ವಿಶ್ವಕರ್ಮರ ದೇಗುಲ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಭರವಸೆ

| Published : Feb 15 2024, 01:31 AM IST

ವಿಶ್ವಕರ್ಮರ ದೇಗುಲ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಆಡಳಿತ ಮಂಡಳಿಯಲ್ಲಿರುವ ವಿಶ್ವಕರ್ಮ ಸಮಾಜದ 2 ಕುಲದೇವರ ದೇಗುಲಗಳನ್ನು ಸರ್ಕಾರಕ್ಕೆ ನೀಡಿದರೆ ಪ್ರಾಧಿಕಾರ ರಚಿಸಿ ಅಭಿವೃದ್ಧಿಗೊಳಿಸಲು ಪರಿಶೀಲಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಪ್ರಸ್ತಾಪ- ಖಾಸಗಿ ವಶದಲ್ಲಿರುವ 2 ದೇಗುಲ ಸರ್ಕಾರಕ್ಕೆ ನೀಡಿದರೆ ಕ್ರಮ । ಕೆ.ಪಿ.ನಂಜುಂಡಿ ಮನವಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆಕನ್ನಡಪ್ರಭ ವಾರ್ತೆ ವಿಧಾನ ಪರಿಷತ್‌

ವಿಶ್ವಕರ್ಮ ಸಮಾಜದ ನಾಲ್ಕು ಕುಲದೇವರ ದೇವಸ್ಥಾನಗಳ ಪೈಕಿ ಎರಡು ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ಅಡಿ ಅಭಿವೃದ್ಧಿಗೊಳಿಸಲಾಗುವುದು, ಉಳಿದ ಎರಡು ದೇವಸ್ಥಾನಗಳು ಖಾಸಗಿ ಆಡಳಿತ ಮಂಡಳಿಯಲ್ಲಿ ಇರುವುದರಿಂದ ಅವುಗಳನ್ನು ಸರ್ಕಾರಕ್ಕೆ ನೀಡಿದರೆ ಪ್ರಾಧಿಕಾರ ರಚಿಸಿ ಅಭಿವೃದ್ಧಿಗೊಳಿಸಲು ಪರಿಶೀಲಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.ಬಿಜೆಪಿಯ ಕೆ.ಪಿ. ನಂಜುಂಡಿ ವಿಶ್ವಕರ್ಮ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಸುಮಾರು 36 ಸಾವಿರ ದೇವಸ್ಥಾನಗಳು ಮುಜರಾಯಿ ಇಲಾಖೆ ಅಡಿ ಬರುತ್ತವೆ, ಹಾಗಾಗಿ ಯಾವುದೇ ದೇವಸ್ಥಾನಕ್ಕೆ ಬರುವ ಭಕ್ತರ ಜನಸಂಖ್ಯೆ ಪರಿಗಣಿಸಿ ಆದ್ಯತೆ ಮೇಲೆ ಅಭಿವೃದ್ಧಿ ಮಾಡಲಾಗುವುದು. ಸದ್ಯ ಹೆಚ್ಚು ಭಕ್ತರು ಬರುವ ಹುಲಿಗೆಮ್ಮ ದೇವಸ್ಥಾನ, ಸವದತ್ತಿ ಯಲ್ಲಮ್ಮ, ಘಾಟಿ ಸುಬ್ರಹ್ಮಣ್ಯ ದೇವಸ್ಥಾನಗಳ ಅಭಿವೃದ್ಧಿಗೆ ಪ್ರಾಧಿಕಾರ ಮಾಡಲು ಉದ್ದೇಶಿಸಲಾಗಿದೆ.ಪ್ರಾಧಿಕಾರ ರಚನೆ ಮಾಡಲು ಕೇವಲ ದೇವಸ್ಥಾನ ಇದ್ದರೆ ಮಾತ್ರ ಸಾಕಾಗುವುದಿಲ್ಲ. ಸಾಕಷ್ಟು ಭೂಮಿ, ಅತಿಥಿ ಗೃಹ ಇತ್ಯಾದಿ ಸೌಲಭ್ಯ ಇರಬೇಕಾಗುತ್ತದೆ ಎಂದರು.

