ಅಭಿಪ್ರಾಯ ಭೇದ ಮರೆತು ಸದೃಢ ಸಹಕಾರ ಕ್ಷೇತ್ರ ಕಟ್ಟೋಣ

| Published : Nov 21 2024, 01:00 AM IST

ಸಾರಾಂಶ

ಹೊಸನಗರ: ದೇಶದಲ್ಲಿ ಇಂದು ಬ್ಯಾಂಕಿಂಗ್ ಕ್ಷೇತ್ರ ದೊಡ್ಡ ಮಟ್ಟದಲ್ಲಿ ವಿಸ್ತರಣೆಗೊಂಡರೂ ಅವುಗಳಿಗೆ ಸವಾಲೆಸೆಯುವ ರೀತಿಯಲ್ಲಿ ಸಹಕಾರಿ ಕ್ಷೇತ್ರ ಬೆಳೆದಿದೆ. ಸಹಕಾರಿ ರಂಗ ಗ್ರಾಮೀಣ ಜನರ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದು, ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ ಹೇಳಿದರು.

ಹೊಸನಗರ: ದೇಶದಲ್ಲಿ ಇಂದು ಬ್ಯಾಂಕಿಂಗ್ ಕ್ಷೇತ್ರ ದೊಡ್ಡ ಮಟ್ಟದಲ್ಲಿ ವಿಸ್ತರಣೆಗೊಂಡರೂ ಅವುಗಳಿಗೆ ಸವಾಲೆಸೆಯುವ ರೀತಿಯಲ್ಲಿ ಸಹಕಾರಿ ಕ್ಷೇತ್ರ ಬೆಳೆದಿದೆ. ಸಹಕಾರಿ ರಂಗ ಗ್ರಾಮೀಣ ಜನರ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದು, ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ ಹೇಳಿದರು.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಎಸ್‌ಡಿಸಿಸಿ ಬ್ಯಾಂಕ್, ಶಿಮುಲ್, ಸಹಕಾರ ಇಲಾಖೆ ಹಾಗೂ ತಾಲೂಕಿನ ಎಲ್ಲಾ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳ ಸಹಯೋಗದಲ್ಲಿ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ 8.10 ಲಕ್ಷ ಸಹಕಾರಿ ಸಂಘಗಳಿವೆ. 30 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ಇಫ್ಕೋ, ಕ್ರಿಫ್ಕೋ, ಅಮೂಲ್ ಸೇರಿದಂತೆ ವಿವಿಧ ಸಹಕಾರಿ ಸಂಘಗಳಿಂದ ಸುಮಾರು 3 ಕೋಟಿ ನೇರ ಉದ್ಯೋಗ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಸುಮಾರು 35 ಸಾವಿರ ಸಹಕಾರಿ ಸಂಘಗಳಿದ್ದು ಸಾವಿರಾರು ಉದ್ಯೋಗ ಸೃಷ್ಟಿಸಿವೆ. ಇದು ಯಾವೊಂದು ಚುನಾಯಿತ ಸರಕಾರದಿಂದ ಸಾಧ್ಯವೆ ? ಎಂದರು.ಪ್ರಜಾಪ್ರಭುತ್ವದ ಸ್ಥಂಭಗಳಲ್ಲಿ ಒಂದಾದ ಸಹಕಾರ ಚಳವಳಿಯು ರಾಜಕೀಯದ ಸಹಕಾರವಾಗಬಾರದು. ಅದು ಸಾಮುದಾಯಿಕ, ನಿಸ್ಪಕ್ಷಪಾತ, ನಿರ್ವಂಚನೆಯ, ಸ್ವಹಿತಾಸಕ್ತಿರಹಿತ, ಪಾರದರ್ಶಕತೆಯ ಮೌಲ್ಯಗಳಿಂದ ಕೂಡಿರಬೇಕು. ಸಹಕಾರಿ ಕ್ಷೇತ್ರದಲ್ಲಿ ಜಾತಿ, ಪಕ್ಷ, ಲಿಂಗಭೇದ ಮರೆತು ಕಾರ್ಯ ನಿರ್ವಹಿಸಿದಲ್ಲಿ ಮಾತ್ರವೇ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ ಎಂದರು.ವಿಧಾನ ಪರಿಷತ್ತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿ ಕ್ಷೇತ್ರ ಮಹತ್ವದ ಕೊಡುಗೆ ನೀಡುವ ಮೂಲಕ ಆರ್ಥಿಕ, ಸಾಮಾಜಿಕ ಪ್ರಗತಿಗೆ ಸಹಕಾರಿಯಾಗಿದೆ. ದೇಶದ ಪ್ರಗತಿಯಲ್ಲಿ ಮಹಿಳೆಯರು ಹಾಗೂ ಯುವಕರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕವಾಗಿ ಪ್ರಗತಿ ಕಂಡು ಸಹಕಾರ ಕ್ಷೇತ್ರದ ಚುಕ್ಕಾಣಿ ಹಿಡಿಯಬೇಕು ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕ ಎಂ.ಎಂ.ಪರಮೇಶ್, ಜಿ.ಎನ್.ಸುಧೀರ್, ವೃತ್ತಿಪರ ನಿರ್ದೇಶಕ ಮಧುಸೂಧನ್ ನಾವಡ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಎಂ.ವಿ.ಜಯರಾಮ್, ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ನಿರ್ದೇಶಕ ಹರತಾಳು ನಾಗರಾಜ್, ಮ್ಯಾಟ್‌ಕೋಸ್ ಅಧ್ಯಕ್ಷ ನಂಜುಂಡಪ್ಪ, ವೀರಶೈವ ಪತ್ತಿನ ಸಹಕಾರ ಸಂಘದ ಈಶ್ವರಪ್ಪಗೌಡ ಮತ್ತಿತರರಿದ್ದರು.