ರಾಮನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಬಾಲಕೃಷ್ಣರ ವಿರುದ್ಧ ಬಾಯಿಗೆ ಬಂದಂಗೆ ಟೀಕಿಸಿದರೆ ಸಹಿಸುವುದಿಲ್ಲ. ನಮ್ಮಲ್ಲಿ ಕಾರ್ಯಕರ್ತರ ಪಡೆಯೇ ಇದೆ. ನಿಮಗೆ ತಾಕತ್ತಿದ್ದರೆ ಯುದ್ಧ ಸಾರಿ ನೀವಾ ನಾವಾ ನೋಡೋಣ ಎಂದು ಮಾಜಿ ಶಾಸಕ ಎ.ಮಂಜುನಾಥ್ ಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಸವಾಲು ಹಾಕಿದರು

ರಾಮನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಬಾಲಕೃಷ್ಣರ ವಿರುದ್ಧ ಬಾಯಿಗೆ ಬಂದಂಗೆ ಟೀಕಿಸಿದರೆ ಸಹಿಸುವುದಿಲ್ಲ. ನಮ್ಮಲ್ಲಿ ಕಾರ್ಯಕರ್ತರ ಪಡೆಯೇ ಇದೆ. ನಿಮಗೆ ತಾಕತ್ತಿದ್ದರೆ ಯುದ್ಧ ಸಾರಿ ನೀವಾ ನಾವಾ ನೋಡೋಣ ಎಂದು ಮಾಜಿ ಶಾಸಕ ಎ.ಮಂಜುನಾಥ್ ಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮೇಲೆ ನಮ್ಮ ನಾಯಕರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿದರೆ ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ ನಾವೂ ಪ್ರತ್ಯುತ್ತರ ನೀಡುತ್ತೇವೆ. ಶಾಸಕ ಪ್ರದೀಪ್ ಈಶ್ವರ್‌ಗೆ ಆದ ಗತಿ ಮಾಡಬೇಕಾಗುತ್ತದೆ ಎಂದು ಮಂಜುನಾಥ್ ಹೇಳಿದ್ದಾರೆ. ಸೋತಾಗಲೆ ಬಾಲಕೃಷ್ಣರನ್ನು ನಿಮ್ಮಿಂದ ಏನು ಮಾಡಲಾಗಲಿಲ್ಲ. ಇನ್ನು ಸಚಿವರಾದ ಮೇಲೆ ಏನು ಮಾಡುತ್ತೀರ. ಬೇರೊಬ್ಬರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ. ಸಾರ್ವಜನಿಕ ಜೀವನದಲ್ಲಿರುವ ಎಲ್ಲ ರಾಜಕಾರಣಿಗಳು ಗಾಜಿನ ಮನೆಯಲ್ಲಿಯೇ ಇದ್ದಾರೆ. ಕಲ್ಲು ನಿಮ್ಮ ಮನೆಗೂ ಬೀಳುತ್ತದೆ ಎಂಬ ಎಚ್ಚರಿಕೆ ಇರಲಿ ಎಂದು ತಿರುಗೇಟು ನೀಡಿದರು.

ಬಿಡದಿ ಹೋಬಳಿ ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬರುವುದಾದರೆ ಬಿಜಿಎಸ್ ವೃತ್ತದಲ್ಲಿ ವೇದಿಕೆ ನಿರ್ಮಿಸುತ್ತೇವೆ. ನೀವು 5 ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ತನ್ನಿ. ನಾವು ಬಾಲಕೃಷ್ಣ ಮೂರುವರೆ ವರ್ಷಗಳಲ್ಲಿ ಏನು ಮಾಡಿದ್ದಾರೆ, ಮುಂದೇನು ಮಾಡುತ್ತಾರೆ ಎಂಬ ಚಿತ್ರಣ ಸಾರ್ವಜನಿಕರ ಮುಂದಿಟ್ಟು ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಅಷ್ಟಕ್ಕೂ ಬಿಡದಿ ಹೋಬಳಿಗೆ ನಿಮ್ಮ ಕೊಡುಗೆ ಏನೆಂದು ಹೇಳಿ. ಬಿಡದಿ ಬಿಜಿಎಸ್ ವೃತ್ತದಿಂದ ನಿಮ್ಮ ಮನೆವರೆಗೆ ರಸ್ತೆ ಮಾಡಿಸಲು ನಿಮ್ಮಿಂದ ಆಗಲಿಲ್ಲ. ಈಗ ಬಿಡದಿ ಹೋಬಳಿಯಲ್ಲಿ ಎಲ್ಲ ರಸ್ತೆಗಳು ಅಭಿವೃದ್ದಿ ಹೊಂದುತ್ತಿವೆ. ಒಂದೂವರೆ ತಿಂಗಳಲ್ಲಿ ಬಿಡದಿ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಲಿದೆ. ಈ ಕೆಲಸಗಳನ್ನು ನೀವೇಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಆತ್ಮಸಾಕ್ಷಿ ಇದ್ರೆ ಮೋಸ ಮಾಡಿರೋದ್ನ ಒಪ್ಕೊಳ್ಳಿ :

