ಅಂಕೋಲಾದಲ್ಲಿ ಪತ್ರಿಕಾ ಭವನ ನಿರ್ಮಾಣವಾಗಲಿ: ಸುರೇಶ ನಾಯಕ

| Published : May 28 2024, 01:14 AM IST

ಅಂಕೋಲಾದಲ್ಲಿ ಪತ್ರಿಕಾ ಭವನ ನಿರ್ಮಾಣವಾಗಲಿ: ಸುರೇಶ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಅಂಕೋಲಾ ಎನ್ನುವುದು ಒಂದು ಜಾಗೃತ ನೆಲ. ದಿನಕರ ದೇಸಾಯಿಯವರ ಪತ್ರಿಕೆ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಸಾಕಷ್ಟು ಪತ್ರಿಕೆ ಹಾಗೂ ಪತ್ರಕರ್ತರು ಬೆಳೆದು ಬಂದಿದ್ದಾರೆ.

ಅಂಕೋಲಾ: ಸಮಾಜದಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಪಾತ್ರ ಮಹತ್ವವಾದದ್ದು. ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿರುವುದು ತಾಲೂಕು ಪತ್ರಕರ್ತರ ಸಂಘದ ಕಾರ್ಯವೈಖರಿ ಶ್ಲಾಘನೀಯ ಎಂದು ಉದ್ಯಮಿ ಸುರೇಶ ಆರ್. ನಾಯಕ ತಿಳಿಸಿದರು.

ಪಟ್ಟಣದ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಶಿರಸಿ ಇವರ ಆಶ್ರಯದಲ್ಲಿ ನಡೆದ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿಯೂ ಪತ್ರಿಕಾ ಭವನದ ಅಗತ್ಯತೆಯಿದ್ದು, ಶಾಸಕರಾದ ಸತೀಶ ಸೈಲ್ ಅವರ ಗಮನಕ್ಕೆ ತರಲಾಗುವುದು ಎಂದರು.

ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ಅಂಕೋಲಾ ಎನ್ನುವುದು ಒಂದು ಜಾಗೃತ ನೆಲ. ದಿನಕರ ದೇಸಾಯಿಯವರ ಪತ್ರಿಕೆ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಸಾಕಷ್ಟು ಪತ್ರಿಕೆ ಹಾಗೂ ಪತ್ರಕರ್ತರು ಬೆಳೆದು ಬಂದಿದ್ದಾರೆ ಎಂದರು.

ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ ಮಾತನಾಡಿ, ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವವರು. ಆದರೆ ಅವರಿಗೆ ಸಾಕಷ್ಟು ಆರ್ಥಿಕ ತೊಂದರೆ ಮತ್ತು ಆರೋಗ್ಯ ಸಮಸ್ಯೆ ಉಂಟಾದಾಗ ಸರ್ಕಾರ ಅವರಿಗೆ ಪರಿಹಾರ ನೀಡಲು ಯೋಜನೆ ಜಾರಿಗೊಳಿಸಬೇಕು ಎಂದರು.

ಸಹಕಾರಿ ಧುರೀಣ ಜಾರ್ಜ್ ಫರ್ನಾಂಡೀಸ್ ಮಾತನಾಡಿ, ಮಾಧ್ಯಮದವರು ಎಂದರೆ ಕನ್ನಡಿ ಇದ್ದಂತೆ. ಅವರು ಕಣ್ಣಿಗೆ ಕಂಡ ಸತ್ಯ ಸಂಗತಿಗಳನ್ನು ಬರೆಯುತ್ತಾರೆ. ಇದರಿಂದ ಸಮಸ್ಯೆಯನ್ನು ಕೂಡ ಅವರು ಕೆಲವರಿಂದ ಅನುಭವಿಸಬೇಕಾಗುತ್ತದೆ. ಆದರೂ ಸಮಾಜ ಕಟ್ಟುವುದಕ್ಕಾಗಿ ತಮ್ಮ ಬದುಕನ್ನೇ ಮೀಸಲಿಡುತ್ತಿದ್ದಾರೆ. ಇಂತಹ ಪತ್ರಕರ್ತರಿಗೆ ಪತ್ರಿಕಾ ಭವನದ ಅಗತ್ಯತೆಯಿದೆ ಎಂದರು.

ಜಿಲ್ಲಾ ಪತ್ರಿಕಾ ಮಂಡಳಿ ಅಧ್ಯಕ್ಷ ಜಿ. ಸುಬ್ರಾಯ ಭಟ್ ಮಾತನಾಡಿ, ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಆಚರಿಸಬೇಕು ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಸವರಾಜ ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಸಾಕಷ್ಟು ಪ್ರಮಾಣದಲ್ಲಿ ಅನಾರೋಗ್ಯಗೊಳ್ಳುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ದೊರಕುವಂತೆ ಮಾಡಬೇಕಿದೆ ಎಂದರು.

ಪ್ರಾಚಾರ್ಯ ವಿನಾಯಕ ಹೆಗಡೆ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೂ ವಿವಿಧ ವಿಷಯಗಳ ಮಾಹಿತಿ ದೊರಕುತ್ತದೆ ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಸ್ವಾಗತಿಸಿದರು. ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಸುಭಾಶ ಕಾರೇಬೈಲ್ ನಿರ್ವಹಿಸಿದರು. ಪತ್ರಕರ್ತ ದಿನಕರ ನಾಯ್ಕ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ವಿದ್ಯಾದರ ಮೊರಬಾ ವಂದಿಸಿದರು. ವರದಿಗಾರರಾದ ನಾಗರಾಜ ಮಂಜಗುಣಿ, ಮಾರುತಿ ಹರಿಕಂತ್ರ, ಕೆ.ರಮೇಶ, ಅಕ್ಷಯ ನಾಯ್ಕ, ನಾಗರಾಜ ಜಾಂಬಳೇಕರ, ವಾಸುದೇವ ಗುನಗ, ಮೋಹನ ದುರ್ಗೇಕರ ಇತರರು ಸಹಕರಿಸಿದರು. ನಂತರ ಸಂಗೀತ ಗೀತ ಗಾಯನ ನಡೆಯಿತು.

ಪತ್ರಕರ್ತರಿಗೆ ಸನ್ಮಾನ

ಪತ್ರಕರ್ತರಾಗಿ ಈ ಹಿಂದೆ ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದ ರಾಮದಾಸ ಶೆಟ್ಟಿ, ಎಂ.ವಿ. ನಾಯಕ, ಮಂಜುನಾಥ ಜಾಂಬಳೇಕರ, ಪಾಂಡುರಂಗ ಕೇಣಿಕರ, ಮಂಜುನಾಥ ಇಟಗಿ ಅವರನ್ನು ಸನ್ಮಾನಿಸಲಾಯಿತು. ಹಾಗೇ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀನಿಧಿ ಗೌಡ ಪ್ರಥಮ, ಅನುಷ್ಯಾ ಆಲೂರು ದ್ವಿತೀಯ, ಸುಪ್ರಿಯಾ ನಾಯ್ಕ ತೃತೀಯ ಬಹುಮಾನ ಪಡೆದರು.