ಹುಬ್ಬಳ್ಳಿ:

ಉತ್ತರ ಕರ್ನಾಟಕ ಎಲ್ಲ ರಂಗದಲ್ಲಿಯೂ ಛಾಪು ಮೂಡಿಸಲು ಉದ್ಯಮಿಗಳು ಒಗ್ಗೂಡಿ ಕೆಲಸ ಮಾಡಬೇಕು. ವಿಶ್ವದ ಭೂಪಟದಲ್ಲಿ ಈ ಭಾಗ ತನ್ನದೇ ಆದ ಹೆಸರು ಗಳಿಸಬೇಕೆಂದು ನಟ ಆಶಿಷ್‌ ವಿದ್ಯಾರ್ಥಿ ಸಲಹೆ ನೀಡಿದರು.ಇಲ್ಲಿಯ ಡೆನಿಸನ್ಸ್‌ ಹೋಟೆಲ್‌ನಲ್ಲಿ ಭಾನುವಾರ ಟೈ ಹುಬ್ಬಳ್ಳಿ ಶಾಖೆ ವತಿಯಿಂದ ಆಯೋಜಿಸಿದ್ದ ಉದ್ಯಮ ಸಮಾವೇಶ -ಟೈಕಾನ್‌ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವರು ನಮಗೆ ಅನೇಕ ಅವಕಾಶ ನೀಡಿದ್ದು ಸದುಪಯೋಗಪಡಿಸಿಕೊಳ್ಳಬೇಕು. ಸಾಧನೆ ಮಾಡಲು ಮುನ್ನುಗ್ಗಬೇಕು. ಉಸಿರು ಇರುವವರೆಗೆ ಸಾಧಿಸುವ ಹಪಾಹಪಿತನ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಹಸಿವು ಇದ್ದರೆ ಸಾಧನೆಯ ಹಠ ಹುಟ್ಟುತ್ತದೆ. ಕಲಿಕೆಗೆ ವಯಸ್ಸು ಅಡ್ಡಿ ಬರುವುದಿಲ್ಲ ಎಂದ ಅವರು, ಆಧುನಿಕ ಜಗತ್ತಿಗೆ ಒಗ್ಗೂಡಿಸಿಕೊಳ್ಳಬೇಕು. ನಾನು ಎಲ್ಲಿಂದ ಬಂದಿದ್ದೇನೆ ಎನ್ನುವುದು ಮುಖ್ಯವಲ್ಲ. ಕನಸು ಕಂಡು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡಬೇಕು. ನಮ್ಮ ಜೀವನವನ್ನು ನಾವೇ ಶುರು ಮಾಡಿಕೊಳ್ಳಬೇಕು. ತಾವು ಚಿತ್ರರಂಗದಲ್ಲಿ ಬೆಳೆದು ಬಂದ ಹಾದಿ ಮತ್ತು ಈಗಲೂ ತಾವು ಮೈಗೂಡಿಸಿಕೊಂಡಿರುವ ನಟನೆ, ಹಾಡು, ಜನಸಂಪರ್ಕದ ವಿವರಗಳನ್ನು ನೀಡಿದರು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್‌.ವಿ. ಪ್ರಸಾದ ಮಾತನಾಡಿ, ಉತ್ತರ ಕರ್ನಾಟಕ ರೈಸಿಂಗ್‌ ಎನ್ನುವ ಶಿರೋನಾಮೆ ಕಲ್ಪನೆ ಅದ್ಬುತವಾಗಿದೆ. ಟೈ ಹುಬ್ಬಳ್ಳಿ ಶಾಖೆ ಪ್ರತಿ ವರ್ಷವೂ ವಿನೂತನವಾಗಿ ಸಮಾವೇಶ ಆಯೋಜಿಸುತ್ತಿದೆ. ನವೋದ್ಯಮಿಗಳನ್ನು ಬೆಳೆಸುವ, ಪ್ರೋತ್ಸಾಹಿಸುವ ರೀತಿ ಚೆನ್ನಾಗಿದೆ. ಬಹಳಷ್ಟು ವಿಷಯಗಳ ತಜ್ಞರು ಬಂದು ಇಲ್ಲಿ ಉಪನ್ಯಾಸ ನೀಡಿ, ಜ್ಞಾನದ ಭಂಡಾರವನ್ನು ಧಾರೆ ಎರೆಯುತ್ತಿರುವುದು ಸಂತಸದ ವಿಷಯ ಎಂದರು.

ಇದೇ ವೇಳೆ ಬಿ.ಡಿ. ಪಾಟೀಲ ಆ್ಯಂಡ್ ಸನ್ಸ್ ಚೇರಮನ್ ಸುರೇಶ ಪಾಟೀಲ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಸಾಯಿ ಅಗ್ರೋ ಇಕ್ಯೂಪಮೆಂಟ್ ಪ್ರೈ. ಲಿ.ನ ಮಾಲತೇಶ ನಿರಂಜನ ಅವರಿಗೆ ಅಗ್ರಿ-ಟೆಕ್ ಪ್ರಶಸ್ತಿ, ಇನ್‌ವೇರೋಟೆಕ್ ಸಲ್ಯೂಷನ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರೀತೇಶ ಚೌಧರಿ ಅವರಿಗೆ ಇನೋವೇಷನ್, ಎಲರ್ ಟೆಕ್ನಾಲಾಜೀಸ್ ಪ್ರೈ. ಲಿ.ನ ನಮ್ರತಾ ಟಾಟೆ ಅವರಿಗೆ ಮಹಿಳಾ ವರ್ಷದ ಉದ್ಯಮಿ ಪ್ರಶಸ್ತಿ, ಸೋಷಿಯಲ್ ವರ್ಷದ ಉದ್ಯಮ ಪ್ರಶಸ್ತಿಯನ್ನು ಜೈಭಾರತ್ ಫೌಂಡೇಶನ್‌ಗೆ ನೀಡಿ ಗೌರವಿಸಲಾಯಿತು.


ಸಮಾವೇಶದಲ್ಲಿ ಬಹಳಷ್ಟು ಉದ್ಯಮಿಗಳು ಉಪನ್ಯಾಸ ನೀಡಿದರು. ಟೈ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಗಿರೀಶ ಮಾನೆ, ಸಂಚಾಲಕ ವಿಶಾಲ ನಾಡಗೌಡ, ಮಹಿಳಾ ವಿಂಗ್‌ ಅಧ್ಯಕ್ಷೆ ಪ್ರಭಾ ಹಂದಿಗೋಳ, ಡಾ. ವಿವೇಕ ಪಾಟೀಲ, ಪ್ರಶಾಂತ ಹೆಬಸೂರ ಸೇರಿದಂತೆ ಹಲವರಿದ್ದರು.