. ಈಗಾಗಲೇ ಮಲೇಬೆನ್ನೂರು, ಚನ್ನಗಿರಿ ಗಣೇಶೋತ್ಸವ ಬಹಳ ಸೌಹಾರ್ದದಿಂದ ಮುಗಿದಿವೆ. ನಗರದಲ್ಲಿ ಇನ್ನೂ ಅನೇಕ ಗಣೇಶ ಮೆರವಣಿಗೆ ಇವೆ. ವಿಜಯದಶಮಿ ಹಬ್ಬವೂ ಇರುವುದರಿಂದ ಎಲ್ಲರೂ ಸೌಹಾರ್ದತೆಯಿಂದ ಇರೋಣ ಎಂದರು.

ಬಾವುಟ ಕಟ್ಟಲು ಕೆಲ ಸಂದರ್ಭ ಗಲಾಟೆಗಳಾಗಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿಯಮಗಳನ್ನು ರೂಪಿಸಲಾಗುತ್ತದೆ. ಯಾರಾದರೂ ಕಾನೂನು ಕ್ರಮ ಕೈಗೊಂಡಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತದೆ. ಇಲಾಖೆಯ ಕಾರ್ಯದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡುವುದರಿಂದ ಯಾರಿಗೂ ಲಾಭವಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆತರುವ ಯಾವುದೇ ವ್ಯಕ್ತಿಗಳಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ನಗರ, ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆಗೆ ಯಾರೇ ಧಕ್ಕೆ ತಂದರೂ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಮೊನ್ನೆ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. 6 ಪ್ರಕರಣ ದಾಖಲು ಮಾಡಿ, 50 ಜನರನ್ನು ಬಂಧಿಸಲಾಗಿದೆ. ಇನ್ನೂ ಕೆಲವರಿದ್ದು, ಅಂತಹವರನ್ನು ಪತ್ತೆ ಮಾಡಿ, ಬಂಧಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ 8 ಪ್ರಕರಣ ದಾಖಲಾಗಿದೆ. ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕಟ್ಟಿಟ್ಟ ಬುತ್ತಿ. ಕೃತ್ಯದಲ್ಲಿ ಭಾಗಿಯಾದವರು ಯಾವುದೇ ಆತಂಕಪಡಬೇಕಾಗಿಲ್ಲ ಎಂದು ಹೇಳಿದರು.

ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಹಿಂದು ಸಂಘಟನೆಗಳ ಮುಖಂಡರಾದ ವೈ.ಮಲ್ಲೇಶ, ಮಾಜಿ ಮೇಯರ್ ಎಸ್.ಟಿ. ವೀರೇಶ, ಸಿ.ಎಸ್.ರಾಜು, ಆರ್.ಎಲ್.ಶಿವಪ್ರಕಾಶ, ಕಾಂಗ್ರೆಸ್ ಮುಖಂಡರಾದ ಡಿ.ಬಸವರಾಜ, ಸೋಮಲಾಪುರ ಹನುಮಂತಪ್ಪ, ನಸೀರ್ ಅಹಮ್ಮದ್, ಅಮ್ಜದ್ ಖಾನ್‌, ಜೆಡಿಎಸ್ ಮುಖಂಡ .ಅಮಾನುಲ್ಲಾ ಖಾನ್, ಸೈಯದ್ ಸೈಫುಲ್ಲಾ, ಟಿ.ಅಸ್ಗರ್‌, ಜಯಂತ್ ಇತರರು ಇದ್ದರು.

ಉಭಯ ಸಮುದಾಯಗಳ ಮುಖಂಡರು ಶಾಂತಿ, ಸೌಹಾರ್ದತೆ ಕಾಪಾಡುವ ಬಗ್ಗೆ, ಸಮಾಜದಲ್ಲಿ ಸೌಹಾರ್ದತೆಗೆ ಧಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

- - -

ಬಾಕ್ಸ್‌ ಸಿಸಿ ಟಿವಿ ಕ್ಯಾಮರಾಗಳ ಹೆಚ್ಚಳಕ್ಕೆ ಕ್ರಮ: ಸಚಿವದಾವಣಗೆರೆ: ನಗರದಲ್ಲಿ ಈಗಾಗಲೇ 500ಕ್ಕಿಂತಲೂ ಹೆಚ್ಚು ಕಡೆ ಸಿಸಿ ಟಿವಿ ಕ್ಯಾಮರಾಗಳು ಸರ್ವೇಲೆನ್ಸ್ ಮಾಡುತ್ತಿವೆ. ನಗರ ಪ್ರವೇಶಿಸುವ ಎಲ್ಲ ಮಾರ್ಗ, ವೃತ್ತ, ರಸ್ತೆ, ಸಂಪರ್ಕ ರಸ್ತೆ, ಜನದಟ್ಟಣೆ, ವಸತಿ ಪ್ರದೇಶಗಳು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಹೆಚ್ಚಿಸಲಾಗುವುದು. ಆ ಮೂಲಕ ಕಿಡಿಗೇಡಿಗಳ ಕೃತ್ಯ, ಅಪರಾಧ ತಡೆಗೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.

ನಾಗರೀಕ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಕಳ್ಳತನ, ಸರಗಳ್ಳತನ, ಗಲಾಟೆ, ಕಳವು, ಬೆದರಿಕೆ ಸೇರಿದಂತೆ ಕಾನೂನುಬಾಹಿರ ಕೃತ್ಯಗಳ ತಡೆ, ಆರೋಪಿಗಳ ಪತ್ತೆಗೆ ಸಿಸಿ ಟಿವಿ ಕ್ಯಾಮೆರಾಗಳ ಕಣ್ಗಾವಲು ಸಹಕಾರಿಯಾಗಲಿದೆ ಎಂದರು.

ಯಾವುದೇ ಪಕ್ಷವಾಗಿರಲಿ ಸ್ನೇಹತ್ವದ ವಾತಾವರಣವಿರಬೇಕು. ಸ್ನೇಹದಿಂದಲೇ ಮನಗಳನ್ನು ಗೆಲ್ಲಬೇಕು. ಪ್ರಚೋದನಾಕಾರಿ ಹೇಳಿಕೆಗಳಿಗೆ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಇದಕ್ಕಾಗಿಯೇ ಪೊಲೀಸ್ ಇಲಾಖೆ ಇದ್ದು, ಕಠಿಣ ಕ್ರಮ ಜರುಗಿಸಲಿದೆ. ಮೆರವಣಿಗೆಗಳಲ್ಲಿ ಡಿಜೆ ಬದಲಾಗಿ ಜಾನಪದ ಮೇಳಗಳು, ಸ್ಥಳೀಯ ಕಲಾತಂಡಗಳನ್ನು ಬಳಸಿಕೊಳ್ಳಿ ಎಂದು ಸಂಘಟಕರಿಗೆ ಸಚಿವ ಮಲ್ಲಿಕಾರ್ಜುನ ಸಲಹೆ ನೀಡಿದರು.

- - - (-ಫೋಟೋಗಳಿವೆ)