ಸಾರಾಂಶ
ಭಕ್ತಿ ಸೂತ್ರ, ಧರ್ಮಸೂತ್ರ ಹಾಗೂ ಬ್ರಹ್ಮಸೂತ್ರಗಳ ಮೂಲಕ ಭಗವಂತನ ನಾಮ ಸ್ಮರಣೆ ಸಾಧ್ಯ
ಕನ್ನಡಪ್ರಭ ವಾರ್ತೆ ಲೋಕಾಪುರ
ಯಾವ ಆಚರಣೆಯು ನಮ್ಮನ್ನು ಮನುಷ್ಯತ್ವದಿಂದ ಕೆಳಕ್ಕೆ ಬೀಳದಂತೆ ತಡೆದು, ಎಲ್ಲ ರೀತಿ ವಿನಾಶ ಮತ್ತು ಅಧೋಗತಿಯಿಂದ ರಕ್ಷಿಸಿ, ಸರ್ವಾಂಗೀಣ ಉನ್ನತಿಯತ್ತ ಸೆಳೆದುಯ್ಯುತ್ತದೆಯೋ ಅದೇ ಧರ್ಮ ಎಂದು ಬಾಗಲಕೋಟೆ ಬಿಂದುಮಾಧವಚಾರ್ಯ ನಾಗಸಂಪಗಿ ಹೇಳಿದರು.ಪಟ್ಟಣದ ಕಾಡರಕೊಪ್ಪ ರಸ್ತೆಯ ವೆಂಕಟೇಶ್ವರ ನಗರದ ಶಂಭುಲಿಂಗಾನಂದ ಆಶ್ರಮದಲ್ಲಿ 27ನೇ ಶಂಭುಲಿಂಗಾನಂದ ಪುಣ್ಯಾರಾಧನೆ ನಿಮಿತ್ತ ನಡೆದ ಸತ್ಸಂಗ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮನುಷ್ಯ ದೈನಂದಿನ ಕಾರ್ಯಗಳನ್ನು ಭಕ್ತಿ-ಶ್ರದ್ಧೆಗಳಿಂದ ಮಾಡಿ ಎಲ್ಲವನ್ನೂ ಸಂಪೂರ್ಣ ಶರಣಾಗತಿಯಿಂದ ಪರಮಾತ್ಮನಿಗೆ ಸಮರ್ಪಿಸಿದಾಗ ವ್ಯಕ್ತಿಯೂ ಸ್ವಾರ್ಥಮೂಲವಾದ ಕರ್ತೃತ್ವ ಭಾವದಿಂದ ಎಳ್ಳಷ್ಟೂ ಕಳಂಕಿತನಾಗಿ ಪರಮಾತ್ಮನ ಹಸ್ತದಲ್ಲಿ ಒಂದು ಉಪಕರಣವಾಗುತ್ತಾನೆ. ಅಂತಹ ವ್ಯಕ್ತಿಯನ್ನು ಕರ್ಮವಾಗಲಿ ಕರ್ಮಫಲವಾಗಲಿ ಬಂಧಿಸುವುದಿಲ್ಲಾ ಬಾಧಿಸುವುದಿಲ್ಲ ಎಂದರು.
ಲಕ್ಷಾನಟ್ಟಿ ಜ್ಞಾನಯೋಗಾಶ್ರಮದ ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಭಕ್ತಿ ಸೂತ್ರ, ಧರ್ಮಸೂತ್ರ ಹಾಗೂ ಬ್ರಹ್ಮಸೂತ್ರಗಳ ಮೂಲಕ ಭಗವಂತನ ನಾಮ ಸ್ಮರಣೆ ಸಾಧ್ಯ. ಬ್ರಹ್ಮ ಮಾನಸಪುತ್ರ ನಾರದ ರಚಿಸಿದ ಭಕ್ತಿಸೂತ್ರ ಪಠಣದ ಮೂಲಕ ನಾವು ಭಕ್ತಿ ಕಾಪಾಡಿಕೊಳ್ಳಲು ಸಾಧ್ಯ. ನಾರದರ ಕೆಲಸಗಳು, ಅಪಾರ, ಪ್ರಹ್ಲಾದ, ಧ್ರುವ ಮುಂತಾದವರಿಗೆ ಉಪದೇಶದ ಮುಖಾಂತರ ಸಾಧನೆ ಮಾರ್ಗ ತೋರಿಸಿಕೊಟ್ಟಿದ್ದಾರೆ ಎಂದರು.ದಾದನಟ್ಟಿ ಗ್ರಾಮದ ನಿಜಾನಂದ ಮಹಾಸ್ವಾಮೀಜಿ ಮಾತನಾಡಿ, ಭಗವಂತನ ನಾಮಸ್ಮರಣೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ದೊರಕುತ್ತದೆ. ಜೀವನದಲ್ಲಿ ಸರಿ ದಾರಿಯಲ್ಲೇ ನಡೆಯುವಂತೆ ನಮ್ಮನ್ನು ಪ್ರೇರೆಪಿಸುವ ಪರಂಪರಾಗತ ಆಚರಣೆಗೆ ಸನಾತನ ಧರ್ಮವೆಂದರು.
ಶಂಭುಲಿಂಗಾನಂದರ ಆರಾದನೆ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಶಿವಾನಂದ ಮಹಾಸ್ವಾಮೀಜಿ, ಬಸವರಾಜ ಮಹಾಸ್ವಾಮೀಜಿ, ಕೃಷ್ಣಾನಂದ ಶಾಸ್ತ್ರಿಜೀ ಸಮ್ಮುಖದಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದ ಸಂಚಾಲಕರಾಗಿ ಅಡವೇಶ ಶಾಸ್ತ್ರಿಗಳು ನಡೆಸಿಕೊಟ್ಟರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ಬಸನಗೌಡ ಪಾಟೀಲ, ಕೆ.ಎಸ್.ಪಾಟೀಲ, ಸದಾಶಿವ ಹಗ್ಗದ, ಬಸವರಾಜ ಉದಪುಡಿ, ನಾರಾಯಣ ಪಾಟೀಲ, ಮಹೇಶ ಮಳಲಿ, ತಮ್ಮಣ್ಣ ಬಡಕಲಿ, ಮಲ್ಲಪ್ಪ ಬೂಸರಡ್ಡಿ, ಎಚ್.ಬಿ.ಪಾಟೀಲ, ಎಸ್.ಆರ್. ಪಾಟೀಲ ಹಾಗೂ ಶಂಭುಲಿಂಗಾನಂದ ಮಠದ ಸರ್ವಸದಸ್ಯರು, ಮಠದ ಭಕ್ತರು ಹಾಗೂ ಸ್ಥಳೀಯರು ಇದ್ದರು.