ಸಾರಾಂಶ
- ದಾವಣಗೆರೆಯಲ್ಲಿ 44ನೇ ರಾಜ್ಯಮಟ್ಟದ ನೇತ್ರ ವೈದ್ಯರ ಸಮ್ಮೇಳನ ಉದ್ಘಾಟನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯಮಟ್ಟದ ನೇತ್ರ ವೈದ್ಯರ ಸಮ್ಮೇಳನವು ಕೇವಲ ವೈದ್ಯರ ಸಮ್ಮೇಳನವಾಗಿರದೇ, ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ನಮ್ಮೆಲ್ಲರ ಸಾಮೂಹಿಕ ಸಂಕಲ್ಪವನ್ನು ಪುನರಾವರ್ತಿಸುತ್ತಿದೆ. ನೇತ್ರ ವಿಜ್ಞಾನದ ಸೇವೆಗಳು ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೇ, ಗ್ರಾಮೀಣ ಭಾಗಕ್ಕೂ ವಿಸ್ತರಣೆಯು ನಿಮ್ಮೆಲ್ಲರಿಂದಲೂ ಆಗಬೇಕಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ನಗರದಲ್ಲಿ ಶುಕ್ರವಾರ ಕರ್ನಾಟಕ ಆಪ್ತಮಾಲಿಕ್ ಸೊಸೈಟಿ, ಜೆಜೆಎಂ ವೈದ್ಯಕೀಯ ಮಹಾ ವಿದ್ಯಾಲಯ, ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾಲಯ, ದಾವಣಗೆರೆ ನೇತ್ರ ತಜ್ಞರ ಸಂಘಗಳು ಹಮ್ಮಿಕೊಂಡಿದ್ದ 44ನೇ ರಾಜ್ಯಮಟ್ಟದ ನೇತ್ರ ವೈದ್ಯರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಕಂಪ್ಯೂಟರ್ ವಿಜ್ಹನ್ ಸಿಂಡ್ರೋಮ್, ಮಧುಮೇಹ ರೆಟಿನೋಪತಿ, ಕಣ್ಣಿನ ಪೊರೆ, ಬಾಲ್ಯದ ಮಯೋಪಿಯಾ ಪ್ರಕರಣಗಳ ಹೆಚ್ಚಳವು ಕಣ್ಣುಗಳ ಸಮಸ್ಯೆಗೆ ಕಾರಣವಾಗುತ್ತಿವೆ. ದೃಷ್ಟಿಯೆಂದರೆ ಕೇವಲ ನೋಡುವುದು ಮಾತ್ರವಲ್ಲ, ಕನಸು ಕಾಣುವುದು ಮತ್ತು ಪ್ರಪಂಚದೊಂದಿಗೆ ತೊಡಗಿಸಿಕೊಳ್ಳುವುದು ಎಂಬುದನ್ನು ನೆನಪಿನಲ್ಲಿಡಬೇಕು. ದೇಶದಲ್ಲಿ ಕಣ್ಣಿನ ಆರೈಕೆ ಕ್ಷೇತ್ರವು ಗಣನೀಯವಾಗಿ ಬೆಳೆದಿದೆ ಎಂದು ತಿಳಿಸಿದರು.
ಕೂಡ್ಲಿಗಿ ಶಾಸಕ, ದೆಹಲಿ ಏಮ್ಸ್‌ನ ಕಣ್ಣಿನ ತಜ್ಞ ಡಾ. ಎನ್.ಟಿ. ಶ್ರೀನಿವಾಸ ಮಾತನಾಡಿ, ವೃತ್ತಿಪರ ವೈದ್ಯರಾಗಿದ್ದು, ರಾಜಕಾರಣಿಯಾಗುವುದು, ಶಾಸಕರಾಗಿರುವುದು ಎರಡೂ ವಿಭಿನ್ನ. ಆದರೆ, ರಾಜಕೀಯ ಕಣ್ಣಿನ ವೈದ್ಯಕೀಯ ಶಾಸ್ತ್ರದಷ್ಟು ಕಷ್ಟಕರವಲ್ಲ. ನೇತ್ರತಜ್ಞನಾಗಿ ನಾವು ಮೈಕ್ರಾನ್‌ಗಳಲ್ಲಿ ನೋಡುತ್ತೇವೆ. ಆದರೆ ರಾಜಕೀಯದಲ್ಲಿ ಸಾವಿರಾರು ಕಿಲೋ ಮೀಟರ್‌ಗಳಲ್ಲಿ ನೋಡಬೇಕಿದೆ. ಅಲ್ಲಿ ರೋಗಿಗಳನ್ನು ನೋಡುತ್ತಿದ್ದೆವು, ಈಗ ಇಲ್ಲಿ ಜನರನ್ನು ನೋಡುತ್ತಿದ್ದೇವೆ ಎಂದರು.ಸೊಸೈಟಿ ಅಧ್ಯಕ್ಷ ಡಾ.ರವೀಂದ್ರ ಬಣಕಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಎಚ್.ಎಂ. ರವೀಂದ್ರನಾಥ, ಡಾ.ಅರ್ಪಿತಾ, ಡಾ.ನಮ್ರತಾ ಶರ್ಮ, ಡಾ.ವನತಿ, ಡಾ.ಕೃಷ್ಣಪ್ರಸಾದ, ಡಾ.ಚೈತ್ರಾ ಜಯದೇವ್, ಡಾ.ವಿಕ್ರಂ ಜೈನ್, ಡಾ.ಶಶಿಕಲಾ ಕೃಷ್ಣಮೂರ್ತಿ, ಡಾ.ಶುಕ್ಲಾ ಶೆಟ್ಟಿ, ಡಾ.ಶಿವರಾಂ, ಡಾ.ಅನಂತ ಭಂಡಾರಿ, ಡಾ.ಸಚಿನ್, ಡಾ.ಕವಿತಾ, ಡಾ.ಸೂರ್ಯಪ್ರಕಾಶ್, ಡಾ.ಸುನೀಲ್ ಗಣೇಕಲ್, ಡಾ.ಉಮೇಶ್ ಉಪಸ್ಥಿತರಿದ್ದರು.
ಹಿರಿಯ ವೈದ್ಯರಾದ ಡಾ.ಮಾಧವ್ ಹೊನ್ನತ್ತಿ, ಡಾ. ಸಿ.ಎಸ್. ಹಿರೇಮರ್, ಡಾ. ಸುರೇಂದ್ರ ಎಸ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನದಲ್ಲಿ ನೇತ್ರ ಚಿಕಿತ್ಸಾ ಕ್ಷೇತ್ರದ ತಾಂತ್ರಿಕ ಶಸ್ತ್ರಚಿಕಿತ್ಸೆ ಮತ್ತು ವೈಜ್ಞಾನಿಕ ಪ್ರಗತಿ ಬಗ್ಗೆ ಖ್ಯಾತ ವೈದ್ಯರು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಮಂಡಿಸಿದರು. ನೇತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ವಿವಿಧ ಕಂಪನಿಗಳಿಂದ ನವೀನ ಯಂತ್ರೋಪಕರಣಗಳು, ಔಷಧಗಳ ಕುರಿತ ಮಳಿಗೆಗಳು ಗಮನ ಸೆಳೆದವು.- - -
-14ಕೆಡಿವಿಜಿ12, 13.ಜೆಪಿಜಿ:ದಾವಣಗೆರೆಯಲ್ಲಿ ಶುಕ್ರವಾರ 44ನೇ ರಾಜ್ಯಮಟ್ಟದ ನೇತ್ರ ವೈದ್ಯರ ಸಮ್ಮೇಳನವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))