ಸಾರಾಂಶ
ಕನ್ನಡಪ್ರಭ ವಾರ್ತೆ ನವಲಗುಂದ
ಜೀವನದ ಪಾಠ ಕಲಿಸುವುದು ಪೋಷಕರ ಕೆಲಸ. ಶಿಕ್ಷಣದ ನೀಡುವುದು ಶಿಕ್ಷಕ ಕೆಲಸ. ಇಬ್ಬರೂ ಸೇರಿ ಮಕ್ಕಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ತಮಗೆ ಮಕ್ಕಳನ್ನು ದೇವರು ನೀಡಿದ್ದಾನೆ. ಜೀವನ ಮತ್ತು ಶಿಕ್ಷಣ ನೀಡುವುದು ನಿಮ್ಮ ಧರ್ಮ ಎಂದು ಹ್ಯೂಮನ್ ಮೈಂಡಸೆಟ್ ಕೋಚ್ ಮಾಂತೇಶ ಮಾಶಾಲ ಹೇಳಿದರು.ಪಟ್ಟಣದ ನಾಗಲಿಂಗ ಮಹಾಸ್ವಾಮಿಗಳ ವಿದ್ಯಾಪೀಠದ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್‌ನವರು ತಿರ್ಲಾಪುರ, ಗುಡಿಸಾಗರ, ಬ್ಯಾಲ್ಯಾಳ, ನಾವಳ್ಳಿ, ನಲವಡಿ ಗ್ರಾಮಗಳ ಸರಕಾರಿ ಶಾಲೆಗಳಲ್ಲಿ ಮಕ್ಕಳ ಪಾಲಕರ ಸಮಾವೇಶದಲ್ಲಿ ಮಾತನಾಡಿದರು.
ಪಾಲಕರು ತಮ್ಮ ಮಕ್ಕಳ್ಳಲ್ಲಿ ಮೇಲು-ಕೀಳು ಎಂಬ ಭಾವನೆಗಳನ್ನು ಬೆಳೆಸಬಾರದು. ಯಾವ ಮಕ್ಕಳಿಗೆ ಯಾವ ವಿಷಯದ ಬಗ್ಗೆ ಆಸಕ್ತಿ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳ ಮನಸ್ಥಿತಿಯನ್ನು ತಂದೆ ತಾಯಿಗಳು ಅರಿತಿರಬೇಕು. ಒಂದು ವರ್ಷದಿಂದ 10 ವರ್ಷದ ವರೆಗೆ ಮಕ್ಕಳ ಮನಸ್ಸು ಹಸಿಗೋಡೆ ಇದ್ದಂತೆ. ಆಗ ಕಲಿಸಿದ ವಿದ್ಯೆ ಜೀವನಪೂರ್ತಿ ಮರೆಯುವುದಿಲ್ಲ. ಮಕ್ಕಳನ್ನು ಗದರದೆ ಪ್ರೀತಿಯಿಂದ ತಿಳಿವಳಿಕೆ ನೀಡಬೇಕು ಎಂದರು.ಶಿಕ್ಷಕ ಶ್ರೀನಿವಾಸ ಅಮಾತ್ಯೆನ್ನವರ ಮಾತನಾಡಿ, ಸಮಾಜಮುಖಿ ಕಾರ್ಯಗಳನ್ನು ಬಿಂಬಿಸುವ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆಗಳು ಕನ್ನಡ ಶಾಲೆಗಳ ಉಳಿವಿಗಾಗಿ ದುಡಿಯುತ್ತಿವೆ. ಮಕ್ಕಳಿಗೆ ಸರಕಾರ ಸವಲತ್ತುಗಳನ್ನು ನೀಡುತ್ತಿದೆ. ಪಾಲಕರೂ ತಮ್ಮ ಮಕ್ಕಳ ಚಲನವಲನಗಳನ್ನು ಗಮನಿಸಬೇಕು. ಶಾಲೆಯಲ್ಲಿ ಕಲಿತ ವಿಷಯದ ಬಗ್ಗೆ ಮನೆಯಲ್ಲಿ ಮಕ್ಕಳಿಂದ ಕೇಳಿ ತಿಳಿಯಬೇಕು. ಅಂದಾಗ ಮಕ್ಕಳು ಶಾಲೆಗೆ ಮತ್ತು ಪಾಲಕರಿಗೆ ಗೌರವ ತಂದು ಕೊಉಡತ್ತಾರೆ ಎಂದರು.
ತದನಂತರ ಮಾತನಾಡಿದ ಪ್ರಾದೇಶಿಕ ವ್ಯವಸ್ಥಾಪಕರಾದ ಜಯಂತ ಕೆ.ಎಸ್. ಹಾಗೂ ಜಯಕುಮಾರ, ನಮ್ಮ ಸಂಸ್ಥೆಯಿಂದ ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು, ನಾವೇ ಇಬ್ಬರು ಶಿಕ್ಷಕರನ್ನು ನಿಯೋಜನೆ ಮಾಡುತ್ತೇವೆ. ಅವರು ವಿಜ್ಞಾನ, ಗಣಿತ, ಸಮಾಜ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಬೋಧನೆ ಮಾಡುತ್ತಾರೆ. ಮಕ್ಕಳಿಗೆ ಮನವರಿಕೆಯಾಗುವಂತೆ ಬೋಧನೆ ಮಾಡಲಾಗುತ್ತಿದೆ. ಶಾಲೆಗಳಲ್ಲಿಯೇ ಸಣ್ಣ ಗ್ರಂಥಾಲಯಗಳನ್ನು ತೆರೆದು ಸಾಧಕರ, ಕವಿಗಳ, ವಿಜ್ಞಾನಿಗಳ, ಗಣಿತಜ್ಞರು ಸೇರಿದಂತೆ ವಿವಿಧ ಸುಮಾರು 200ಕ್ಕೂ ಹೆಚ್ಚು ಪುಸ್ತಕಗಳನ್ನು ಶೇಖರಣೆ ಮಾಡಲಾಗಿದೆ. ಈಗಾಗಲೇ ಎರಡು ವರ್ಷಗಳಿಂದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಫಲಿತಾಂಶಗಳು ಬರುತ್ತಿವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅದರಂತೆ ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿಯೂ ಸ್ವಾಮಿ ವಿವೇಕಾನಂದರ ಈ ಸಂಸ್ಥೆಯಿಂದ ಹೆಚ್ಚು ಶಿಕ್ಷಕರನ್ನು ನಿಯೋಜನೆ ಮಾಡಿಕೊಂಡು ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾಗಲಿದ್ದೇವೆ.ಈ ಸಂದರ್ಭದಲ್ಲಿ ಜಯಂತ ಕೆ.ಎಸ್., ಬಸಪ್ಪ ಕಳ್ಳಿಮನಿ, ಶ್ರೀಕಾಂತ ಹಂಜಿ, ಪ್ರದೀಪ ಜೋಗೆರ್, ಉಮೇಶ ಬೈಲಪತ್ತಾರ, ಉಮೇಶ ಬಡಿಗೇರ, ಪ್ರತಾಪ ಕುರಹಟ್ಟಿ, ಅಪೂರ್ವ ಹೋಳಿಗಿ, ನೇತ್ರಾವತಿ ಚಂಡೂರ, ಸುಧಾ ಕುಲಕರ್ಣಿ, ಆಕಳದ, ವಿಜಯಕುಮಾರ ಕಾರಿಕಾಯಿ ಹಾಗೂ ಪಾಲಕರು ಉಪಸ್ಥಿತರಿದ್ದರು.