ಬೀದಿ ವ್ಯಾಪಾರಿಗಳ ಮೇಲೆ ಮುಂದುವರಿದ ಟೈಗರ್ ಕಾರ್ಯಾಚರಣೆ

| Published : Aug 04 2024, 01:23 AM IST

ಸಾರಾಂಶ

ಹಣ್ಣು, ತರಕಾರಿ, ಬಟ್ಟೆ ಮೊದಲಾದ ಸುಮಾರು 25ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರ ವಿರುದ್ಧದ ಟೈಗರ್‌ ಕಾರ್ಯಾಚರಣೆ ಗುರುವಾರವೂ ಮುಂದುವರಿದಿದ್ದು, ಸ್ಟೇಟ್‌ ಬ್ಯಾಂಕ್‌ ಪರಿಸರದಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲಾಗಿದೆ.

ಈ ವೇಳೆ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ ವತಿಯಿಂದ ನೀಡಲಾದ ಗುರುತಿನ ಚೀಟಿ ಹಿಡಿದು ನೂರಕ್ಕಿಂತಲೂ ಅಧಿಕ ವ್ಯಾಪಾರಿಗಳು ಟೈಗರ್‌ ಕಾರ್ಯಾಚರಣೆಗೆ ಪ್ರತಿರೋಧ ವ್ಯಕ್ತಪಡಿಸಿದರು. ಪಾಲಿಕೆಯೇ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಇದೀಗ ಏಕಾಏಕಿ ಅಂಗಡಿಗಳನ್ನು ತೆರವು ಮಾಡುವುದು ಸರಿಯಲ್ಲ, ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಬಾರದು ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಪ್ರತಿಭಟಿಸಿದರು. ಈ ಸಂದರ್ಭ ಪಾಲಿಕೆ ವಲಯ ಆಯುಕ್ತೆ ರೇಖಾ ಶೆಟ್ಟಿ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್‌ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಪೊಲೀಸ್‌ ಬಲ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದು ಟೈಗರ್‌ ಕಾರ್ಯಾಚರಣೆ ಮುಂದುವರಿಯಿತು.

