ಸಾರಾಂಶ
ಮುಂಡರಗಿ: ಇತ್ತೀಚಿನ ದಿನಮಾನಗಳಲ್ಲಿ ಯಾವುದೇ ಕೆಲಸ ಮಾಡದೇ ಕೇವಲ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ನಾವು ಮಾತನಾಡುವುದಕ್ಕಿಂತ ನಮ್ಮ ಸಾಧನೆಗಳೇ ಮಾತನಾಡುವಂತೆ ಕೆಲಸ ಮಾಡಬೇಕು ಅಂದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಶಿಗ್ಗಾಂವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಸಿ.ವಾಲಿ ಹೇಳಿದರು.
ಅವರು ಗುರುವಾರ ಪಟ್ಟಣದ ಶ್ರೀ ಜ.ಅ.ವಿ. ಸಮಿತಿಯ ಶತಮಾನೋತ್ಸವ ಸಂಭ್ರಮದಡಿಯಲ್ಲಿ ನಡೆದ ಕ.ರಾ. ಬೆಲ್ಲದ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಸ್ತುತ ಸಾಲಿನ ಪಠ್ಯೆ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಬಿಎ ಮತ್ತು ಬಿ ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ನಾವು ದ್ವೇಷ ಬಿಟ್ಟು ಎಲ್ಲರನ್ನೂ ಪ್ರೀತಿ ಮಾಡುವುದನ್ನು ಕಲಿಯಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಕಡಿಮೆಯಾಗುತ್ತಿದೆ. ಸತತ ಪರಿಶ್ರಮದಿಂದ ಕಡಿಮೆ ಅಂಕ ಬಂದರೂ ಪರವಾಗಿಲ್ಲ ನಕಲು ಮಾಡದೇ ಪರೀಕ್ಷೆ ಬರೆದು ತೇರ್ಗಡೆಯಾಗಿ ಉನ್ನತ ಸ್ಥಾನಕ್ಕೇರುವ ಮೂಲಕ ಕಲಿತ ಶಾಲಾ-ಕಾಲೇಜುಗಳ ಹಾಗೂ ಹುಟ್ಟಿದ ಊರಿನ ಮತ್ತು ತಂದೆ-ತಾಯಿಂದಿರ ಕೀರ್ತಿ ತರುವಂತಾಗಬೇಕು. ಮಠಗಳ ನೆರಳಿನಲ್ಲಿ, ಕಡಿಮೆ ಖರ್ಚಿನಲ್ಲಿ ಓದುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಅಂತಹ ಅವಕಾಶ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ತಮಗೆಲ್ಲ ಒದಗಿಸಿಕೊಟ್ಟಿದ್ದು, ಎಲ್ಲರೂ ಅದರ ಸದುಪಯೋಗ ಮಾಡಿಕೊಂಡು ಉತ್ತಮ ವ್ಯಾಸಂಗ ಮಾಡಬೇಕು ಎಂದರು.
ಜ. ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಪಠ್ಯೇತರ ಚಟುವಟಿಕೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ವಿವಿಧ ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದೀರಿ. ನಿಮಗೆಲ್ಲ ಅನ್ನದಾನೀಶನ ಆಶೀರ್ವಾದ ಸದಾ ಇದ್ದೇ ಇರುತ್ತದೆ. ಇನ್ನು ಮುಂದೆಯೂ ಸಹ ನೂತನವಾಗಿ ಕಾಲೇಜಿಗೆ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಿ ನಿಮ್ಮ ಜೀವನ ಪರಿಪೂರ್ಣವಾಗಿಸಿಕೊಳ್ಳಬೇಕು ಎಂದರು.ಆಡಳಿತಾಧಿಕಾರಿ ಡಾ. ಬಿ.ಜಿ.ಜವಳಿ ಮಾತನಾಡಿ, ನಮ್ಮ ವಿದ್ಯಾ ಸಮಿತಿಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ತನ್ನಿಮಿತ್ತ 100 ವಿಶೇಷ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಪ್ರೊ. ಆರ್.ಎಲ್. ಪೋಲೀಸಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರದಲ್ಲಿ ಕಾಲೇಜಿನ ಪಠ್ಯೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಗೈದಿರುವ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ವಿ.ಎಫ್. ಗುಡದಪ್ಪನವರ, ಪ್ರೊ. ಎಂ.ಜಿ.ಗಚ್ಚಣ್ಣವರ, ಡಾ. ಎ.ಬಿ.ಶಿವಶೆಟ್ಟಿ, ಎಂ.ಎಸ್. ಶಿವಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಾ. ಡಾ. ಡಿ.ಸಿ.ಮಠ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಸಂತೋಷ ಹಿರೇಮಠ ನಿರೂಪಿಸಿ, ವಿದ್ಯಾರ್ಥಿ ಸಂಗದ ಪ್ರಧಾನ ಕಾರ್ಯದರ್ಶಿ ಮಮತಾ ಹಣಗಿ ವಂದಿಸಿದರು.