ನಂಜುಂಡಿ ಅವರು ಪ್ರಸ್ತಾಪಿಸಿರುವ ನಾಲ್ಕು ದೇವಸ್ಥಾನಗಳ ಪೈಕಿ ಸಿರಸಂಗಿ ದೇವಸ್ಥಾನ ಸಿ ಗ್ರೇಡ್‌ನಲ್ಲಿ ಬರುತ್ತದೆ, ತಿಂತಣಿ ಮೌನೇಶ್ವರ ದೇವಸ್ಥಾನ ಎ ಗ್ರೇಡ್‌ನಲ್ಲಿ ಬರುತ್ತದೆ. ಈ ದೇವಸ್ಥಾನಗಳಿಗೆ ಮುಜರಾಯಿ ಇಲಾಖೆ ಅಡಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು, ಆದರೆ ಚಾಮರಾಜನಗರ ಜಿಲ್ಲೆಯ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ದೇವಾಲಯ ಹಾಗೂ ಚಿಕ್ಕಬಳ್ಳಾಪುರದ ಕಾಲಜ್ಞಾನಿ ವೀರಬ್ರಮ್ಮೇಂದ್ರ ಸ್ವಾಮಿ ದೇವಾಲಯ (ಪಾಪಾಗ್ನಿ ಮಠ) ದೇವಸ್ಥಾನಗಳನ್ನು ಖಾಸಗಿಯವರ ನಿರ್ವಹಣೆಯಲ್ಲಿವೆ. ಈ ಎರಡು ದೇವಾಲಯಗಳನ್ನು ಸರ್ಕಾರ ಪಡೆಯಲು ಮುಂದಾದರೆ ಬೇರೆ ಸ್ವರೂಪ ಪಡೆಯುತ್ತದೆ, ಹಾಗಾಗಿ ಸದಸ್ಯರೇ ಈ ಬಗ್ಗೆ ಅವರ ಜೊತೆ ಮಾತನಾಡಿ ಒಪ್ಪಿಸಿದರೆ ಪ್ರಾಧಿಕಾರ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಮಾಸ್ಟರ್‌ ಪ್ಲಾನ್‌: ಮುಜರಾಯಿ ಇಲಾಖೆ ಅಡಿ ಬರುವ ದೇವಸ್ಥಾನಗಳಲ್ಲಿ ನಿತ್ಯ ಅತ್ಯಂತ ಹೆಚ್ಚಿನ ಭಕ್ತರು ಬರುವ ದೇವಸ್ಥಾನಗಳನ್ನು ಆದ್ಯತೆ ಮೇಲೆ ಹಂತ ಹಂತವಾಗಿ ಅಭಿವೃದ್ಧಿ ಮಾಡಿ, ಮೂಲಭೂತ ಸೌಲಭ್ಯ ಕಲ್ಪಿಸಲು ಮಾಸ್ಟರ್‌ ಪ್ಲಾನ್‌ ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕೆ.ಪಿ. ನಂಜುಂಡಿ ವಿಶ್ವಕರ್ಮ ಅವರು, ಸಿರಸಂಗಿ ಹಾಗೂ ತಿಂತಣಿ ದೇವಸ್ಥಾನಗಳ ಅತ್ಯಂತ ಪುರಾತನವಾಗಿದ್ದು, ವಿಶ್ವಕರ್ಮ ಸಮುದಾಯ ಸೇರಿದಂತೆ ಎಲ್ಲ ಸಮುದಾಯದವರು ಅಲ್ಲಿಗೆ ಬರುತ್ತಾರೆ, ಜಾತ್ರೆ, ಉತ್ಸವ ವೇಳೆಯಲ್ಲಿ ಲಕ್ಷಾಂತರ ಜನರು ಬರುತ್ತಾರೆ. ಆದರೆ ಅಲ್ಲಿ ಸರಿಯಾಗಿ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲ, ಅಗತ್ಯದಷ್ಟು ಕುಡಿಯುವ ನೀರು, ಶೌಚಾಲಯ ಸೌಲಭ್ಯ ಇಲ್ಲ. ಆದ್ದರಿಂದ ಈ ಎರಡು ದೇವಸ್ಥಾನ ಸೇರಿದಂತೆ ಚಿಕ್ಕಲ್ಲೂರು ಹಾಗ ಪಾಪಾಗ್ನಿ ಮಠಗಳನ್ನು ಒಟ್ಟುಗೂಡಿಸಿ ಪ್ರಾಧಿಕಾರ ರಚಿಸಬೇಕೆಂದು ಆಗ್ರಹಿಸಿದರು.