ಬಾಲಕೃಷ್ಣ ಅವರ ತಾತ, ತಂದೆ ರಾಜಕೀಯ ಹಿನ್ನಲೆಯಿಂದ ಬಂದವರು. ಹೀಗಾಗಿ ಮಹಾನಾಡು ಕಟ್ಟೆಮನೆ ಅಂತ ಹೆಸರು ಇಟ್ಟಿಕೊಂಡಿದ್ದಾರೆ. ಅದನ್ನು ಟೀಕೆ ಮಾಡುವ ನೀವು ನಿಮ್ಮ ಕುಟುಂಬದ ಹೆಸರು ಇಟ್ಟುಕೊಳ್ಳಿ ಬೇಡವೆಂದು ಹೇಳಿದವರು ಯಾರು? ಬಾಲಕೃಷ್ಣ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದರು. ನೀವೇನು ಮೈಸೂರು ಅರಮನೆಯಲ್ಲಿದ್ರ? ಬಿಡದಿಯಲ್ಲಿ ಕಟ್ಟಿರುವ ಮನೆ ಹಾಗೆ ಬಂತ ಎಂದು ಲೇವಡಿ ಮಾಡಿದರು.

ಬಿಡದಿ ಠಾಣೆಯಲ್ಲಿ ನಿಮ್ಮ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕಂಚುಗಾರನಹಳ್ಳಿಯಲ್ಲಿ ದಲಿತರ ಜಮೀನು ಕಬಳಿಸಿ ಮಾರಾಟ ಮಾಡಿದರೆ, ಅರಳಾಳುಸಂದ್ರದಲ್ಲಿ ಪತ್ನಿ ಹೆಸರಿಗೆ ಭೂಮಿ ರಿಜಿಸ್ಟರ್ ಮಾಡಿಸಿದ್ದೀರಿ. ರೆಡ್ಡಿ ಆದಿಯಾಗಿ ನಿಮ್ಮನ್ನು ನಂಬಿಕೊಂಡು ರಿಯಲ್ ಎಸ್ಟೇಟ್ ಮಾಡಲು ಬಂದವರಿಗೆ ಮೋಸ ಮಾಡಿದ್ದೀರಿ. ನೊಂದ ಮಹಿಳೆ ನಿಮ್ಮ ಮನೆ ಮುಂದೆ ಮಣ್ಣು ಹಿಡಿದು ಶಾಪ ಹಾಕಿದ್ದಾಳೆ. ನಿಮಗೆ ಆತ್ಮಸಾಕ್ಷಿ ಎಂಬುದಿದ್ದರೆ ನೀವು ಮಾಡಿರುವ ಮೋಸ ಒಪ್ಪಿಕೊಳ್ಳಿ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಶೇಖರ್,

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಗಂಗಾಧರ್, ಬಿಡದಿ ಕೂಟಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೇಹಳ್ಳಿ ಗಂಗಾಧರ್, ಬಿಡದಿ ಸೊಸೖಟಿ ಅಧ್ಯಕ್ಷ ಜೀವನ್ ಬಾಬು, ತಾಪಂ ಮಾಜಿ ಸದಸ್ಯ ಹೊಸೂರು ರಾಜಣ್ಣ,

ಮುಖಂಡರಾದ ಬೆಟ್ಟಸ್ವಾಮಿ, ಅಬ್ಬನಕುಪ್ಪೆ ಆನಂದ್, ಬೈರಮಂಗಲ ಸಿದ್ದರಾಜು, ನರಸಿಂಹಯ್ಯ ಮತ್ತಿತರರಿದ್ದರು.

ಕೋಟ್ ...............

ಮಾಜಿ ಶಾಸಕ ಎ.ಮಂಜುನಾಥ್ ರಾಜಕೀಯ ಏಳಿಗೆಗೆ ಕಾಂಗ್ರೆಸ್ ಮುಖಂಡರ ಕೊಡುಗೆಯೂ ಇದೆ. ಆದರೆ, ಅವರು ನಾನೊಬ್ಬನೆ ಏಕಾಂಗಿ ನಾಯಕನಾದೆ ಎಂಬ ಭ್ರಮೆಯಲ್ಲಿದ್ದಾರೆ. ಈಗ ನಿಮ್ಮ ಹಿಂದೆ ಬೆರಳಣಿಕೆಯಷ್ಟು ಕಾರ್ಯಕರ್ತರು ಮಾತ್ರ ಇದ್ದು, ಅವರನ್ನಾದರು ಉಳಿಸಿಕೊಳ್ಳಿ. ಕಾಂಗ್ರೆಸ್ ಮುಖಂಡರ ಜೊತೆಗೆ ಜೆಡಿಎಸ್ ಕಾರ್ಯಕರ್ತರ ಬಳಿ ಪಡೆದಿರುವ ಹಣವಾದರು ಹಿಂದಿರುಗಿಸಿ ಸಾಕು.

-ಗಾಣಕಲ್ ನಟರಾಜ್, ಅಧ್ಯಕ್ಷರು, ಜಿಬಿಡಿಎ

3ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಶೇಖರ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಗಂಗಾಧರ್‌ ಇತರರಿದ್ದರು.