ಪೋಲಿಯೋ ಅತ್ಯಂತ ವೇಗವಾಗಿ ಹರಡುವ ರೋಗವಾಗಿದ್ದು, ಇದರ ಬಗ್ಗೆ ನಿಷ್ಕಾಳಜಿ ಬೇಡ. ಮಗುವಿಗೆ ಹಾಕುವ ಎರಡೂ ಹನಿಗಳು ಮಗುವನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸಲಿವೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಪೋಲಿಯೋ ಅತ್ಯಂತ ವೇಗವಾಗಿ ಹರಡುವ ರೋಗವಾಗಿದ್ದು, ಇದರ ಬಗ್ಗೆ ನಿಷ್ಕಾಳಜಿ ಬೇಡ. ಮಗುವಿಗೆ ಹಾಕುವ ಎರಡೂ ಹನಿಗಳು ಮಗುವನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸಲಿವೆ. ಅದಕ್ಕಾಗಿ ಪ್ರತಿಯೊಬ್ಬರೂ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆಯನ್ನು ಹಾಕಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದರು.ಭಾನುವಾರ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಹಳಿಯಾಳ-ದಾಂಡೇಲಿ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳ ಅಂಗವಿಕಲತೆ ಹಾಗೂ ಸಾವು-ನೋವನ್ನು ತಪ್ಪಿಸುವ ಮೂಲ ಗುರಿ ಹೊಂದಿರುವ ಪಲ್ಸ್ ಪೋಲಿಯೋ ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಎಲ್ಲರೂ ಪಕ್ಷಭೇದ ಮರೆತು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದರ ಯಶಸ್ಸಿಗಾಗಿ ಶ್ರಮಿಸಬೇಕೆಂದರು. ಪೋಲಿಯೋ ಮುಕ್ತ ಭಾರತ ಅಭಿಯಾನಕ್ಕೆ ಸರ್ವರೂ ಕೈಜೋಡಿಸಬೇಕು. ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಅಕ್ಕಪಕ್ಕದಲ್ಲಿ ಸಣ್ಣ ಮಕ್ಕಳಿದ್ದಲ್ಲಿ ಡಿ. 24ರೊಳಗಾಗಿ ತಪ್ಪದೇ ಲಸಿಕಾ ಕೇಂದ್ರಕ್ಕೆ ತೆರಳಿ ಪೋಲಿಯೋ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ನಾಯ್ಕ ಮಾತನಾಡಿ, ಹಳಿಯಾಳ ಸೇರಿದಂತೆ ದಾಂಡೇಲಿ ತಾಲೂಕಿನಲ್ಲಿ ಲಸಿಕೆ ವಿತರಣೆಗೆ 95 ಬೂತ್ ತೆರಯಲಾಗಿದ್ದು, ಹಳಿಯಾಳ ಮತ್ತು ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಸಂಚಾರಿ ಕೇಂದ್ರಗಳ ಮೂಲಕ ಲಸಿಕೆ ನೀಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ನಾಲ್ಕು ದಿನ ಹಾಗೂ ಗ್ರಾಮೀಣ ಭಾಗದಲ್ಲಿ ಮೂರು ದಿನಗಳವರೆಗೆ ಈ ಲಸಿಕಾ ಅಭಿಯಾನವು ನಡೆಯಲಿದೆ. ಈ ಅಭಿಯಾನದ ಯಶಸ್ಸಿಗಾಗಿ 342 ಸಿಬ್ವಂದಿಗಳ 154 ತಂಡ ರಚನೆ ಮಾಡಲಾಗಿದ್ದು, ಮೊದಲ ದಿನ 15005 ಮಕ್ಕಳಿಗೆ ಪೋಲಿಯೋ ಹಾಕುವ ಗುರಿಯನ್ನು ಹೊಂದಿದ್ದೆವೆ ಎಂದರು.
ತಾಲೂಕಾ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಅರುಣ ಹಲಗತ್ತಿ, ಪ್ರಸೂತಿ ತಜ್ಞ ಡಾ. ದೀಪಕ್ ಭಟ್ ಹಾಗೂ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಮತ್ತು ಇತರರು ಇದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮುರಿ ಕಾರ್ಯಕ್ರಮ ನಿರ್ವಹಿಸಿದರು.