ಸಾರಾಂಶ
ಹಣದ ಮಾಫಿಯಾ ಅಥವಾ ಬೆದರಿಕೆಯ ಮಾಫಿಯಾಕ್ಕೆ ಬಗ್ಗಬಾರದು. ಶರಾವತಿ ಉಳಿಸುವುದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ.
ಹೊನ್ನಾವರ: ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆಯಿಂದ ಹಾನಿಯೆ ಹೊರತು ಲಾಭ ಇಲ್ಲ. ಶರಾವತಿ ಉಳಿವಿಗಾಗಿ ಎಲ್ಲರೂ ಹೋರಾಡಬೇಕು ಎಂದು ಶಿವಮೊಗ್ಗದ ಶರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಅಖಿಲೇಶ್ ಚಿಪಗಿ ಮನವಿ ಮಾಡಿದರು.
ಪಟ್ಟಣದ ಸೋಷಿಯಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಶರಾವತಿ ಉಳಿಸಿ ಹೋರಾಟ ಸಮಿತಿ ಮತ್ತು ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಮತ್ತು ವಿವಿಧ ಸಂಘಟನೆಗಳ, ಪ್ರಮುಖರ ಪಕ್ಷಾತೀತ ತುರ್ತು ಸಭೆಯಲ್ಲಿ ಮಾತನಾಡಿ, ಶರಾವತಿ ಕಣಿವೆ ಮೇಲೆ ದೊಡ್ಡ ದೌರ್ಜನ್ಯ ನಡೆಯುತ್ತಿದೆ. ಇದು ದೇಶದ ಆಸ್ತಿ. ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.ಕೆಲವರು ಯೋಜನೆಯ ಪರಿಣಾಮ ಫಲಿತಾಂಶ ಮಾಡದೆ ಸಮುದ್ರಕ್ಕೆ ಸೇರಿ ನೀರು ವ್ಯರ್ಥವಾಗುತ್ತದೆ ಎನ್ನುತ್ತಾರೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರ ಜೀವನಾಡಿ ಶರಾವತಿಯನ್ನು ಅಪಹರಣ ಮಾಡಲು ಹೊರಟಿದ್ದಾರೆ. ಸರ್ಕಾರದ ಬೇಜವಾಬ್ದಾರಿ ನಡೆ ಅಧಿಕಾರಿಗಳ ಅವಿವೇಕಿತನದ ವರ್ತನೆಯಿಂದ ಅವೈಜ್ಞಾನಿಕ ಯೋಜನೆ ಜಾರಿಗೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ಯೋಜನೆಯಿಂದ ಹೆಚ್ಚಾಗಿ ಹೊನ್ನಾವರದ ಮೇಲೆ ಪರಿಣಾಮ ಬೀರುತ್ತದೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಜನರು ಪಕ್ಷಾತೀತ, ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಶರಾವತಿ ಉಳಿಸಬಹುದು. ಹೋರಾಟ ಬಂದಾಗ ಭಿನ್ನ ಧ್ವನಿ ಇರಬಾರದು. ಹಣದ ಮಾಫಿಯಾ ಅಥವಾ ಬೆದರಿಕೆಯ ಮಾಫಿಯಾಕ್ಕೆ ಬಗ್ಗಬಾರದು. ಶರಾವತಿ ಉಳಿಸುವುದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದರು.ಹೊನ್ನಾವರದ ಶರಾವತಿ ಉಳಿಸಿ ಹೋರಾಟ ಸಮಿತಿಯ ಚಂದ್ರಕಾಂತ ಕೊಚರೆಕರ್ ಮಾತನಾಡಿ, ಸಂಘಟಿತ ಪ್ರಯತ್ನದ ಮೂಲಕ ಇನ್ನಷ್ಟು ಜಾಗೃತಿ ಮೂಡಿಸಿ ಯೋಜನೆಯ ವಿರುದ್ಧ ಹೋರಾಡೋಣ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಯ ನೀರನ್ನು ಪೂರ್ವಾಭಿಮುಖವಾಗಿ ತೆಗೆದುಕೊಂಡು ಹೋಗಬಾರದು. 30 ಟಿಎಂಸಿ ನೀರನ್ನು 3 ಸಾವಿರ ಅಡಿ ಎತ್ತರಕ್ಕೆತ್ತಿ ಗುಡ್ಡಗಾಡು, ಕಣಿವೆಗಳನ್ನು ಅಗೆದು ಪೈಪ್‌ಲೈನ್ ಮಾಡಬೇಕಾಗುತ್ತದೆ. ಇದು ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಸಮುದ್ರದ ನೀರು ಹಿಂದಕ್ಕೆ ಬರುವುದರಿಂದ ರೈತರ ಹೊಲಗದ್ದೆಗಳು ಹಾಳಾಗುತ್ತದೆ. ಇದು ಕಾರ್ಯಸಾಧು ಯೋಜನೆಯಲ್ಲ. ಇದನ್ನು ತಡೆಯಲು ಮಲೆನಾಡಿನ ಜನ ಪಕ್ಷಾತೀತವಾಗಿ ಕೈಜೋಡಿಸಬೇಕೆಂದರು. ಹೊನ್ನಾವರ ಶರಾವತಿ ಉಳಿಸಿ ಹೋರಾಟ ಸಮಿತಿಯ ಯೋಗೇಶ ರಾಯ್ಕರ ಉಪ್ಪೋಣಿ, ವಿನೋದ ನಾಯ್ಕ ಮಾವಿನಹೊಳೆ, ವಿದ್ಯುತ್ ಶಕ್ತಿ ಸಲಹೆಗಾರ ಶಂಕರ ಶರ್ಮ, ಉಮಾ ಮಹೇಶ, ಎಸ್.ಡಿ. ಹೆಗಡೆ, ಎನ್.ಎಸ್. ಹೆಗಡೆ ಉಪಸ್ಥಿತರಿದ್ದರು.