ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಬರ ಪರಿಸ್ಥಿತಿಯಲ್ಲಿ ಮಳೆ-ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿರುವ ನಾಡಿನ ಅನ್ನದಾತರು ಹಾಗೂ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ವಿರುದ್ಧ ಗಟ್ಟಿ ಧ್ವನಿ ಎತ್ತಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರು ಸಂಘನಾತ್ಮಕವಾಗಿ ಒಗ್ಗೂಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ ನಾಯಕ್ ಕಾರ್ಯಕರ್ತರಿಗೆ ಕರೆ ನೀಡಿದರು.ಪಟ್ಟಣದ ಸಮೀಪದ ಜೈನಾಪೂರ ಗ್ರಾಮದ ಪವಾಡ ಬಸವೇಶ್ವರ ಶ್ರೀಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಯ ಕರ್ನಾಟಕ ಸಂಘಟನೆ ಬಾಗೇವಾಡಿ ತಾಲೂಕು ಘಟಕದ ಸಂಘಟನಾತ್ಮಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ದಿ.ಮುತ್ತಪ್ಪ ರೈ ಅಣ್ಣರವರು ತೋರಿಸಿಕೊಟ್ಟ ಹಾದಿಯಲ್ಲಿ ಸಾಗಿ ಇಂದು ರಾಜ್ಯದಲ್ಲಿ ನೆಲ-ಜಲ, ನಾಡು-ನುಡಿ ಹಾಗೂ ಜನಪರ ನೂರಾರು ಹೋರಾಟಗಳ ಮೂಲಕವೇ ಕರುನಾಡಿನ ಜನಮಾನಸದಲ್ಲಿ ಮುಂಚೂಣಿ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಬಸವನಬಾಗೇವಾಡಿ ತಾಲೂಕಿನಲ್ಲಿ ನಮ್ಮ ಸಂಘಟನೆ ಕಾರ್ಯಕರ್ತರು ಹೋರಾಟ, ಸಭೆಗಳಲ್ಲಿ ಹೆಚ್ಚು ಸಕ್ರಿಯರಾಗಿ ಸಂಘಟನೆ ಇನ್ನಷ್ಟು ಬಲಿಷ್ಠಗೊಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಯ ಕರ್ನಾಟಕ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ್ ಕಲ್ಲೂರ ಸಭೆಯ ನೇತೃತ್ವ ವಹಿಸಿ ಮಾತನಾಡಿ, ನಾಡಿನಲ್ಲಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಹೋರಾಟ ನಡೆಸುವ ಕೆಲವೇ ಕೆಲವು ಸಂಘಟನೆಗಳಲ್ಲಿ ಜಯ ಕರ್ನಾಟಕ ಅಗ್ರಣೀಯ ಸಂಘಟನೆಯಾಗಿದೆ. ಬಾಗೇವಾಡಿಯ ಪ್ರತಿ ಗ್ರಾಮಗಳಲ್ಲಿ ಸಂಘಟನೆ ಗ್ರಾಮ ಘಟಕಗಳನ್ನು ಸ್ಥಾಪಿಸಿ ಗ್ರಾಮೀಣ ಜನರ ಸಮಸ್ಯೆಗಳು, ಅನ್ಯಾಯಗಳ ವಿರುದ್ದ ಹೋರಾಟಕ್ಕೆ ಶಕ್ತಿ ತುಂಬುವ ಕಾರ್ಯವಾಗಬೇಕು ಎಂದರು.ಜಯ ಕರ್ನಾಟಕ ಸಂಘಟನೆ ತಾಲೂಕು ಮುಖಂಡ ಜಗದೀಶ ಉಳ್ಳಾಗಡ್ಡಿ ಮಾತನಾಡಿ, ಸಂಘಟನೆಯ ಜಿಲ್ಲಾಧ್ಯಕ್ಷರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳ ಸಲಹೆ, ಸೂಚನೆಗಳಂತೆ ತಾಲೂಕಿನಲ್ಲಿ ಸಂಘಟನಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಒಗ್ಗೂಡಿ ಶ್ರಮಿಸುತ್ತೇವೆ ಎಂದರು.
ಈ ವೇಳೆ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯದರ್ಶಿ ನವೀನಕುಮಾರ ನೇಮಶೆಟ್ಟಿ, ಜಿಲ್ಲಾ ಮುಖಂಡರಾದ ನೀಲಕಂಠ ಚವ್ಹಾಣ, ಅನಿಲ ಕೊಂಗಿ ಸೇರಿದಂತೆ ಬಸವನ ಬಾಗೇವಾಡಿ ತಾಲ್ಲೂಕು ಹಾಗೂ ವಿವಿಧ ಗ್ರಾಮ ಘಟಕಗಳ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.