ಮಹನೀಯರ ಆದರ್ಶ ಮೈಗೂಡಿಸಿಕೊಳ್ಳೋಣ: ಬಿ.ಟಿ. ಲಲಿತಾ ನಾಯ್ಕ

| Published : Mar 01 2024, 02:18 AM IST

ಮಹನೀಯರ ಆದರ್ಶ ಮೈಗೂಡಿಸಿಕೊಳ್ಳೋಣ: ಬಿ.ಟಿ. ಲಲಿತಾ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವಣ್ಣನವರು ಪ್ರಸಾದದ ಮಹತ್ವ ಸಾರಿದ್ದಾರೆ. ಕಾಯಕದ ಮಹತ್ವ ತಿಳಿಸಿದ್ದಾರೆ. ಹಾಗೆಯೇ ಸೇವಾಲಾಲ್‌ ಅವರು ಕೂಡ ಕಾಯಕದಿಂದ ಬದುಕು ಕಟ್ಟಿಕೊಳ್ಳುವುದನ್ನು ತಿಳಿಯಪಡಿಸಿದ್ದಾರೆ.

ಹೊಸಪೇಟೆ: ಮಾನವನಲ್ಲಿರುವ ಮೃಗತ್ವವನ್ನು ಬದಿಗಿಟ್ಟು ಮನುಷ್ಯತ್ವ ಬೆಳೆಸಿಕೊಂಡಾಗ ಈ ಜಗತ್ತು ಸುಂದರವಾಗಿ ಕಾಣುತ್ತದೆ. ಹಾಗಾಗಿ ನಾವು ಉತ್ತಮ ದೇಶ ನಿರ್ಮಾಣಕ್ಕಾಗಿ ಗೌತಮ ಬುದ್ಧ, ವಿಶ್ವಗುರು ಬಸವಣ್ಣ, ಸೇವಾಲಾಲ್‌ ಮಹಾರಾಜ ಮತ್ತು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಸಚಿವೆ ಹಾಗೂ ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಸೇವಾ ಸಂಘದ ರಾಜ್ಯಾಧ್ಯಕ್ಷೆ ಬಿ.ಟಿ. ಲಲಿತಾ ನಾಯ್ಕ ತಿಳಿಸಿದರು.

ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಸೇವಾ ಸಂಘದ ವಿಜಯನಗರ ಜಿಲ್ಲಾ ಘಟಕ ಹಾಗೂ ತಾಂಡಾ ಅಭಿವೃದ್ಧಿ ನಿಗಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಗುರುವಾರ ನಡೆದ ಸಂತ ಸೇವಾಲಾಲ್‌ ಮಹಾರಾಜರ 285ನೇ ಜಯಂತ್ಯುತ್ಸವ ಹಾಗೂ ಬಂಜಾರ(ಲಂಬಾಣಿ) ಸಮಾಜದ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಸೇವಾಲಾಲ್‌ ಅವರು ಬಂಜಾರರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೀದ್ದೇವೆ. ಬಂಜಾರ ಸಮಾಜ ಎಲ್ಲ ರಂಗಗಳಲ್ಲಿ ಮುಂದುವರಿಯಲು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದ ಕೃಪೆಯೂ ಇದೆ. ಹಾಗಾಗಿ ನಾವು ಸೇವಾಲಾಲ್‌ ಅವರಷ್ಟೇ, ಬಾಬಾ ಸಾಹೇಬ್‌ ಅವರಿಗೂ ಗೌರವ, ಪೂಜ್ಯ ಭಾವನೆಯಿಂದ ಕಾಣುತ್ತೇವೆ ಎಂದರು.

ಮಾಧ್ಯಮಗಳ ಸಣ್ಣತನ: ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ನಾಸೀರ್‌ ಹುಸೇನ್‌ ಅವರು ಗೆಲುವು ಸಾಧಿಸಿದಾಗ ಅವರ ಬೆಂಬಲಿಗರು, ನಾಸೀರ್‌ ಹುಸೇನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿರುವುದನ್ನೇ ಮಾಧ್ಯಮಗಳು ತಿರುಚಿವೆ. ಪಾಕಿಸ್ತಾನ್‌ ಜಿಂದಾಬಾದ್ ಎಂದು ಕೂಗಿವೆ ಎಂದು ಮಾಧ್ಯಮಗಳು ಸಣ್ಣತನ ತೋರ್ಪಡಿಸಿವೆ. ಕೆಲವರು ಮನೆ ಮುರುಕರು ಎಲ್ಲೆಡೆ ಇರುತ್ತಾರೆ. ದೇಶ ಮುರಿಯುವ ಕೆಲಸವೂ ಮಾಡುತ್ತಾರೆ. ಆದರೆ, ನಾವು ದೇಶ ಕಟ್ಟುವ ಕೆಲಸ ಮಾಡಬೇಕು. ಕಟ್ಟುವೇವು ನಾವು, ಕಟ್ಟೇ ಕಟ್ಟುತ್ತೇವೆ ಎಂದು ಸಾಮರಸ್ಯದೊಂದಿಗೆ ಮುನ್ನಡೆಯಬೇಕು ಎಂದರು.

