ಎಲ್ಲರೂ ಕೆಟ್ಟ ಚಟಗಳಿಂದ ದೂರವಾಗೋಣ

| Published : Aug 04 2024, 01:23 AM IST

ಸಾರಾಂಶ

ಲಿಂ.ಮಹಾಂತಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ. ಎಲ್ಲರೂ ಕೆಟ್ಟ ಚಟಗಳಿಂದ ದೂರವಾಗೋಣ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಲಿಂ.ಮಹಾಂತಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ. ಎಲ್ಲರೂ ಕೆಟ್ಟ ಚಟಗಳಿಂದ ದೂರವಾಗೋಣ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ವ್ಯಸನಮುಕ್ತ ದಿನಾಚರಣೆ ಅಂಗವಾಗಿ ತಾಲೂಕಾಡಳಿತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ ಮಹಾಂತಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಜನರಲ್ಲಿ ತುಂಬಿಕೊಂಡಿದ್ದ ಎಲ್ಲ ರೀತಿಯ ಮೌಢ್ಯಗಳನ್ನು ಹೋಗಲಾಡಿಸುವಲ್ಲಿ ಶ್ರೀಗಳು ಮಾಡಿದ ಹೋರಾಟ ಅತ್ಯಂತ ದೊಡ್ಡದು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಗುರುಮಹಾಂತಶ್ರೀಗಳು ಮಾತನಾಡಿ, ಸರಕಾರದ ವತಿಯಿಂದ ರಾಜ್ಯದ ಎಲ್ಲೆಡೆ ವ್ಯಸನ ಮುಕ್ತ ದಿನ ಆಚರಿಸಲು ಆದೇಶ ಮಾಡಿ ಉತ್ತಮ ಕಾರ್ಯವನ್ನು ಮಾಡಲಾಗಿದೆ. ಅದಕ್ಕಾಗಿ ಸರಕಾರವನ್ನು ನಾವು ಅಭಿನಂದಿಸುತ್ತೇವೆ ಎಂದು ಹೇಳಿದರು.

ಇದೇ ಸಮಯದಲ್ಲಿ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಯ ಹಲವಾರು ವಿದ್ಯಾರ್ಥಿಗಳು ವಿವಿಧ ವೇಷಗಳನ್ನು ಧರಿಸಿಕೊಂಡು ಅವುಗಳನ್ನು ಪ್ರದರ್ಶಿಸಿದರು. ದುಶ್ಚಟಗಳನ್ನು ತಡೆಗಟ್ಟವಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ಚಿತ್ರ ಕಲೆ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಮಕ್ಕಳಿಗೆ ಶಾಸಕರು ಬಹುಮಾನಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಸತೀಶ ಕೂಡಲಗಿ, ಈಶ್ವರ ಗಡ್ಡಿ ,ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಮುರಳಿ ದೇಶಪಾಂಡೆ,

ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚೇತನಾ ಶ್ಯಾವಿ, ಪೌರಾಯುಕ್ತ ಶ್ರೀನಿವಾಸ ಜಾಧವ, ಬಸವಕೇಂದ್ರ ಅಧ್ಯಕ್ಷ ಶಿವಾನಂದ ರೂಳಿ, ಕನ್ನಡ ಸಾಹಿತ್ಯ ಪರಿಷತ್ತ ತಾಲೂಕಾಧ್ಯಕ್ಷ ಮಹಾದೇವ ಕಂಬಾಗಿ, ಮಾಜಿ ಅಧ್ಯಕ್ಷ ಸಂಗಣ್ಣ ಗದ್ದಿ, ಅಕ್ಕನ ಬಳಗದ ಅಧ್ಯಕ್ಷೆ ಸುವರ್ಣ ಗೊಂಗಡಶೆಟ್ಟಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.