ದಾಬಸ್‍ಪೇಟೆ: ನೀರು ಅಮೂಲ್ಯ ಜೀವದ್ರವ್ಯ, ಅದರ ಸಂರಕ್ಷಣೆ ಮತ್ತು ಮಿತ ಬಳಕೆ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೇಲ್ವಿಚಾರಕಿ ಸುಜಾತ ಹೇಳಿದರು.
ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ತಾಲೂಕು ಅರೆಕಾಲಿಕ ಸ್ವಯಂ ಯುವಕರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನೀರನ್ನು ಮಿತವಾಗಿ ಬಳಸದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿಯೇ ಯುದ್ಧ ಮಾಡುವಂತಹ ಪರಿಸ್ಥಿತಿ ಎದುರಾಗಲಿದೆ. ನೀರಿನ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವುದು ಅವಶ್ಯಕ. ನೀರನ್ನು ಪೋಲು ಮಾಡಬಾರದು ಎಂದರು.
ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ವೇದಾವತಿ ಮಾತನಾಡಿ, ಭೂಮಿಯಲ್ಲಿ ಶೇ.71ರಷ್ಟು ಪ್ರಮಾಣದ ನೀರಿದ್ದರೂ, 2.5ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯ. ಮಾನವ ವೈಜ್ಞಾನಿಕವಾಗಿ ಚಂದ್ರಗ್ರಹ, ಮಂಗಳ ಗ್ರಹಕ್ಕೆ ಸಲೀಸಾಗಿ ಹೋಗಿ ಬರುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಆದರೆ ನೀರನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಇದು ದೇವರು ಕೊಟ್ಟ ಕಾಣಿಕೆ. ಈ ಅಮೂಲ್ಯ ದ್ರವ್ಯ ಕಾಪಾಡುವುದು ಎಲ್ಲರ ಹೊಣೆ ಎಂದರು. ಸ್ವಯಂಸೇವಕಿ ಮಂಜುಳ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆಲ್ಲಾ ನೀರಿನ ಬಳಕೆ ಹೆಚ್ಚಾಗುತ್ತಿದೆ. ನೀರನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ಉಪಸ್ಥಿತರಿದ್ದರು.ಪೋಟೋ 4 : ದಾಬಸ್‍ಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಸುಜಾತ ಮಾತನಾಡಿದರು.