ವಿಶ್ವಗುರು ಬಸವಣ್ಣನವರು ಪ್ರಸಾದದ ಮಹತ್ವ ಸಾರಿದ್ದಾರೆ. ಕಾಯಕದ ಮಹತ್ವ ತಿಳಿಸಿದ್ದಾರೆ. ಹಾಗೆಯೇ ಸೇವಾಲಾಲ್‌ ಅವರು ಕೂಡ ಕಾಯಕದಿಂದ ಬದುಕು ಕಟ್ಟಿಕೊಳ್ಳುವುದನ್ನು ತಿಳಿಯಪಡಿಸಿದ್ದಾರೆ. ನಾವು ಬರೀ ಪೂಜೆಗೆ ಸೀಮಿತಗೊಳ್ಳದೇ ಭಕ್ತಿಯ ಜತೆಗೆ ಕಾಯಕವನ್ನು ಮಾಡಬೇಕು. ಕಾಯಕದಿಂದ ದೇಶ ಉದ್ಧಾರವಾಗಲಿದೆ. ಬರೀ ಪೂಜೆಯಿಂದ ದೇಶ ಉದ್ಧಾರ ಆಗಲ್ಲ ಎಂಬುದನ್ನು ಮನಗಾಣಬೇಕು ಎಂದರು.

ಈ ಭಾಗದಲ್ಲಿ ಗುಳೆ ಹೋಗುವವರ ಮಕ್ಕಳಿಗಾಗಿ ಶಿವಪ್ರಕಾಶ ಮಹಾರಾಜ ಅವರು ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ ಎಂದು ಹೊರಟಿದ್ದಾರೆ. ಇದು ಉತ್ತಮ ಕಾರ್ಯವಾಗಿದೆ. ನಾವು ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ. ದಾವಣಗೆರೆಯ ಸೂರಗೊಂಡನಕೊಪ್ಪದಲ್ಲಿ ಬರೀ ಪೂಜಾರಿಗಳೇ ಹೆಚ್ಚಾಗಿದ್ದಾರೆ. ಭಕ್ತಿಯ ಜತೆಗೆ ವಿದ್ಯೆಯೂ ದೊರೆಯಬೇಕು. ಈ ಕಾರ್ಯವನ್ನುಮಾಡಬೇಕು ಎಂದರು.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿಕರಿಗೂ ಮಹತ್ವ ನೀಡುವ ಕೆಲಸ ಆಗಬೇಕು. ಜಗತ್ತಿನಲ್ಲಿ ಎಲ್ಲರೂ ಸಮಾನರು ಎಂದು ಮಹನೀಯರು ಸಾರಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದರು.

ಶಾಸಕರು ಸೇವಕರು: ಶಾಸಕರು, ಮಂತ್ರಿಗಳು ಜನ ಸೇವಕರಾಗಿದ್ದಾರೆ. ಇವರು ರಾಜರು ಎಂದು ಭಾವಿಸಿಕೊಳ್ಳಬಾರದು. ದಿನದ 24 ತಾಸೂ ಕೆಲಸ ಮಾಡಬೇಕು. ಗೆದ್ದ ಬಳಿಕ ಜನರ ಕೆಲಸ ಮಾಡದೇ ಹೋದರೆ ಅವರು ಶಾಸಕರು, ಮಂತ್ರಿಗಳು ಎನಿಸಿಕೊಳ್ಳಲ್ಲ. ಜನ ಕಲ್ಯಾಣವೇ ಜನಪ್ರತಿನಿಧಿಗಳಿಗೆ ಮುಖ್ಯ ಎಂದರು.

ಕೊಟ್ಟೂರಿನ ಬಂಜಾರ ಶ್ರೀಪೀಠದ ಶಿವಪ್ರಕಾಶ ಮಹಾರಾಜ, ರಾಮಕೃಷ್ಣ ಆಶ್ರಮ ರಾರಾಳ ತಾಂಡಾದ ವಿಷ್ಣುಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಡಿ. ಲಾಲ್ಯಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷ ಮಧುನಾಯ್ಕ ಲಂಬಾಣಿ ಸೇವಾಲಾಲ್‌ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಗಾಯಕರಾದ ಸಾವಿತ್ರಿಬಾಯಿ, ಉಮೇಶ್‌ ನಾಯ್ಕ, ವಾಲ್ಯಾ ನಾಯ್ಕ, ಯಲ್ಲಪ್ಪ ಭಂಡಾರಧಾರ್‌, ಮುಖಂಡರಾದ ಡಿ. ವೆಂಕಟರಮಣ, ಪಂಪಾಪತಿ, ರಾಮಜೀ ನಾಯ್ಕ, ಕುಮಾರ ನಾಯ್ಕ, ಹನುಮನಾಯ್ಕ, ಹೀರ್ಯಾ ನಾಯ್ಕ, ರಾಮ ನಾಯ್ಕ, ಗಜಾನಂದ ನಾಯ್ಕ, ಪೂಜಾರಿ ಗೋವಿಂದ ನಾಯ್ಕ ಮತ್ತಿತರರಿದ್ದರು. ಶಿಕ್ಷಕರಾದ ಎಲ್‌. ಹಾಲ್ಯಾ ನಾಯ್ಕ, ನಾಗರತ್ನಮ್ಮ ನಿರ್ವಹಿಸಿದರು.

ಭವ್ಯ ಮೆರವಣಿಗೆ: ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದಿಂದ ಸೇವಾಲಾಲ್‌ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಬಂಜಾರ ಹಾಡುಗಳಿಗೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು. ಉಟೇ, ಉಟೇ ಸುಶೀಲಾ ಬೋಡಿ, ನಾಚರಿಚ ಛೋರಿ ನಾಚರಿಚ ಸೇರಿದಂತೆ ಸೇವಾಲಾಲ್‌ ಮಹಾರಾಜರ ಕುರಿತ ಹಾಡುಗಳಿಗೆ ಹೆಜ್ಜೆ ಹಾಕಿದರು. ಗೌರಿ ಸಸಿಯೊಂದಿಗೆ ಯುವತಿಯರು ಮೆರವಣಿಗೆಯಲ್ಲಿ ಸಾಗಿದರು.