ಹಣ್ಣು, ತರಕಾರಿ, ಬಟ್ಟೆ ಮೊದಲಾದ ಸುಮಾರು 25ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಲಾಯಿತು. ಪ್ರತಿಭಟನಾಕಾರರು ಪಾಲಿಕೆ ಆಡಳಿತದ ವಿರುದ್ಧ ಧಿಕ್ಕಾರ ಕೂಗಿ ಮೇಯರ್‌, ಪಾಲಿಕೆ ಆಯುಕ್ತರ ನಡೆಯನ್ನು ಖಂಡಿಸಿದರು. ಬಳಿಕ ಪೊಲೀಸ್‌ ಠಾಣೆಯಲ್ಲಿ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಾಚರಣೆ ವಿರುದ್ಧ 7ರಂದು ಪ್ರತಿಭಟನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಕಳೆದ ಆರು ದಿನಗಳಿಂದ ನಿರಂತರವಾಗಿ ಟೈಗರ್‌ ಕಾರ್ಯಾಚರಣೆ ನಡೆಸಿ ಬೀದಿಬದಿ ವ್ಯಾಪಾರಸ್ಥರ ಬದುಕನ್ನೇ ಸರ್ವನಾಶ ಮಾಡುತ್ತಿದೆ. ನಗರ ಪಾಲಿಕೆ ಅಧಿಕಾರಿಗಳು ಯಾರಿಗೂ ನೋಟಿಸ್‌ ನೀಡದೆ ಅಧಿಕೃತ ಬೀದಿಬದಿ ವ್ಯಾಪಾರಸ್ಥರ ಸೊತ್ತುಗಳನ್ನೂ ಧ್ವಂಸ ಮಾಡಿ ಸರಕು ನಾಶಮಾಡಿ ಅವರನ್ನು ನರಕಕ್ಕೆ ತಳ್ಳುತ್ತಿದೆ. ಇವೆಲ್ಲದರ ವಿರುದ್ಧ 7ರಂದು ಬೆಳಗ್ಗೆ 10 ಗಂಟೆಗೆ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ನಗರದ ಪಿವಿಎಸ್‌ ವೃತ್ತದಿಂದ ಲಾಲ್‌ಬಾಗ್‌ನ ಪಾಲಿಕೆ ಕಚೇರಿ ವರೆಗೆ ಸಾವಿರಾರು ಮಂದಿ ಬೃಹತ್‌ ಪ್ರತಿಙಟನಾ ಮೆರವಣಿಗೆ ನಡೆಸಿ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಿದೆ ಎಂದು ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್‌ ಹೇಳಿದ್ದಾರೆ.ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021ರ 60 ವಾರ್ಡ್‌ಗಳ ಸಮೀಕ್ಷೆ ಪ್ರಕಾರ 1,053 ಮಂದಿ ಬೀದಿಬದಿ ವ್ಯಾಪಾರಸ್ಥರಿದ್ದಾರೆ. ಅದರಲ್ಲಿ 667 ಮಂದಿಗೆಯ ಪಟ್ಟಿಗೆ ಗುರುತಿನ ಪತ್ರ ನೀಡಲು ಕ್ರಮ ಕೈಗೊಳ್ಳಲಾಗಿತ್ತು. 2023ರಲ್ಲಿ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದಾಗ ರಾಜ್ಯೋತ್ಸವ ವೇಳೆ 10 ಮಂದಿಗೆ ಸಾಂಕೇತಿಕವಾಗಿ ಉಸ್ತುವಾರಿ ಸಚಿವರು ಗುರುತಿನ ಚೀಟಿ ವಿತರಿಸಲಾಗಿತ್ತು. ಬಳಿಕ ಗುರುತಿನ ಚೀಟಿ ವಿತರಿಸದೆ ಕಾನೂನುಬದ್ಧವಾಗಿ ವ್ಯಾಪಾರ ಮಾಡುತ್ತಿರುವ ಬೀದಿಬದಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದರು.ಪಾಲಿಕೆ ವಿಪಕ್ಷ ಕಾಂಗ್ರೆಸ್‌ ಕೂಡ ಈ ವಿಚಾರದಲ್ಲಿ ಮೌನ ವಹಿಸಿದ್ದು, ಪರೋಕ್ಷವಾಗಿ ಬೀದಿಬದಿ ವ್ಯಾಪಾರಸ್ಥರ ವಿರುದ್ಧದ ಕಾರ್ಯಾಚರಣೆಗೆ ಕೈಜೋಡಿಸಿದೆ. ಮುಂದಿನ ಚುನಾವಣೆಯಲ್ಲಿ ಅದಕ್ಕೆ ತಕ್ಕ ಪಾಠ ಕಲಿಸುವುದಾಗಿ ಅವರು ಹೇಳಿದರು.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಬಜಾಲ್‌, ಸಂಘದ ಅಧ್ಯಕ್ಷತ್ ಮಹಮ್ಮದ್‌ ಮುಸ್ತಾಫ, ಪ್ರಧಾನ ಕಾರ್ಯದರ್ಶಿ ಹರೀಶ್‌ ಪೂಜಾರಿ, ಸದಸ್ಯರಾದ ಆಸಿಫ್‌ ಬಾವ, ಶ್ರೀಧರ ಭಂಡಾರಿ, ಅಬ್ದುಲ್‌ ಬಶೀರ್‌, ಅಬ್ದುಲ್‌ ರಹಮಾನ್‌, ಹಸನ್‌ ಕುದ್ರೋಳಿ, ಮೇರಿ ಡಿಸೋಜಾ, ಮೇಬಲ್‌ ಡಿಸೋಜಾ, ಗಜಾನನ, ರಿಯಾಜ್‌, ಶೌಕತ್‌ ಆಲಿ, ಹಂಝ ಮತ್ತಿತರರು ಇದ್ದರು.